
ನವದೆಹಲಿ(ಮೇ.24): ಕೊರೋನಾ 2ನೇ ಅಲೆ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಲ್ಪಟ್ಟಿರುವ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ಕುರಿತು ಜೂನ್ 1ರ ವೇಳೆಗೆ ಅಂತಿಮ ನಿರ್ಧಾರವೊಂದನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪರೀಕ್ಷೆ ನಡೆಸುವ ಬಗೆ ಕುರಿತು ಚರ್ಚಿಸಲು ಭಾನುವಾರ ನಡೆದ ಸಭೆ, ಯಾವುದೇ ತೀರ್ಮಾನಕ್ಕೆ ಬರಲು ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಪರೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಎಲ್ಲ ರಾಜ್ಯಗಳು ಮೇ 25ರೊಳಗೆ ಸವಿಸ್ತಾರ ಅಭಿಪ್ರಾಯ ತಿಳಿಸಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ. ಇದರ ಆಧಾರದಲ್ಲಿ ಸರ್ವಸಮ್ಮತ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಸಭೆಯಲ್ಲಿ ಸಿಬಿಎಸ್‌ಇ ಆಡಳಿತ ಮಂಡಳಿಯು ಜುಲೈ 15ರಿಂದ ಆ.26ರೊಳಗೆ ಪರೀಕ್ಷೆ ನಡೆಸುವ ಮತ್ತು ಸೆಪ್ಟೆಂಬರ್‌ನಲ್ಲಿ ಫಲಿತಾಂಶ ನಡೆಸುವ ಪ್ರಸ್ತಾಪ ಮಾಡಿತು. ಜೊತೆಗೆ ಪರೀಕ್ಷೆ ನಡೆಸುವ ಸಂಬಂಧ 2 ಪ್ರಸ್ತಾವ ಇರಿಸಿತು.
SSLC, PUC ಪರೀಕ್ಷೆ ರದ್ದು ಮಾಡುವಂತೆ ಒತ್ತಾಯ
ಮೊದಲನೆಯದಾಗಿ, ಈಗಿನ 3 ತಾಸುಗಳ ಪರೀಕ್ಷೆಯನ್ನೇ ನಡೆಸಬಹುದು. ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಪಾಡಬೇಕು. ಎಲ್ಲ ವಿಷಯಗಳ ಬದಲಿಗೆ ಮೇಜರ್ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಬೇಕು. ಈ ವಿಷಯಗಳ ಅಂಕದ ಆಧಾರದಲ್ಲಿ ಉಳಿದ ವಿಷಯಗಳಿಗೆ ಅಂಕ ನೀಡಬೇಕು ಎಂದು ಸಿಬಿಎಸ್‌ಇ ಹೇಳಿತು.
ಎರಡನೆಯದಾಗಿ, 3 ತಾಸಿನ ಪರೀಕ್ಷೆ ಬದಲು 90 ನಿಮಿಷಕ್ಕೆ ಪರೀಕ್ಷಾ ಅವಧಿ ಕಡಿತಗೊಳಿಸಬೇಕು. ವಿದ್ಯಾರ್ಥಿಗಳು ಯಾವ ಶಾಲೆಯಲ್ಲಿ ಓದುತ್ತಾರೋ ಅಲ್ಲೇ ಪರೀಕ್ಷೆ ನಡೆಸಬೇಕು. 4 ಪ್ರಮುಖ ವಿಷಯಗಳ ಬದಲು 3ರಲ್ಲಿ ಮಾತ್ರ ಪರೀಕ್ಷೆ ಬರೆವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಹಾಗೂ ಹೆಚ್ಚಾಗಿ ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಕೇಳಬೇಕು ಎಂಬ ಇನ್ನೊಂದು ಪ್ರಸ್ತಾಪವನ್ನು ಸಿಬಿಎಸ್‌ಇ ಇರಿಸಿತು.
ತೆಲಂಗಾಣದಲ್ಲಿ ಪರೀಕ್ಷೆ ಇಲ್ಲದೇ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್
ಪರೀಕ್ಷೆಗೆ ಪೋಷಕರ ಆಕ್ಷೇಪ:
ಸಭೆಯಲ್ಲಿ ಭಾಗಿಯಾಗಿದ್ದ ಪೋಷಕರು ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಪರೀಕ್ಷೆಗೆ ಆಕ್ಷೇಪ ವ್ಯಕ್ತವಾಯಿತು. ಆದರೆ ದೆಹಲಿ, ಕರ್ನಾಟಕ, ತಮಿಳುನಾಡು, ಕೇರಳ ಸರ್ಕಾರಗಳು, ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ ಬಳಿಕ ಪರೀಕ್ಷೆ ಆಯೋಜಿಸುವ ಬಗ್ಗೆ ಒಲವು ವ್ಯಕ್ತಪಡಿಸಿದವು.
ಸಭೆ ಬಳಿಕ ಮಾತನಾಡಿದ ನಿಶಾಂಕ್, ‘ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿನಮಗೆ ಮುಖ್ಯ. ಸಭೆಯಲ್ಲಿ ಸಾಕಷ್ಟುಉತ್ತಮ ಸಲಹೆಗಳು ಬಂದಿವೆ. ಮೇ 25ರೊಳಗೆ ಸವಿಸ್ತಾರ ಸಲಹೆಗಳನ್ನು ನೀಡುವಂತೆ ರಾಜ್ಯಗಳಿಗೆ ಕೋರಿದ್ದೇವೆ. ಇದರ ಆಧಾರದಲ್ಲಿ ಸರ್ವಸಮ್ಮತ ಅಂತಿಮ ನಿರ್ಣಯವನ್ನು ಶೀಘ್ರ ತೆಗೆದುಕೊಳ್ಳಲಾಗುವುದು’ ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona