ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಮಾದರಿ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅದನ್ನು ಪ್ರಶ್ನಿಸಿ ಕನ್ನಡ ಭಾಷಾ ಕಲಿಕೆ ಸಂವಿಧಾನ ಬಾಹಿರ ಎಂದು ವಾದಿಸುತ್ತಿರುವುದು ನಿಜಕ್ಕೂ ಆತಂಕದ ವಿಚಾರ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಸಮರ್ಥವಾದ ಪ್ರತಿವಾದ ಮಂಡಿಸಬೇಕಾಗಿದೆ.
ಬೆಂಗಳೂರು(ಆ.07): ಕರ್ನಾಟಕದೊಳಗಿನ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ರಾಜ್ಯ ಭಾಷೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಪ್ರಶ್ನಿಸಿ ಪದೇ ಪದೇ ಕಾನೂನು ಹೋರಾಟಕ್ಕೆ ಮುಂದಾಗುವ ಪ್ರವೃತ್ತಿ ಹೊರ ರಾಜ್ಯಗಳ ಪೋಷಕರಲ್ಲಿ ಹೆಚ್ಚುತ್ತಿದೆ. ಇದನ್ನು ಕಾನೂನಾತ್ಮಕವಾಗಿಯೇ ಸಮರ್ಥವಾಗಿ ನಿಭಾಯಿಸಿ ಕನ್ನಡದ ಅಸ್ಮಿತೆ ಕಾಪಾಡಲು ರಾಜ್ಯ ಸರ್ಕಾರ ಹಿಂದೆಂದಿಗಿಂತಲೂ ಹೆಚ್ಚಿನ ಬದ್ಧತೆ ತೋರಬೇಕು ಎಂಬ ಆಗ್ರಹ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಹಾಗೂ ಸಾಹಿತಿಗಳಿಂದ ವ್ಯಕ್ತವಾಗುತ್ತಿದೆ.
ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಮಾದರಿ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದ್ದರೂ ಅದನ್ನು ಪ್ರಶ್ನಿಸಿ ಕನ್ನಡ ಭಾಷಾ ಕಲಿಕೆ ಸಂವಿಧಾನ ಬಾಹಿರ ಎಂದು ವಾದಿಸುತ್ತಿರುವುದು ನಿಜಕ್ಕೂ ಆತಂಕದ ವಿಚಾರ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಸಮರ್ಥವಾದ ಪ್ರತಿವಾದ ಮಂಡಿಸಬೇಕಾಗಿದೆ.
ಹೊರ ರಾಜ್ಯದ ಮಕ್ಕಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದು ಸಂವಿಧಾನ ಬಾಹಿರ ಎನ್ನುವುದಾದರೆ, ರಾಜ್ಯದ ಮಕ್ಕಳಿಗೆ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ ಹೇರುತ್ತಿರುವುದನ್ನು ನಾವೂ ಸಂವಿಧಾನಬಾಹಿರ ಎನ್ನಬಹುದೇ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ನೆಲ, ಜಲ, ಇಲ್ಲಿನ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ನಡೆಯುತ್ತಿರುವ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಕೂಡ ಪೋಷಕರನ್ನು ಮುಂದಿಟ್ಟುಕೊಂಡು ಕನ್ನಡ ಕಲಿಕೆ ತಡೆಯುವ ಪಿತೂರಿ ನಡೆಸುತ್ತಿರುವುದು ಗಂಭೀರವಾದ ವಿಚಾರ. ಇದನ್ನೆಲ್ಲಾ ಸಮರ್ಥವಾಗಿ ನಿಭಾಯಿಸಲು ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಇರುವ ಕಾನೂನುಗಳನ್ನು ಎತ್ತಿಹಿಡಿಯುವಂತೆ ಮಾಡಬೇಕು. ಜೊತೆಗೆ ಕಾನೂನುಗಳನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಇಚ್ಛಾಶಕ್ತಿ ತೋರಬೇಕಿದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು, ನಾಡಿನ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು.
