ಗುಲ್ಬರ್ಗ ವಿಶ್ವವಿದ್ಯಾಲಯ ಘಟಿಕೋತ್ಸವ: ಬಡತನ ಮೆಟ್ಟಿ ಪದಕ ಬಾಚಿದ ವಿದ್ಯಾರ್ಥಿನಿಯರು

By Kannadaprabha News  |  First Published Jun 20, 2023, 9:07 PM IST

ಹೆಚ್ಚಿನ ಚಿನ್ನದ ಪದಕ ಗಿಟ್ಟಿಸಿಕೊಂಡವರಲ್ಲಿ ಬಹುತೇಕರ ಕುಟುಂಬ ಹಿನ್ನೆಲೆ ಬಡ, ಮಧ್ಯಮ ಹಾಗೂ ಸಾಧರಣವೇ ಆಗಿದೆ. ಅದರಲ್ಲೂ ಕನ್ನಡ ಎಂಎ ಪದವಿಯಲ್ಲಿ 14 ಚಿನ್ನದ ಪದಕ ಪಡೆದ ರುಕ್ಮಿಣಿ ಹಣಮಂತರಾಯ, 6 ಚಿನ್ನದ ಪದಕ ಪಡೆದ ರಾಜ್ಯಶಾಸ್ತ್ರ ಪದವೀಧರೆ ಲಕ್ಷ್ಮೀ ಲಕ್ಷ್ಮಣ ಪೋಷಕರು ಅನಕ್ಷರಸ್ಥರು ಎಂಬ ಅಂಶ ಸರ್ವರ ಗಮನ ಸೆಳೆಯಿತು.


ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.20):  ಪ್ರತಿಭೆ ಹುಟ್ಟೋದು ಗುಡಿಸಲಲ್ಲಿ ಎಂಬ ಮಾತನ್ನು ಸೋಮ​ವಾರ ನಡೆದ ಗುವಿವಿ 41ನೇ ಘಟಿಕೋತ್ಸವ ಮತ್ತೊಮ್ಮೆ ಸಾಬೀತು ಪಡಿಸಿತು. ಹೆಚ್ಚಿನ ಚಿನ್ನದ ಪದಕ ಗಿಟ್ಟಿಸಿಕೊಂಡವರಲ್ಲಿ ಬಹುತೇಕರ ಕುಟುಂಬ ಹಿನ್ನೆಲೆ ಬಡ, ಮಧ್ಯಮ ಹಾಗೂ ಸಾಧರಣವೇ ಆಗಿದೆ. ಅದರಲ್ಲೂ ಕನ್ನಡ ಎಂಎ ಪದವಿಯಲ್ಲಿ 14 ಚಿನ್ನದ ಪದಕ ಪಡೆದ ರುಕ್ಮಿಣಿ ಹಣಮಂತರಾಯ, 6 ಚಿನ್ನದ ಪದಕ ಪಡೆದ ರಾಜ್ಯಶಾಸ್ತ್ರ ಪದವೀಧರೆ ಲಕ್ಷ್ಮೀ ಲಕ್ಷ್ಮಣ ಪೋಷಕರು ಅನಕ್ಷರಸ್ಥರು ಎಂಬ ಅಂಶ ಸರ್ವರ ಗಮನ ಸೆಳೆಯಿತು.

Tap to resize

Latest Videos

undefined

ನಾವು ಅನಕ್ಷರಸ್ಥರಾದರೇನಂತೆ, ಏನೇನೊ ಕಾರಣದಿಂದ ನಾವು ಓದಲಾಗಲಿಲ್ಲ, ಮಕ್ಕಳನ್ನಾದರೂ ಓದಿಸೋಣವೆಂಬ ಈ ಅನಕ್ಷರಸ್ಥ ಪೋಷಕರ ಸಂಕಲ್ಪವೆ ಇಂದು ರುಕ್ಮಿಣಿ, ರೇಶ್ಮಾ ಚಿನ್ನದ ಬಾಲೆಯರಾಗಿ ಘಟಿಕೋತ್ಸವದಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತ್ತು.

ಕಲಬುರಗಿ ವಿವಿ ಘಟಿಕೋತ್ಸವದಲ್ಲಿ ಹಳೆ ಭಾಷಣ ಓದಿದ ಗರ್ವನರ್!

ಭಾವುಕರಾದ ಹಣಮಂತರಾಯ ಶರಣಪ್ಪ ದಂಪತಿ!

ಜ್ಞಾನಗಂಗೆಯ ಪದವೀಧರರಲ್ಲೇ ಹೆಚ್ಚಿನ ಅಂಕದೊಂದಿಗೆ 14 ಚ್ನಿದ ಪದಕ ಬಾಚಿಕೊಂಡ ಆಲಗೂಡ ಮೂಲದ ರುಕ್ಮಿಣಿ ಸಾಧನೆಗೆ ಅವರ ಪೋಷಕರಾದ ಹಣಮಂತರಾಯ ಹಾಗೂ ಪಾರ್ವತಿ ಭಾವುಕರಾದರು. ಮಗಳನ್ನು ಬಾಚಿ ತಬ್ಬಿಕೊಂಡು ಮುತ್ತಿನ ಸುರಿಮಳೆಗರೆದರು.

ರುಕ್ಮಿಣಿ ತನ್ನ ಈ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತ್ತು ತಂದೆ-ತಾಯಿಯವರ ಮತ್ತು ಕುಟುಂಬಸ್ಥರ ಸಹಕಾರವೇ ಇದಕ್ಕೆ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ತುಂಬಾ ನೆರವಿಗೆ ಬಂದಿವೆ. ತಾವು ಬಿ.ಎಡ್‌. ಸಹ ಮಾಡಿದ್ದರಿಂದ ಈಗಾಗಲೆ ಬೀದರ್‌ ಜಿಲ್ಲೆಯಲ್ಲಿ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೆನೇಮಕಾತಿ ಪತ್ರ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡೇ ಕಾಲೇಜು ಉಪನ್ಯಾಸಕಿಯಾಗುವ ಬಯಕೆ ತಮ್ಮದು, ಬೋಧನೆಯಲ್ಲೇ ಮುಂದೆ ಸಾಗುವೆ ಎಂದರು.

ಮಗಳ ಈ ಸಾಧನೆ ಕಂಡು ಅವರ ತಂದೆ ಹಣಮಂತ್ರಾಯ ಒಂದು ಕ್ಷಣ ಭಾವುಕರಾದರು. ಮಗಳು ಇಡೀ ವಿವಿಗೆ ಹೆಚ್ಚಿನ ಚಿನ್ನದ ಪದಕ ಪಡೆದಿದ್ದಾಳೆ. ನಿಮ್ಮ ಅನಿಸಿಕೆ ಏನೆಂದು ಕೇಳಿದಾಗ, ನಾನು 3ನೇ ತರ​ಗತಿ ತನಕ ಸಾಲಿ ಕಲ್ತೀನ್ರಿ. 4 ಜನ ಹೆಣ್ಮಕ್ಳು, ಒಬ್ಬ ಗಂಡು ಹುಡುಗ ಇದಾನ್ರೀ. ರುಕ್ಮಿಣಿ ಕೊನೆಯವಳ್ರಿ. ನನಗೇನ್‌ ಹೆಚ್ಚಿಗ್‌ ಗೊತ್ತಿಲ್ರಿ. ಕೆಲಸ ಹುಡಕೊಂಡು ಊರು ಬಿಟ್ಟು ಹೋಗಿದ್ದೆ. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್‌ ಕೆಲಸ ಸಿಕ್ತು. 2 ವರ್ಷದ ಹಿಂದೆ ರಿಟೈರ್‌ಮೆಂಟ್‌ ಆಗೀನ್ರಿ. ಮಗಳು ಓದ್ಯಾಳ್ರಿ ಎಂದು ಹೇಳುತ್ತಲೇ ಕಣ್ಣಾಲಿಗಳು ತೇವವಾದವು, ‘ಇವು ಮಕ್ಳ ಖುಷಿಯಾದಾಗ ಬರೋ ಕಣ್ಣೀರು’ ಎಂದು ಆನಂದಭಾಷ್ಪ ಸುರಿಸಿದಾಗ ರುಕ್ಮಿಣಿ, ತಾಯಿ ಪಾರ್ವತಿ ಕೂಡಾ ಭಾವುಕರಾದರು.

ಗಮನ ಸೆಳೆದ ರೇಶ್ಮಾಳ ಸಾಧನೆ

ರಾಯಚೂರು ಜಿಲ್ಲೆಯ ಲಕ್ಷ್ಮೀ ಲಕ್ಷಣ ರಾಜ್ಯಶಾಸ್ತ್ರದಲ್ಲಿ 6 ಚಿನ್ನದ ಪದಕ ಬಾಚಿಕೊಂಡವಳು. ಇವಳ ಪೋಷಕರೂ ಕೂಡ ಅನಕ್ಷರಸ್ಥರು. ಆದರೂ ಕೂಡಾ ಮಗಳನ್ನು ಹೆಚ್ಚಿಗೆ ಓದಿಸುವ ಹಂಬಲ ತಮಗೆ ಇದ್ದುದ್ದನ್ನು ‘ಕನ್ನಡಪ್ರಭ’ ಜೊತೆ ಮಾತನಾಡುತ್ತ ಹೇಳಿದರು.

