ಬೆಂಗಳೂರು(ಜು.08): ತಜ್ಞರ ಸಮಿತಿ ಶಿಫಾರಸಿನಂತೆ ರಾಜ್ಯದಲ್ಲಿ ಕೂಡಲೇ ಶಾಲೆ-ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಬೇಕು ಮತ್ತು ಶಾಲೆಗಳಲ್ಲೇ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂದು ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಣ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಪದಾಧಿಕಾರಿಗಳಾದ ಮೊಯ್ದಿನ್ ಕುಟ್ಟಿ, ಡಿ.ಬಿ.ಕುಪ್ಪಸ್ತ ಮತ್ತು ಶಿಕ್ಷಣ ತಜ್ಞ ನಿರಂಜನಾರಾಧ್ಯ ನಗರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ‘ತಡ ಮಾಡದೆ ಶಾಲೆ ಆರಂಭಿಸಲು ತಜ್ಞರು ಶಿಫಾರಸು ಮಾಡಿದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಇಲಾಖಾ ಸಚಿವರು ಆಸಕ್ತಿ ವಹಿಸದಿರುವುದು ಸರಿಯಲ್ಲ. ಇನ್ನಷ್ಟುವಿಳಂಬವಾದರೆ ಮಕ್ಕಳ ಶೈಕ್ಷಣಿಕ ಅಂತರ ಹೆಚ್ಚುತ್ತದೆ.
ಆ.9ರಿಂದ ರಾಜ್ಯದಲ್ಲಿ ಪದವಿ ತರಗತಿ ಆರಂಭಕ್ಕೆ ಸಲಹೆ
ಅಲ್ಲದೆ, ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ, ಭಿಕ್ಷಾಟನೆ ಇತ್ಯಾದಿ ಸಾಮಾಜಿಕ ಪಿಡುಗುಗಳು ಹೆಚ್ಚಾಗಲು ಸರ್ಕಾರವೇ ದಾರಿ ಮಾಡಿಟ್ಟಂತಾಗುತ್ತದೆ. ಹೀಗಾಗಿ ಸರ್ಕಾರಿ ವೈಜ್ಞಾನಿಕ ಮಾರ್ಗಸೂಚಿಯನ್ನು ರಚಿಸಿ, ಅದರಂತೆ ಶಾಲೆಯನ್ನು ಆದಷ್ಟುಬೇಗ ಪುನರ್ ಆರಂಭಿಸಬೇಕು. ಆನ್‌ಲೈನ್ ಕಲಿಕೆ ನಿರೀಕ್ಷಿತ ಗುರಿ ಮುಟ್ಟಿಲ್ಲ. ಹೀಗಾಗಿ ಕಲಿಕಾ ಅಂತರ ಹೆಚ್ಚಾಗಲಿದೆ ಹಾಗೂ ಶೈಕ್ಷಣಿಕ ಅಸಮಾತೋಲನ ಉಂಟಾಗಲಿದೆ. ಮಕ್ಕಳ ಕಲಿಕೆ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಪೌಷ್ಟಿಕತೆ ಉತ್ತಮಗೊಳಿಸಲು ಭೌತಿಕ ತರಗತಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಪರೀಕ್ಷೆ ರದ್ದು, ಪಿಯು ಫೇಲಾದವರೂ ಪಾಸ್: ಶೀಘ್ರ ಸರ್ಕಾರದ ತೀರ್ಮಾನ!
ಭೌತಿಕ ತರಗತಿ ಆರಂಭಿಸುವ ಜವಾಬ್ದಾರಿಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗೆ ನೀಡಬೇಕು. ಜಿಲ್ಲಾಮಟ್ಟದಲ್ಲಿ ಶಾಲಾ ಸುರಕ್ಷತಾ ಪರಿಶೀಲನಾ ಸಮಿತಿಯನ್ನು ರಚನೆ ಮಾಡಬೇಕು. ಭೌತಿಕ ತರಗತಿ ಆರಂಭಿಸುವುದರಿಂದ ಮಾತ್ರ ಪರಿಣಾಮಕಾರಿಯಾದ ಶಿಕ್ಷಣ ನೀಡಲು ಸಾಧ್ಯವಿದೆ. ಹೀಗಾಗಿ ಎಲ್ಲ ಸುರಕ್ಷತಾ ಕ್ರಮದೊಂದಿಗೆ ಸರ್ಕಾರ ಕೂಡಲೇ ಭೌತಿಕ ತರಗತಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.