ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್

Kannadaprabha News   | Kannada Prabha
Published : Jan 13, 2026, 04:48 AM IST
SSLC

ಸಾರಾಂಶ

ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು : ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ತುಮಕೂರು ಜಿಲ್ಲೆಯ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಡಿ.ಗಿರೀಶ್‌, ಕಲಬುರಗಿ ಖಾಸಗಿ ಶಾಲೆಯ ಮುಖ್ಯಶಿಕ್ಷಕಿ ಶಾಹೀದಾ ಬೇಗಂ, ಶಿಕ್ಷಕಿಯರಾದ ಫಾಹ್ಮೀದಾ, ಫರ್ಜಾನ ಬೇಗಂ ಹಾಗೂ ರಾಮನಗರದ ಶಿಕ್ಷಕ ಅಮ್ಜದ್‌ ಖಾನ್‌ ಬಂಧಿತರಾಗಿದ್ದಾರೆ.ಪ್ರಶ್ನೆ ಪತ್ರಿಕೆಗಳನ್ನು ‘ಡೆಲ್ಟಾ ಹ್ಯಾಕರ್‌ 32’ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಿ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ಜ.7ರಂದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ದೂರು ನೀಡಿತ್ತು. ಈ ಬಗ್ಗೆ ತನಿಖೆ ಮಾಡಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ಸೋರಿಕೆ?:

ರಾಜ್ಯದ ಎಲ್ಲ ಶಾಲೆಗಳಿಗೆ 10ನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ವಿತರಿಸುವ ವ್ಯವಸ್ಥೆ ರೂಪಿಸಲಾಗಿತ್ತು. ಆಯಾ ದಿನದ ಪ್ರಶ್ನೆ ಪತ್ರಿಕೆಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಪತ್ರಿಕೆಯನ್ನು ಶಾಲೆಗಳ ಮುಖ್ಯಶಿಕ್ಷಕರಿಗೆ ಮಾತ್ರ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವಿತ್ತು. ಇದಕ್ಕೆ ಮುಖ್ಯಶಿಕ್ಷಕರು ಮೊಬೈಲ್ ನೋಂದಾಯಿಸಿದರೆ ಒಟಿಪಿ ಪಡೆದು ಪ್ರಶ್ನೆ ಪತ್ರಿಕೆ ಡೌನ್‌ ಮಾಡಿಕೊಳ್ಳಬೇಕಿತ್ತು. ತಮಗೆ ಸಿಕ್ಕ ಈ ಅವಕಾಶವನ್ನು ಬಂಧಿತ ಮುಖ್ಯಶಿಕ್ಷಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಫಲಿತಾಂಶ ಹೆಚ್ಚಳಕ್ಕೆ ಸಂಚು:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಕೆಲ ಶಾಲಾ ಮುಖ್ಯಶಿಕ್ಷಕರು ಪ್ರಯತ್ನಿಸಿದ್ದರು. ಇದಕ್ಕಾಗಿ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರಿಗೊಳಿಸುತ್ತಿದ್ದ ಶಾಲೆಗಳು, ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ತಾವಾಗಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ಹಲವು ಶಾಲೆಗಳು ಎಸಗಿವೆ. ಆದರೆ ಇದುವರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರು ಶಿಕ್ಷಕರು ಮಾತ್ರ ಪತ್ತೆಯಾಗಿದ್ದಾರೆ. ಪರೀಕ್ಷೆಗೂ ಮೂರು ಗಂಟೆಗಳಿಗೂ ಮುನ್ನ ಪ್ರಶ್ನೆ ಪತ್ರಿಕೆಗಳ ಫೋಟೋ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದರು. ಇದರಲ್ಲಿ ಶಿಕ್ಷಕರು ಹಣ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಂದ ಮಾರಾಟ ಶಂಕೆ

ಕೆಲ ವಿದ್ಯಾರ್ಥಿಗಳು ತಮಗೆ ಶಿಕ್ಷಕರು ನೀಡಿದ್ದ ಪ್ರಶ್ನೆ ಪತ್ರಿಕೆಗಳನ್ನು ಹಣಕ್ಕಾಗಿ ಬೇರೆ ವಿದ್ಯಾರ್ಥಿಗಳು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಶ್ನೆ ಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್‌ 32’ ಹಾಗೂ ‘ಡೆಲ್ಟಾ ಹ್ಯಾಕರ್‌’ ಸೇರಿದಂತೆ 8ಕ್ಕೂ ಅಧಿಕ ಖಾತೆಗಳನ್ನು ತೆರೆದಿದ್ದರು. ಅಲ್ಲದೆ ಟೆಲಿಗ್ರಾಂ ಹಾಗೂ ವಾಟ್ಸಪ್‌ನಲ್ಲಿ ಗ್ರೂಪ್ ರಚಿಸಿಕೊಂಡು ಸಹ ಕೆಲವರು ಮಾರಾಟ ಮಾಡಿದ್ದಾರೆ. ಪ್ರತಿ ಪ್ರಶ್ನೆಗೆ ಪತ್ರಿಕೆ 50 ರಿಂದ 150 ರು.ವರೆಗೆ ಕೆಲವರು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಈ ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ 10 ವಿದ್ಯಾರ್ಥಿಗಳು ಪೊಲೀಸರ ಗಾಳಕ್ಕೆ ಸಿಲುಕಿದ್ದಾರೆ. ಈ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದಾರೆ. ನಂತರ ಕೆಲವರನ್ನು ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧ ಕಾರಣಕ್ಕೆ ಠಾಣಾ ಜಾಮೀನುಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಡೆಲ್ಟಾ ನೀಡಿದ ಸುಳಿವು

ಇನ್‌ಸ್ಟಾಗ್ರಾಂನ ಡೆಲ್ಟಾ ಹ್ಯಾಕರ್‌-32 ಖಾತೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ವೈರಲ್ ಆಯಿತು. ಈ ಬಗ್ಗೆ ಮಾಹಿತಿ ಪಡೆದ ಮಂಡಳಿ ಅಧಿಕಾರಿಗಳು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಪಿ ಪವನ್ ನೇತೃತ್ವ ತಂಡ, ಪ್ರಶ್ನೆ ಪತ್ರಿಕೆ ವಿತರಣೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಆಗ ಪ್ರಶ್ನೆ ಪತ್ರಿಕೆಗಳ ಕೋಡ್‌ ಆಧರಿಸಿ ತನಿಖೆಗಿಳಿದಾಗ ಶಿಕ್ಷಕರು ಸೆರೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

PREV
Read more Articles on
click me!

Recommended Stories

ಹಾವೇರಿ : ಮುಸ್ಲಿಂ ಸಮಾಜದಿಂದ ಅನ್ಯಾಯವೆಂದು ಸರ್ಕಾರಿ ಶಾಲೆಗೆ ಬೀಗ ಜಡಿದ ರೈತ, ಬಿಸಿಲಲ್ಲಿ ನಿಂತ ಮಕ್ಕಳು
ಬ್ರಿಟನ್‌ಗೆ ಶಿಕ್ಷಣಕ್ಕೆ ಹೋಗಲು ಇನ್ನು ಯುಎಇ ನೆರವು ಇಲ್ಲ!