* ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಶಮಾ ಪವೀನ್ ಎಂಎಸ್ಸಿ ಅಭ್ಯಾಸ
* ಬಿಎಸ್ಸಿ ಪದವಿಯಲ್ಲೂ ಮೊದಲ ರ್‍ಯಾಂಕ್ ಪಡೆದಿದ್ದ ಪವೀನ್
* ನನ್ನ ಮಗಳು ಪ್ರಥಮ ರ್‍ಯಾಂಕ್ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾಳೆ
ಹೂವಿನಹಡಗಲಿ(ಜೂ.11): ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಶಮಾ ಪವೀನ್ ಎಂಎಸ್ಸಿ ಕೆಮೆಸ್ಟ್ರಿಯಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದಾಳೆ. ಇಲ್ಲಿನ ಹೂವಿನ ವ್ಯಾಪಾರಿ ದಾವಲ್‌ಸಾಬ್ ಅವರ ಮಗಳು ಈಕೆ. ಕೆಮೆಸ್ಟ್ರಿಯಲ್ಲಿ 2,400 ಅಂಕಕ್ಕೆ 2,026 (ಶೇ. 84.42) ಅಂಕ ಬಂದಿವೆ.
ಶಮಾ ಪವೀನ್‌ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೆ ಪಡೆದಿದ್ದಾರೆ. ಪಟ್ಟಣದ ಮ.ಮ. ಪಾಟೀಲ್ ಆಂಗ್ಲ ಮಾಧ್ಯಮ ಕಾಲೇಜಿನಲ್ಲಿ ಪಿಯು ಅಭ್ಯಾಸ ಮಾಡಿರುವ ಅವರು, ಬಿಎಸ್ಸಿ ಪದವಿಯನ್ನು ಪಟ್ಟಣದ ಎಸ್‌ಆರ್ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಅಲ್ಲಿಯೂ ಪ್ರಥಮ ರ್‍ಯಾಂಕ್ ಪಡೆದಿದ್ದರು.
undefined
ಬಾಗಲಕೋಟೆ ತೋವಿವಿ ಘಟಿಕೋತ್ಸವ: 16 ಗೋಲ್ಡ್ ಮೆಡಲ್‌ಗೆ ಮುತ್ತಿಟ್ಟ ರೈತನ ಮಗಳು..!
ಕಾಲೇಜು ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಮೊಬೈಲ್ ಹಾಗೂ ಟಿವಿ ಗೀಳು ಬಿಟ್ಟು 5ರಿಂದ 6 ತಾಸು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ನಮ್ಮ ಗುರಿ ತಲುಪಲು ಸಾಧ್ಯವಿದೆ. ಆಂಗ್ಲ ಮಾಧ್ಯಮದಲ್ಲೇ ಓದಿದರೆ ರ್‍ಯಾಂಕ್ ಬರಬಹುದು ಎಂಬ ಭ್ರಮೆಯನ್ನು ವಿದ್ಯಾರ್ಥಿಗಳು ಬಿಡಬೇಕು. ಕಾಲೇಜು ಉಪನ್ಯಾಸಕಿ ಆಗುವ ಜತೆಗೆ ಕೆಎಎಸ್ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಶಮಾ ಪವೀನ್.
ದಾವಲ್‌ಸಾಬ್ ಅವರಿಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಮಗ. ನಾಲ್ಕು ಜನ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಹೂವಿನ ವ್ಯಾಪಾರದಿಂದ ಬರುವ ಆದಾಯದಲ್ಲೇ ಓದಿಸುತ್ತಿದ್ದು, ನನ್ನ ಮಗಳು ಪ್ರಥಮ ರ್‍ಯಾಂಕ್ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾಳೆ. ನಮ್ಮ ಮಕ್ಕಳನ್ನು ಎಲ್ಲಿಯೂ ಕೋಚಿಂಗ್‌ಗೆ ಕಳುಹಿಸಿಲ್ಲ. ಮನೆ ಕೆಲಸ ಮಾಡುತ್ತಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎನ್ನುತ್ತಾರೆ ತಂದೆ ದಾವಲ್‌ಸಾಬ್, ತಾಯಿ ಆಯಿಶಾ.