ಬೆಂಗಳೂರು (ಜು.15): ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಯಾವುದೇ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದೆ ಪರೀಕ್ಷೆಯಿಂದ ವಂಚಿತರಾಗಕೂಡದು. ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್ ಟಿಕೆಟ್ ದೊರಕಿಸಲು ಕ್ರಮ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು (ಡಿಡಿಪಿಐ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಲ್ಲದೆ, ಸಂಬಂಧಪಟ್ಟಶಾಲಾ ಮುಖ್ಯಸ್ಥರುಗಳು ಕೂಡ ತಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಹಾಲ್ ಟಿಕೆಟ್ ನೀಡಲು ಕ್ರಮ ವಹಿಸಬೇಕು. ಯಾವುದೇ ವಿದ್ಯಾರ್ಥಿ ಹಾಲ್ ಟಿಕೆಟ್ ದೊರೆಯದೆ ಮಾನಸಿಕ ಸಮಸ್ಯೆ, ಆತಂಕಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದೆ.
SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟ ಶಿಕ್ಷಣ ಇಲಾಖೆ
ಪೂರ್ಣ ಶುಲ್ಕ ವಸೂಲಿಗೆ ಹೊಸ ಮಾರ್ಗ ಹುಡುಕಿದ್ದ ಕೆಲ ಖಾಸಗಿ ಶಾಲೆಗಳು ಬಾಕಿ ಶುಲ್ಕ ಪಾವತಿಸದಿದ್ದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ತಮ್ಮ ಶಾಲೆಯ ಮಕ್ಕಳು ಹಾಗೂ ಪೋಷಕರನ್ನು ಸತಾಯಿಸುತ್ತಿರುವ ಆರೋಪಗಳು ಕೇಳಿಬಂದಿದ್ದವು. ಎಚ್ಚೆತ್ತ ಶಿಕ್ಷಣ ಇಲಾಖೆ ಈ ಸಂಬಂಧ ಎಲ್ಲ ಶಾಲೆಗಳ ಮುಖ್ಯಸ್ಥರು ಹಾಗೂ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಖಡಕ್ ಸೂಚನೆ ರವಾನಿಸಿದೆ.
ಸುತ್ತೋಲೆ: ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧ್ಯಕ್ಷರೂ ಆದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಜು.19 ಮತ್ತು 22ರಂದು ನಿಗದಿಯಾಗಿರುವ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಹಾಲ್ ಟಿಕೆಟ್‌ಗಳನ್ನು ಆಯಾ ಶಾಲೆಗಳಿಗೆ ಕಳುಹಿಸಲಾಗಿದೆ. ಶಾಲೆಯ ಪ್ರಾಂಶುಪಾಲರು ತಮ್ಮ ಲಾಗಿನ್ ಮೂಲಕ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಲಾಗಿದೆ. ಬಹುತೇಕ ಶಾಲೆಗಳು ಅದರಂತೆ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿವೆ.
ಆದರೆ, ಕೆಲ ಶಾಲೆಗಳು ಬಾಕಿ ಶುಲ್ಕ ವಸೂಲಿ ಹೆಸರಲ್ಲಿ ಹಾಲ್ ಟಿಕೆಟ್ ನೀಡದಿರುವ ಬಗ್ಗೆ ವರದಿಗಳಾಗಿವೆ. ಯಾವುದೇ ಕಾರಣಕ್ಕೂ ಹಾಲ್‌ಟಿಕೆಟ್ ಸಿಗದೆ ಯಾವೊಬ್ಬ ವಿದ್ಯಾರ್ಥಿಯೂ ಆತಂಕ, ಮಾನಸಿಕ ಸಮಸ್ಯೆಗೆ ಒಳಗಾಗುವುದಾಗಲಿ, ಪರೀಕ್ಷೆಯಿಂದ ವಂಚಿತರಾಗುವುದಾಗಲಿ ನಡೆಯಕೂಡದು. ಆಯಾ ಶಾಲಾ ಮುಖ್ಯಸ್ಥರು, ಸಂಬಂಧಿಸಿದ ಬಿಇಒಗಳು ಮತ್ತು ಡಿಡಿಪಿಐಗಳು ನಿಗದಿತ ಅವಧಿಯೊಳಗೆ ಎಲ್ಲ ಮಕ್ಕಳಿಗೂ ಹಾಲ್ ಟಿಕೆಟ್ ತಲುಪಲು ಕ್ರಮ ವಹಿಸಬೇಕು. ಈ ವಿಚಾರದಲ್ಲಿ ಅಗತ್ಯಬಿದ್ದರೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಅಧಿಕಾರಿಗಳು ಸಂಪರ್ಕಿಸಬಹುದು. ಒಟ್ಟಿನಲ್ಲಿ ಯಾವ ಮಕ್ಕಳೂ ಪರೀಕ್ಷೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪರ್ಯಾಯ ದಾಖಲೆಗೆ ಅವಕಾಶ ಕೊಡಿ - ಸಚಿವರಿಗೆ ಪತ್ರ
ಈ ಮಧ್ಯೆ, ಖಾಸಗಿ ಶಾಲೆಗಳ ಶುಲ್ಕ ಶೋಷಣೆಯಿಂದ ಮಕ್ಕಳು ಮತ್ತು ಪೋಷಕರಲ್ಲಿ ಉಂಟಾಗಿರುವ ಆತಂಕ ನಿವಾರಿಸಲು ಈ ಬಾರಿ ಹಾಲ್ ಟಿಕೆಟ್ ಬದಲು ಮಕ್ಕಳ ಶಾಲಾ ಗುರುತಿನ ಚೀಟಿ, ಸ್ಟೂಟೆಂಟ್ಸ್ ಅಚೀವ್ಮೆಂಟ್ ಟ್ರಾಕಿಂಗ್ ಸಂಖ್ಯೆ(ಎಸ್‌ಎಎಸ್‌ಟಿ) ಸೇರಿದಂತೆ ಇತರೆ ಪರ್ಯಾಯ ದಾಖಲೆ ಇದ್ದರೂ ಸಾಕು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಯೋಗಾನಂದ ಸೇರಿದಂತೆ ಎಲ್ಲ ಸದಸ್ಯರು, ಹೇಗಿದ್ದರೂ ಈ ಬಾರಿ ಪರೀಕ್ಷೆಗೆ ನೀಡುವ ಒಎಂಆರ್ ಶೀಟ್‌ನಲ್ಲಿ ಆಯಾ ವಿದ್ಯಾರ್ಥಿಯ ಹೆಸರು, ಫೋಟೋ, ಪರೀಕ್ಷಾ ಪ್ರವೇಶ ಪತ್ರದ ಸಂಖ್ಯೆ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ಪೂರ್ವ ಮುದ್ರಣವಾಗಿರುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಮಾಹಿತಿಯನ್ನು ಪರ್ಯಾಯ ದಾಖಲೆಗಳ ಮೂಲಕ ಪರಿಶೀಲಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಸಂಬಂಧ ಕೂಡಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.