ಕೊರೋನಾ 2ನೇ ಅಲೆಯ ಹೊಡೆತಕ್ಕೆ ತತ್ತರಿಸಿದ ಶಿಕ್ಷಕರು

By Kannadaprabha News  |  First Published May 23, 2021, 7:12 AM IST

* ಧಾರವಾಡ ಜಿಲ್ಲೆಯ 16 ಶಿಕ್ಷಕರು ಕೋವಿಡ್‌ಗೆ ಬಲಿ
* ಆಸ್ಪತ್ರೆಯಲ್ಲಿ 12 ಜನ, ಒಟ್ಟು 29 ಶಿಕ್ಷಕರಿಗೆ ಕೋವಿಡ್‌ ಪಾಸಿಟಿವ್‌
* ಸೋಂಕಿತ ಶಿಕ್ಷಕರಿಗೆ ಧೈರ್ಯ ತುಂಬುತ್ತಿರುವ ಅಧಿಕಾರಿಗಳು
 


ಬಸವರಾಜ ಹಿರೇಮಠ

ಧಾರವಾಡ(ಮೇ.23): ಕೋವಿಡ್‌-19 2ನೇ ಅಲೆಯ ಹೊಡೆತಕ್ಕೆ ಶಿಕ್ಷಣ ಕ್ಷೇತ್ರ ಸಹ ನಲುಗಿ ಹೋಗಿದೆ. ಹೆಚ್ಚುತ್ತಿರುವ ಕೋವಿಡ್‌ ಪ್ರಭಾವದಿಂದ ಶಾಲೆಗಳಿಗೆ ಸಂಪೂರ್ಣ ರಜೆ ಘೋಷಿಸಲಾಗಿದೆ. ಇಷ್ಟಾಗಿಯೂ ಶಿಕ್ಷಕರಿಗೆ ಕೋವಿಡ್‌ ಹೆಮ್ಮಾರಿ ಬಿಟ್ಟು ಬಿಡದೇ ಕಾಡುತ್ತಿದೆ. ಶಿಕ್ಷಕರು ಕೋವಿಡ್‌ ವೈರಸ್‌ ಪ್ರಭಾವದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

Tap to resize

Latest Videos

undefined

ಏಪ್ರಿಲ್‌ ಹಾಗೂ ಮೇ ತಿಂಗಳ ಅವಧಿಯಲ್ಲಿ ಜಿಲ್ಲೆಯ 12 ಸರ್ಕಾರಿ, ಮೂವರು ಅನುದಾನಿತ ಹಾಗೂ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಸೇರಿ 16 ಶಿಕ್ಷಕರು ಕೋವಿಡ್‌ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದು ದುರಂತವೇ ಸರಿ. ಅಲ್ಲದೇ, 2ನೇ ಅಲೆಯಲ್ಲಿ 29 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 11 ಜನ ಗುಣಮುಖರಾಗಿದ್ದಾರೆ. ಆರು ಶಿಕ್ಷಕರು ಹೋಂ ಐಸೋಲೇಶನ್‌ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದ 12 ಶಿಕ್ಷಕರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.

"

ಮೃತಪಟ್ಟ ಶಿಕ್ಷಕರೆಲ್ಲರೂ ಉತ್ತಮ ಹೆಸರು ಪಡೆದವರೇ. ಅದರಲ್ಲೂ ಗಳಗಿ ಹುಲಕೊಪ್ಪದಲ್ಲಿ ಶಿಕ್ಷಕರಾಗಿದ್ದ ಸಂಜೀವ ಕಾಳೆ ಅದ್ಭುತ ಕಲಾವಿದರು. ಹಾಗೆಯೇ ಕುರುವಿನಕೊಪ್ಪದ ಕುಮಾರಸ್ವಾಮಿ ಮಠದ ಸಂಪನ್ಮೂಲ ವ್ಯಕ್ತಿ. ಒಬ್ಬರು ಕಲಾವಿದರು ಇನ್ನೊಬ್ಬರು ತುಂಬ ಕ್ರಿಯಾಶೀಲ ಶಿಕ್ಷಕರಾಗಿದ್ದು, ಇವರೆಲ್ಲರ ನಿಧನ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ದುಃಖ ಹಂಚಿಕೊಂಡರು.