undefined
ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಶಾಸನಸಭೆಗಳಿಗೆ ಬೆಲೆ ಇಲ್ಲವೆ:
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹಿರಿಯ ಸಾಹಿತಿ, ವಿಮರ್ಶಕ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲಿಸಲು ಸರ್ಕಾರ ರೂಪಿಸಿರುವ ಕಾಯ್ದೆಯನ್ನೂ ಪ್ರಶ್ನಿಸುವುದಾದರೆ ಶಾಸನ ಸಭೆಗಳಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ವಿಚಾರದಲ್ಲಿ ಪೋಷಕರು, ಶಾಲೆಗಳ ಪ್ರವೃತ್ತಿ ಸರಿಯಲ್ಲ. ಒಂದು ರಾಜ್ಯದಲ್ಲಿದ್ದವರು ಅಲ್ಲಿನ ಸ್ಥಳೀಯ ಅಥವಾ ರಾಜ್ಯ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತಾಗಬೇಕೆನ್ನುವುದು ನನ್ನ ಸ್ಪಷ್ಟಅಭಿಪ್ರಾಯ. ಆದರೂ, ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಏನು ತೀರ್ಪು ಬರುತ್ತದೆ ಕಾದು ನೋಡಬೇಕಾಗುತ್ತದೆ. ನಮ್ಮ ಸರ್ಕಾರ ಕೂಡ ಸಮರ್ಥವಾಗಿ ವಾದ ಮಂಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಇನ್ನು ಸಿಬಿಎಸ್‌ಇ ಶಿಕ್ಷಣ
ಆರ್‌ಟಿಇ ಕಾಯ್ದೆ ತಿದ್ದುಪಡಿ ಆಗಬೇಕು:
ಶಾಲೆಗಳು, ಪೋಷಕರಿಂದ ಇಂತಹ ಪ್ರವೃತ್ತಿಗಳು ಹೆಚ್ಚಾಗಲು ಸರ್ಕಾರದ ತಪ್ಪುಗಳೂ ಇವೆ. ಕನ್ನಡ ಕಡ್ಡಾಯ ಕಲಿಕಾ ಅಧಿನಿಯಮದ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಈ ಹಿಂದೆ ಸಮಿತಿಯೊಂದನ್ನು ರಚಿಸಿದರೂ ಅದು ಕಾರ್ಯನಿರ್ವಹಿಸುತ್ತಿಲ್ಲ. ಇನ್ನು, ಶಿಕ್ಷಣ ಹಕ್ಕು ಕಾಯ್ದೆಯಲ್ಲೂ ಸ್ಥಳೀಯ ಭಾಷೆಯ ಕಡ್ಡಾಯ ಕಲಿಕೆಗೆ ಅವಕಾಶ ಕಲ್ಪಿಸಲು ಸೆಕ್ಷನ್ 29(2) ಎಫ್‌ಗೆ ತಿದ್ದುಪಡಿ ತರಲು ಕರ್ನಾಟಕ ಸೇರಿ ವಿವಿಧ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿವೆ. ಆದರೆ, ಈ ಶಿಫಾರಸನ್ನು ತಿದ್ದುಪಡಿ ಮೂಲಕ ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಆಗಿಲ್ಲ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳುತ್ತಾರೆ.
ಶಿಕ್ಷಣದ ಖಾಸಗೀಕರಣವೇ ರಾಜ್ಯ ಭಾಷೆಯ ಕಡ್ಡಾಯ ಕಲಿಕೆಗೆ ದೊಡ್ಡ ಶತ್ರುವಾಗಿದೆ. ರಾಜ್ಯ ಭಾಷೆ ಉಳಿಯಬೇಕಾದರೆ ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಕಾಯ್ದೆಗಳನ್ನೂ ಉಲ್ಲಂಘಿಸುವ ಮಟ್ಟಕ್ಕೆ ಶಾಲೆಗಳು, ಪೋಷಕರು ರಾಜಕೀಯ ಮಾಡಿದರೆ ಮೂಲಸೌಕರ್ಯಗಳನ್ನು ಕಡಿತಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.