ಸೆಲ್ಫಿ ತೆಗೆಯಲು ಕಲ್ಲುಗಳ ಮೇಲೆ ಹತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಏ.18): ಉಡುಪಿಯ ಸೈಂಟ್ ಮೇರಿಸ್ ದ್ವೀಪದಲ್ಲಿ (Saint Mary's Island) ಸೆಲ್ಫಿ ತೆಗೆಯಲು ಕಲ್ಲುಗಳ ಮೇಲೆ ಹತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಈ ದ್ವೀಪ ಇದೀಗ ಸಾವಿನ ದ್ವೀಪವಾಗಿದೆ. ಪ್ರತಿವರ್ಷ ಸಾವಿರಾರು ಜನರು ಭೇಟಿ ಕೊಡುವ ಈ ದ್ವೀಪ ಕೇವಲ ಹತ್ತು ದಿನಗಳ ಅಂತರದಲ್ಲಿ ಐವರನ್ನು ಬಲಿ ಪಡೆದಿದೆ.
ಬೆಂಗಳೂರು ಮೂಲದ ಇಂಜಿನಿಯರಿಂಗ್ ಕಾಲೇಜಿನಿಂದ ಪ್ರವಾಸಕ್ಕೆಂದು ಬಂದಿದ್ದ ತಂಡದಲ್ಲಿದ್ದ ವಿದ್ಯಾರ್ಥಿಗಳು (Students), ಸಮುದ್ರ ತಟದಲ್ಲಿರುವ ಕಲ್ಲುಗಳ ಮೇಲೆ ಸೆಲ್ಫಿ (selfie) ತೆಗೆಯಲು ಹತ್ತಿದ್ದರು ,ಈ ಸಂದರ್ಭದಲ್ಲಿ ಕಾಲು ಜಾರಿ ಕೆಳಗೆ ಬಿದ್ದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೈಂಟ್ ಮೇರಿಸ್ ದ್ವೀಪ ಮತ್ತು ಸೆಲ್ಫಿ ಸಾವುಗಳು: ಕರಾವಳಿಯ ಅತ್ಯಂತ ಸೇಫ್ ಬೀಚುಗಳಲ್ಲಿ ಉಡುಪಿಯ ಮಲ್ಪೆ ಮತ್ತು ಸೈಂಟ್ ಮೇರಿಸ್ ದ್ವೀಪ ಕೂಡ ಮಹತ್ವದ ಸ್ಥಾನ ಪಡೆದಿದೆ. ಆದರೆ ಇದೀಗ ಸೈಂಟ್ ಮೇರಿಸ್ ಸಾವಿನ ದ್ವೀಪವಾಗಿದೆ. ದುರಂತ ಏನಪ್ಪಾಂದ್ರೆ ಎಲ್ಲಾ 5 ಸಾವುಗಳು ಸೆಲ್ಫಿ ಕ್ರೇಜ್ ನಿಂದಲೇ ಉಂಟಾಗಿದೆ. ಸೋಮವಾರ ಕೂಡ ಸೆಲ್ಫಿ ತೆಗೆಯುವ ಭರದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ದ್ವೀಪದಲ್ಲಿರುವ ಲೈಫ್ ಗಾರ್ಡುಗಳು ಅಪಾಯದ ಎಚ್ಚರಿಕೆ ನೀಡಿದರೂ ಅದನ್ನ ಕಿವಿಗೆ ಹಾಕಿಕೊಳ್ಳದ ಪರಿಣಾಮ ಹಾವೇರಿಯ ಸತೀಶ್ ಎಂ ನಂದಿಹಳ್ಳಿ ಹಾಗೂ ಬಾಗಲಕೋಟೆಯ ಸತೀಶ್ ಕಲ್ಯಾಣಶೆಟ್ಟಿ ಎಂಬ ಯುವಕರು ಸಾವನ್ನಪ್ಪಿದ್ದಾರೆ.
