* ಪಠ್ಯಪುಸ್ತಕ ವಿವಾದದ ಹೊಣೆ ಸಚಿವರೇ ಹೊರಬೇಕು
* ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಲು ಒತ್ತಾಯ
* ಸತ್ಯ ಮರೆಮಾಚುವುದೇ ಸರ್ಕಾರದ ಕಾಯಕವಾಗಿದೆ
ಬೆಂಗಳೂರು(ಜೂ.09): ವಿವಾದಾತ್ಮಕ ಪಠ್ಯಪುಸ್ತಕ ತಿರಸ್ಕರಿಸಿ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರೆಸಬೇಕು, ವಿವಾದದ ಜವಾಬ್ದಾರಿ ಹೊತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಜೀನಾಮೆ ನೀಡಬೇಕು ಎಂದು ‘ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ’ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಗಣ್ಯರು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಶಾಲಾ ಪಠ್ಯ ಪುಸ್ತಕಗಳ ತಿರುಚುವಿಕೆಯ ವಿರುದ್ಧದ ಸಮಾವೇಶ’ದಲ್ಲಿ ಮಾತನಾಡಿದ ಶಿಕ್ಷಣ ತಜ್ಞರು, ಸಾಹಿತಿಗಳು, ಚಿಂತಕರು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪಠ್ಯ ಪುಸ್ತಕ ಪರಿಷ್ಕರಿಸಲಾಗಿದೆ. ಆದ್ದರಿಂದ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರೆಸಬೇಕು. ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರಿಗೆ ಕುಮ್ಮಕ್ಕು ನೀಡಿದ ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘ಸಂವಿಧಾನದ ಚೌಕಟ್ಟು ಮತ್ತು ಆಶಯಗಳಿಗೆ ಅನುಗುಣವಾಗಿ ಪಠ್ಯಪುಸ್ತಕ ಬದಲಾವಣೆ ಮಾಡಿಲ್ಲ. ಹಾಗಾಗಿ ಹೊಸ ಪಠ್ಯಗಳನ್ನು ಮಕ್ಕಳಿಗೆ ವಿತರಿಸದೇ ಹಳೆಯ ಪುಸ್ತಕಗಳನ್ನೇ ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.
‘ನಾವು ಬದಲಾವಣೆ ವಿರೋಧಿಗಳಲ್ಲ. ಬದಲಾವಣೆ ಮಾಡುವಾಗ ಯಾವ ವಿಧಾನ ಅನುಸರಿಸಲಾಗಿದೆ ಎಂಬುದು ಮುಖ್ಯ. 8ನೇ ತರಗತಿಯಲ್ಲಿ ‘ಭಾರತದ ಭೌಗೋಳಿಕ ಶಾಸ್ತ್ರ’ ಪಾಠ ಕೈಬಿಟ್ಟು ‘ಭರತ ವರ್ಷ’ ಎಂಬ ಪಾಠ ಸೇರಿಸಲಾಗಿದೆ. ಇದರಲ್ಲಿ ಪಾಕಿಸ್ತಾನ, ಅಷ್ಘಾನಿಸ್ತಾನ, ಬಾಂಗ್ಲಾದೇಶ, ಚೀನಾ ಭಾರತಕ್ಕೆ ಸೇರಿದ್ದು ಎಂದು ಸೇರಿಸಲಾಗಿದೆ. ಇದನ್ನು ಓದಿದ ಮಕ್ಕಳು ಈ ದೇಶಗಳ ವಿರುದ್ಧ ಹೋರಾಡಬೇಕಾ?’ ಎಂದು ಪ್ರಶ್ನಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ನಾವು ವಿಷವರ್ತುಲದಲ್ಲಿ ಸಿಲುಕಿದ್ದೇವೆ. ದೇಶಭಕ್ತಿಯ ಬದಲು ದ್ವೇಷಭಕ್ತಿ ಬೆಳೆಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವರ್ಣ ವ್ಯವಸ್ಥೆ ದೃಢಗೊಳಿಸುವ ಹುನ್ನಾರ ಇದಾಗಿದೆ. ಸಂವಿಧಾನದ ಅಂಶಗಳನ್ನು ಅಳವಡಿಸದೇ ಆರ್‌ಎಸ್‌ಎಸ್ ಪಾಠಗಳನ್ನು ಅಳವಡಿಸಲಾಗುತ್ತಿದೆ. ಮಕ್ಕಳು ಇದಕ್ಕೆ ಬಲಿಯಾಗಬೇಕೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿದರು.
‘ಸತ್ಯ ಮರೆಮಾಚುವುದೇ ಸರ್ಕಾರದ ಕಾಯಕವಾಗಿದೆ. ಈಗ ಇರುವುದು ಸ್ವಾಯತ್ತ ಸರ್ಕಾರವೂ ಅಲ್ಲ, ಸಾರ್ವಭೌಮ ಸರ್ಕಾರವೂ ಅಲ್ಲ. ಇದು ನಾಗಪುರ ಮಾಲೀಕರ ಗುಲಾಮ ಸರ್ಕಾರವಾಗಿದೆ’ ಎಂದು ಟೀಕಿಸಿದರು.
ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮುರಿಗೆಪ್ಪ, ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ, ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮತ್ತಿತರರು ಹಾಜರಿದ್ದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಬೆಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಶಾಲಾ ಪಠ್ಯ ಪುಸ್ತಕಗಳ ತಿರುಚುವಿಕೆಯ ವಿರುದ್ಧದ ಸಮಾವೇಶ’ದಲ್ಲಿ ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.