ಖಾಸಗಿ ಶಾಲಾ ಶಿಕ್ಷಕರಿಗೂ ಪ್ಯಾಕೇಜ್‌ ನೀಡಿ: ಸಿಎಂಗೆ ಹೊರಟ್ಟಿ ಪತ್ರ

ಜಿಲ್ಲೆಯ ಶಿಕ್ಷಕ ವಲಯಕ್ಕೆ ಹಬ್ಬಿರುವ ಕೋವಿಡ್‌ ಸೋಂಕಿನಿಂದಾಗಿ ಸೋಂಕಿತ ಶಿಕ್ಷಕರು, ಅವರ ಕುಟುಂಬದ ಸದಸ್ಯರಲ್ಲದೇ ಉಳಿದ ಶಿಕ್ಷಕರು ಹಾಗೂ ಅವರ ಕುಟುಂಬಗಳು ತೀವ್ರ ಆತಂಕದಲ್ಲಿವೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೋಂಕಿತರು ಸೇರಿದಂತೆ ಶಿಕ್ಷಕರೊಂದಿಗೆ ದೂರವಾಣಿ ಹಾಗೂ ಗೂಗಲ್‌ ಮೀಟ್‌ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಡಿಡಿಪಿಐ ಮೋಹನ ಹಂಚಾಟೆ, ಕೋವಿಡ್‌ ಸೋಂಕಿನಿಂದ 16 ಶಿಕ್ಷಕರ ಕಳೆದುಕೊಂಡಿದ್ದು ಬೇಸರ ಮೂಡಿಸಿದೆ. ಇದೀಗ ಸೋಂಕಿತ ಶಿಕ್ಷಕರಿಗೆ ಸ್ವತಃ ದೂರವಾಣಿ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಜತೆಗೆ ಗೂಗಲ್‌ ಮೀಟ್‌ ಮೂಲಕ ಶಿಕ್ಷಕರಿಗೆ ಎಚ್ಚರಿಕೆ ಕ್ರಮಗಳನ್ನು ವಹಿಸುವ ಸೂಚನೆ ಸಹ ನೀಡಲಾಗಿದೆ. ಸೋಂಕಿನ ಲಕ್ಷಣಗಳಿರುವ ಶಿಕ್ಷಕರಿಗೆ, ಆಸ್ಪತ್ರೆಗೆ ದಾಖಲಾಗುವ ಶಿಕ್ಷಕರಿಗೆ ಅಗತ್ಯ ಬೆಡ್‌, ಆಕ್ಸಿಜನ್‌ ವ್ಯವಸ್ಥೆ ಸಹ ಇಲಾಖೆಯಿಂದ ನೇತೃತ್ವ ವಹಿಸಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸೌಲಭ್ಯಗಳಿಲ್ಲದೇ ಶಿಕ್ಷಕರು ಪರದಾಡದಂತೆ ಎಚ್ಚರ ವಹಿಸಿದ್ದೇವೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೂ ಅಂಟಿದ ಕೋವಿಡ್‌...

ಬರೀ ಶಾಲಾ ಶಿಕ್ಷಕರು ಮಾತ್ರವಲ್ಲದೇ ಕಾಲೇಜು ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರು ಸಹ ಕೋವಿಡ್‌ಗೆ ಬಲಿಯಾಗಿದ್ದಾರೆ. ಶನಿವಾರವಷ್ಟೇ ಅಳ್ನಾವರದ ನ್ಯೂ ಇಂಗ್ಲಿಷ್‌ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ರಾಮದಾಸ್‌ ಜಾಧವ ಮೃತರಾಗಿದ್ದಾರೆ. ಅಲ್ಲದೇ ಕಳೆದ ಕೆಲವು ದಿನಗಳ ಹಿಂದಷ್ಟೇ ಕೋವಿಡ್‌ಗೆ ಕರ್ನಾಟಕ ವಿವಿ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್‌.ಐ. ಬಿರಾದಾರ ಮೃತಪಟ್ಟಿದ್ದನ್ನು ಸ್ಮರಿಸಬಹುದು.

ಕೋವಿಡ್‌ ಸೋಂಕಿನಿಂದ ಮೃತಪಟ್ಟಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯಗಳು ಶೀಘ್ರ ನೀಡಬೇಕು ಹಾಗೂ ಕೋವಿಡ್‌ ಕಾರ್ಯದಲ್ಲಿರುವ ಶಿಕ್ಷಕರಿಗೆ ರಕ್ಷಣಾ ಪರಿಕರ ನೀಡಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಜತೆಗೆ ಮೃತಪಟ್ಟಶಿಕ್ಷಕರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಶೀಘ್ರ ನೌಕರಿ ನೀಡಲು ಸಹ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಕೋವಿಡ್‌ಗೆ ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಸಾಂತ್ವನ ಪತ್ರ ಕಳುಹಿಸಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಪೊ. ಎಸ್‌.ವಿ. ಸಂಕನೂರ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!