CBSE 2022-23 Exam ಪರೀಕ್ಷಾ ಮಾದರಿಯ ಬಗ್ಗೆ ಇನ್ನೂ ನಿರ್ಧರಿಸದ ಸಿಬಿಎಸ್ಇ!
ಸತ್ತವರೆಲ್ಲ ವಿದ್ಯಾರ್ಥಿಗಳೇ: ಏಪ್ರಿಲ್ 7ರಂದು ಅಸುನಿಗಿದ ಮೂರು ವಿದ್ಯಾರ್ಥಿಗಳು ಕೇರಳ ಮೂಲದವರಾದರೆ, ಇಂದು ಬಲಿಯಾದ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದವರು. ರಾಜಧಾನಿಯ ಕೃಷಿ ಕಾಲೇಜಿನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ತಂಡ ಒಟ್ಟು 68 ಮಂದಿ ಸೈಂಟ್ ಮೇರೀಸ್ ದ್ವೀಪಕ್ಕೆ ಬಂದಿದ್ದರು. ಮಲ್ಪೆ ಬೀಚ್ ನೋಡಿಕೊಂಡು ಬೋಟಿನ ಮೂಲಕ ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳಿದ್ದರು. ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಿದ್ದ ಈ ಹುಡುಗರು, ಪ್ರತ್ಯೇಕವಾದ ಸ್ಥಳದಲ್ಲಿ ಸೆಲ್ಫಿ ತೆಗೆಯಲು ಹೋದರು. ಲೈಫ್ ಗಾರ್ಡ್ ಗಳು ಇದು ಅಪಾಯಕಾರಿ ಸ್ಥಳ ಎಂದು ಎಚ್ಚರಿಸಿದರೂ ಕಿವಿಗೆ ಹಾಕಿಕೊಂಡಿರಲಿಲ್ಲ.
ಎಪ್ರಿಲ್ 7 ಕ್ಕೆ ಮೂವರು ಬಲಿಯಾಗಿದ್ದರು: ಇದೇ ದೀಪಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದರು. ಅಂದು ಮುಳುಗಡೆಯಾದವರನ್ನು ಕೇರಳ ರಾಜ್ಯದ ಕೊಟ್ಟಾಯಂ ನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್( 22) ಮತ್ತು ಆ್ಯಂಟನಿ ಶೆಣೈ (21) ಎಂದು ಪತ್ತೆಹಚ್ಚಲಾಗಿತ್ತು.ಇವರ ಜೊತೆ ಪ್ರವಾಸಕ್ಕೆಂದು ಕೊಟ್ಟಾಯಂ ನಿಂದ 42 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರು ಬಂದಿದ್ದರು. ನೀರು ಪಾಲದ ವಿದ್ಯಾರ್ಥಿಗಳ ಪೈಕಿ ಓರ್ವ ಸೆಲ್ಫಿ ತೆಗೆಯುವ ಸಲುವಾಗಿ ದ್ವೀಪದ ಉತ್ತರ ಭಾಗಕ್ಕೆ ತೆರಳಿದ್ದ. ಸೈಂಟ್ ಮೇರಿಸ್ ದ್ವೀಪ ದ ಈ ಪರಿಸರ ಅಪಾಯಕಾರಿಯಾಗಿದ್ದು ಅಲ್ಲಿ ಎಚ್ಚರಿಕೆಯ ಕೆಂಪು ಬಾವುಟವನ್ನು ಕೂಡ ಹಾಕಲಾಗಿದೆ. ಆದರೆ ಇದ್ಯಾವುದಕ್ಕೂ ಗಮನ ನೀಡಿದ ವಿದ್ಯಾರ್ಥಿಗಳು ಮೋಜು-ಮಸ್ತಿಗೆ ಎಂದು ಈ ಪರಿಸರಕ್ಕೆ ತೆರಳಿದ್ದರು. ಸೆಲ್ಫಿ ತೆಗೆಯಲು ಹೋದ ಯುವಕ ಇದ್ದಕ್ಕಿದ್ದಂತೆ ನೀರಿಗೆ ಬಿದ್ದಿದ್ದಾನೆ, ಆತನನ್ನು ರಕ್ಷಿಸಲು ಮತ್ತಿಬ್ಬರು ನೀರಿಗೆ ಧುಮುಕಿದ್ದಾರೆ. ಆದರೆ ಸಮುದ್ರದ ಸುಳಿಯಲ್ಲಿ ಮೂರು ಜನ ಮುಳುಗಿದ್ದರು. ಮೂವರನ್ನೂ ಅಲೆಗಳು ಹೊತ್ತೊಯ್ದಿದ್ದವು.
