
ಚಿಂಚೋಳಿ(ಡಿ.15): ತಾಲೂಕಿನ ಕೊಟಗಾ ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಬಾಲಕಿಯರಿಗೆ ಸರಿಯಾದ ಊಟದ ಸಿಗದೇ ಇರುವುದರಿಂದ ನಾಲ್ವರು ಬಾಲಕಿಯರು ಮುಂಜಾನೆ ಪ್ರಾರ್ಥನೆ ವೇಳೆ ಕುಸಿದು ಬಿದ್ದಿದ್ದಾರೆ ಎಂದು ಕೊಟಗಾ ಗ್ರಾಮದ ಮುಖಂಡ ಗೌಡಪ್ಪಗೌಡ ತಿಳಿಸಿದ್ದಾರೆ.
ಕೊಟಗಾ ಗ್ರಾಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರಾರಂಭಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿವರೆಗೆ ಒಟ್ಟು ೨೫೦ ಬಾಲಕಿಯರು ವಸತಿ ಶಾಲೆಯಲ್ಲಿ ಇದ್ದಾರೆ. ಆದರೆ, ಶಾಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಬೆಳಗ್ಗೆ ಬಿಸಿಯಾದ ಊಟ, ಉಪಹಾರ ಕೊಡುವುದಿಲ್ಲ. ಬಿಸಿನೀರು ವ್ಯವಸ್ಥೆ ಇಲ್ಲದಿರುವ ಕಾರಣ ಮಕ್ಕಳು ದಿನನಿತ್ಯ ತಣ್ಣೀರಿನಲ್ಲಿಯೇ ಸ್ನಾನ ಮಾಡಬೇಕಾಗಿದೆ. ಇಲ್ಲಿರುವ ಶಿಕ್ಷಕರು ಮಕ್ಕಳ ಕಾಳಜಿ ವಹಿಸುವುದೇ ಇಲ್ಲ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು ೯ ಕಾಯಂ ಶಿಕ್ಷಕರು ಮತ್ತು ೩ ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ೭ ಜನ ಡಿ ಗ್ರೂಪ್ ಸಿಬ್ಬಂದಿ, ಒಬ್ಬರು ವಾರ್ಡನ್ ಇದ್ದಾರೆ.
ಪರೀಕ್ಷಾ ಅಕ್ರಮ: ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು ಕಲಬುರಗಿಯಿಂದ ಬೆಂಗಳೂರಿಗೆ ಶಿಫ್ಟ್...!
ಆದರೆ ಶಾಲಾ ಶಿಕ್ಷಕರಿಗೆ ವಸತಿ ನಿಲಯದಲ್ಲಿ ಕ್ವಾಟರ್ಸ್‌ಗಳಿಲ್ಲದ ಕಾರಣ ಶಿಕ್ಷಕರು ಬೆಳಗ್ಗೆ ಬಂದು ಸಂಜೆ ಮನೆಗೆ ಹೋಗುತ್ತಾರೆ. ಮಕ್ಕಳು ಮಾತ್ರ ರಾತ್ರಿ ಸಮಯದಲ್ಲಿ ಶಾಲೆಯಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ ಪ್ರಾರ್ಥನೆ ವೇಳೆಯಲ್ಲಿ 8ನೇ ತರಗತಿ ಬಾಲಕಿ ರೇಷ್ಮಾ ಊಟವಿಲ್ಲದೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ಸರಕಾರದಿಂದ ಕೊಡುವ ಉಪಹಾರ ಊಟ ಸರಿಯಾಗಿ ಕೊಡುವುದಿಲ್ಲ. ಹೊಟ್ಟೆ ತುಂಬಾ ಊಟ ಕೊಡದೇ ಇರುವುದರಿಂದ ಮಕ್ಕಳು ಹಸಿವಿನಿಂದ ಇರುವಂತಾಗಿದೆ. ಬಾಲಕಿಯರ ಆರೋಗ್ಯ ಪರೀಕ್ಷೆ ನಡೆಸುವುದಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.