10ನೇ ತರಗತಿಯಿಂದಲೇ ಲಕ್ಷ್ಮೀ ಹೆಚ್ಚಿನ ಸಾಧನೆ ಮಾಡುತ್ತ ಸಾಗಿದ್ದು, ಪದವಿಯಲ್ಲಿ ಅವಳ ಸಾಧನೆ ಪರಾಕಾಷ್ಠೆ ತಲುಪಿರೋದು ಪೋಷಕರಿಗೆ ಸಂತಸ ತಂದಿದೆ. ಇವಳು ಪಡೆದ 6 ಚಿನ್ನದ ಪದಕಗಳಲ್ಲಿ ಸೀತಾಬಾಯಿ ಮುದಗಲ್‌ ಸ್ಮರಣಾರ್ಥ ಪದಕವೂ ಸೇರಿದೆ. ವೆಂಕಟೇಶ ಮುದ್ಗಲ್‌ ಇವರು ತಮ್ಮ ತಾಯಿಯವರ ಸ್ಮರಣಾರ್ಥ ಈ ಪದಕ ಸ್ಥಾಪಿಸಿದ್ದಾರೆ. ಲಕ್ಷ್ಮೀ ಸಾಧನೆಗೆ ವೆಂಕಟೇಶ ಮುದ್ಗಲ್‌ ಕೂಡಾ ಸಂತಸ ವ್ಯಕ್ತಪಡಿಸಿದ್ದು ಶುಭ ಕೋರಿದ್ದಾರೆ.

ಪಿ.ಎಚ್‌.ಡಿ. ಮಾಡುವಾಸೆ:

ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಬೀದರ್‌ ಮೂಲದ ಆದಿತಿ ರೆಡ್ಡಿ ಮಂದಹಾಸದೊಂದಿಗೆ ಮಾತನಾಡುತ್ತಾ, ಪಿಎಚ್‌ಡಿ ಮಾಡುವುದಾಗಿ ತಿಳಿಸಿದರು.

ರಾಜ್ಯದ ಉನ್ನತ ಶಿಕ್ಷಣದಲ್ಲಿ ವೃತ್ತಿಯಾಧಾರಿತ ಪಠ್ಯಕ್ರಮ ಅಳವಡಿಸ್ತೇವೆ: ಸಚಿವ ಸುಧಾಕರ್

ಮೊಮ್ಮಗಳ ಸಾಧನೆಗೆ ಹಿರಿಹಿರಿ ಹಿಗ್ಗಿದ ಅಜ್ಜ!

ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಬೀರನೂರ್‌ ರಾಜಶ್ರೀ ಜೋಷಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕ ಪಡೆದಿದ್ದಕ್ಕೆ ಪ್ರತಿಕ್ರಿಯಿಸಿ ತಮ್ಮ ಈ ಸಾಧನೆಗೆ ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುವುದಾಗಿ ತಿಳಿಸಿ ಉಪನ್ಯಾಸಕ ವೃತ್ತಿಯಲ್ಲಿ ಮುಂದುವರಿಯುವೆ ಎಂದರು.

ಇವಳ ಅಜ್ಜ ವೆಂಕೋಬಾಚಾರ್ಯ ಘಟಿಕೋತ್ಸವದಲ್ಲಿ ಪಾಲ್ಗೊಂಡು ತಮ್ಮ ಮೊಮ್ಮಗಳ ಸಾಧನೆಗೆ ಸಂತಸಪಟ್ಟರು. ಅಜ್ಜ ಘಟಿಕೋತ್ಸವಕ್ಕೆ ಸಾಕ್ಷಿಯಾದರಲ್ಲದೆ ರಾಜಶ್ರೀ ಪಡೆದ ಪದಕಗಳನ್ನು ಹಿಡಿದು ಖುಷಿ ಪಟ್ಟರು. ರಾಜಶ್ರೀ ತಂದೆ ಪ್ರಲ್ಹಾದ್‌ ಜೋಷಿ ಯಾದಗಿರಿಯಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಹಿರಿಯ ಉಪನ್ಯಾಸಕರಾಗಿದ್ದಾರೆ. ಮಗಳ ಸಾಧನೆಗೆ ತಾಯಿ ಪಂಕಜಾ ಕೂಡಾ ಹಿಗ್ಗಿನಲ್ಲಿದ್ದರು.

click me!