ವಿಡಿಯೋ ಕಾಲ್‌ನಲ್ಲಿ ಯುವತಿಯ ಮೈಮಾಟಕ್ಕೆ ಸೋತು 90 ಸಾವಿರ ಕಳೆದುಕೊಂಡ ಯುವಕ..!
ಜೀವ ರಕ್ಷಿಸಿಕೊಳ್ಳಿ ವಿದ್ಯಾರ್ಥಿಗಳೇ: ಸಮುದ್ರ ಕಂಡೊಡನೆ ರೋಮಾಂಚನಗೊಳ್ಳುವ ಸಹಜ, ಅದರಲ್ಲೂ ಕರಾವಳಿಗೆ ಹೊರತಾದ ಜಿಲ್ಲೆಗಳಿಂದ ಯುವಕ-ಯುವತಿಯರು ಬಂದರೆ ಮುಗಿಬಿದ್ದು ಸಮುದ್ರದೆಡೆಗೆ ಧಾವಿಸುತ್ತಾರೆ. ತಮಗೆ ಈಜು ಬರುತ್ತದೆ ಎಂಬ ಭರವಸೆಯಲ್ಲಿ ನೀರಿಗಿಳಿಯುತ್ತಾರೆ. ಆದರೆ ನದಿ ನೀರಿನಲ್ಲಿ ಈಜುವುದಕ್ಕೂ, ಈಜುಕೊಳದಲ್ಲಿ ಈಜುವುದಕ್ಕೂ, ಸಮುದ್ರದಲ್ಲಿ ಅಲೆಗಳನ್ನು ಎದುರಿಸಿ ನಿಲ್ಲುವುದಕ್ಕೂ ಬಹಳ ವ್ಯತ್ಯಾಸವಿದೆ. ಮೇಲ್ನೋಟಕ್ಕೆ ಸಮುದ್ರ ಶಾಂತವಾಗಿರುವಂತೆ ಕಂಡರೂ, ಅಪಾಯದ ಆಳಗಳು ಸಮುದ್ರದ ತಟದಲ್ಲೇ ಇರುತ್ತವೆ. ಸೈಂಟ್ ಮೇರಿಸ್ ದ್ವೀಪ ದ ಚಿತ್ರಣ ಬದಲಾದಂತಿದೆ. ಹಿಂದೆಲ್ಲ ಈ ದ್ವೀಪದಲ್ಲಿ ಯಾವುದೇ ದುರ್ಘಟನೆ ಸಂಭವಿ ಸುತ್ತಿರಲಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಕೆಲವೆಡೆ ನೀರಿನ ಸುಳಿಗಳು ಉಂಟಾಗಿದ್ದು ಅಂತಹ ಪ್ರದೇಶಗಳಿಗೆ ಹೋಗದಂತೆ ಲೈಫ್ ಗಾರ್ಡುಗಳು ಎಚ್ಚರಿಸುತ್ತಾರೆ. ಆದರೆ ಇದನ್ನು ಪರಿಗಣಿಸದೆ ವಿದ್ಯಾರ್ಥಿಗಳು ಸೆಲ್ಫಿ ತೆಗೆಯಲು ಹೋಗಿ ಅಪಾಯ ಒಡ್ಡಿಕೊಳ್ಳುತ್ತಿದ್ದಾರೆ.