ಪಾಠ ಮಾಡಬೇಕಾದ ಶಿಕ್ಷಕರು ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಮಕ್ಕಳ ಮೇಲೆ ಕಾಳಜಿ ಇಲ್ಲ. ಮಗದೊಂದೆಡೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿ ಊಟ ಸಿಗುತ್ತಿಲ್ಲ. ಎನ್.ಆರ್.ಪುರ ತಾಲೂಕಿನ ಬಿ.ಕಣಬೂರು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಗೋಳು ಕೇಳೋರಿಲ್ಲ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.21) : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಅತ್ತ ಪಾಠವೂ ಇಲ್ಲ ಇತ್ತ ಬಿಸಿ ಊಟವೂ ಇಲ್ಲ ಎಂಬಂತಹಾ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು(Chikkamagaluru) ಜಿಲ್ಲೆ ಎನ್.ಆರ್.ಪುರ(N.R.Pura) ತಾಲೂಕಿನ ಬಿ.ಕಣಬೂರು(B.Kanabur) ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 117 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಶಾಲಾ ಅವಧಿಯಲ್ಲಿ ತರಗತಿಯೊಳಗೆ ಶಿಕ್ಷಕರು ಮೊಬೈಲ್ ನಲ್ಲಿ ತಲ್ಲೀನರಾಗಿರೋ ವಿಡಿಯೋವನ್ನ ಸ್ಥಳಿಯರು ಸೆರೆ ಹಿಡಿದು ಶಿಕ್ಷಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬಿಸಿಯೂಟದಲ್ಲಿ ಹಾವು: 30 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಪೋಷಕರಿಂದ ತೀವ್ರ ಆಕ್ರೋಶ
ಶಾಲಾ ಅವಧಿಯಲ್ಲಿ ಶಿಕ್ಷಕರು ಮಾಡಿದ್ದೇ ಪಾಠ, ಮಕ್ಕಳು ಆಡಿದ್ದೇ ಆಟ ಎಂಬಂತಹಾ ಸ್ಥಿತಿ ನಿರ್ಮಾಣವಾಗಿದೆ. ಕೊಠಡಿಯೊಳಗಡೆ ಮಕ್ಕಳು ಬೇಕಾಬಿಟ್ಟಿ ಗಲಾಟೆ ಮಾಡುತ್ತಿದ್ದರು ಕೂಡ ಶಿಕ್ಷಕರಾದವರು ಮಕ್ಕಳ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ತರಗತಿಯೊಳಗೆ ಶಿಕ್ಷಕರು ಮೊಬೈಲ್‌ನಲ್ಲಿ ತಲ್ಲೀನ
ಪಾಠ ಮಾಡಬೇಕಾದ ಶಿಕ್ಷಕರು ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವುದು ಒಂದು ಕಡೆ, ಇನ್ನೊಂದೆಡೆ ಮಕ್ಕಳ ಮೇಲೆ ಕಾಳಜಿ ಇಲ್ಲ. ಮಗದೊಂದೆಡೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿ ಊಟ ಸಿಗುತ್ತಿಲ್ಲ. ಹುಳ ಬಿದ್ದಿರುವ ಅಕ್ಕಿಯಲ್ಲಿ ಅನ್ನ ಮಾಡಿರುವ ವಿಡಿಯೋ ಕೂಡ ಸ್ಥಳೀಯರೇ ಸೆರೆಹಿಡಿದಿದ್ದು, ಸರ್ಕಾರ ಹಾಗೂ ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮುದ್ದೆ, ಜೋಳದ ರೊಟ್ಟಿ
ಶಾಲಾ ಮಕ್ಕಳಿಗೆ ರುಚಿಯಾದ ಅಡುಗೆ ಸಿಗುತ್ತಿಲ್ಲ. ದಿನನಿತ್ಯ ಸಪ್ಪೆಯಾಗಿರುವ ಅಡುಗೆ, ಹುಳ ಕಸಕಡ್ಡಿ ಇರುವ ಅಡುಗೆ ಮಾಡುವುದರಿಂದ ಪೋಷಕರು ಚಿಂತೆಗೀಡಾಗಿದ್ದಾರೆ. ಹುಳ ಬಿದ್ದ ಅಡುಗೆಯಲ್ಲೇ ಊಟ ಮಾಡುವ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಆದರೆ ಅಡುಗೆಯವರಿಗೆ ಬೇಕಾದ ಪದಾರ್ಥಗಳನ್ನು ಶಾಲಾ ಶಿಕ್ಷಕರೇ ತಂದುಕೊಡುವುದಿಲ್ಲವಂತೆ. 'ಏನನ್ನ ಕೇಳಿದರೂ ತಂದುಕೊಡುವುದಿಲ್ಲ. ಸಾಸಿವೆ ಬೇಡ ಅಂತಾರೆ. ಹುಳಿ ಬೇಡ ಅಂತಾರೆ. ಏನೂ ಬೇಡ..ಬೇಡ...ಅಂತಾರೆ. ಅಡುಗೆ ಮಾಡುವುದು ಹೇಗೆ? ನಮಗೆ ಬರುವುದೇ ಮೂರು ಕಾಸು ಸಂಬಳ ನಾವು ಮನೆಯಿಂದ ತಂದು ಮಾಡಲು ಸಾಧ್ಯವೇ ಎಂದು ಬಿಸಿಯೂಟ ಕಾರ್ಯಕರ್ತರು ಕೂಡ ಅಸಮಾಧಾನ ಹಾಕಿದ್ದಾರೆ. ಪೋಷಕರು ಇದು ಸರ್ಕಾರಿ ಶಾಲೆಯ ಅಥವಾ ಖಾಸಗಿ ಶಾಲೆಯ ಎಂದು ಶಾಲಾಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ.