
ಬೆಂಗಳೂರು(ಜೂ.14): ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಸೂಚಿಸಿರುವ ಅಸೈನ್ಮೆಂಟ್ ಮಾದರಿಯ ಮೌಲ್ಯಾಂಕನ ಪರೀಕ್ಷೆ ನಡೆಸಲು ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೋವಿಡ್‌ನಿಂದಾಗಿ ಪ್ರಥಮ ಪಿಯುಸಿ ಮಕ್ಕಳನ್ನು ಈಗಾಗಲೇ ಸಾಮೂಹಿಕವಾಗಿ ಪಾಸ್ ಮಾಡಿದ್ದರೂ ಕೂಡ ವಿದ್ಯಾರ್ಥಿವೇತನ ಸೌಲಭ್ಯ, ದ್ವಿತೀಯ ಪಿಯುಸಿ ದಾಖಲಾತಿ ಸೇರಿದಂತೆ ಶೈಕ್ಷಣಿಕ ಹಿತದೃಷ್ಟಿಯಿಂದ ಅಂಕ ಆಧಾರಿತ ಫಲಿತಾಂಶ ದಾಖಲಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಅವರಿಗೆ ಮನೆಯಲ್ಲೇ ಮೌಲ್ಯಾಂಕನ ಪರೀಕ್ಷೆ ನಡೆಸಲು ಸೂಚಿಸಿದೆ.
ಶೈಕ್ಷಣಿಕ ವರ್ಷ ಆರಂಭ: ಶಾಲೆಗೆ ಮಕ್ಕಳ ಪ್ರವೇಶ ನಾಳೆಯಿಂದ ಶುರು
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಉಪನ್ಯಾಸಕರಿಗೆ ಸಾಕಷ್ಟು ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲವರ ಮೊಬೈಲ್ ನಂಬರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಕೆಲವರದ್ದು ಸ್ವಿಚ್ಡ್ ಆಫ್ ಇದೆ. ಸಂಪರ್ಕಕ್ಕೆ ಸಿಕ್ಕ ಕೆಲವರಲ್ಲಿ ಆ್ಯಂಡ್ರಾಯ್ಡ್ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯಗಳಿಲ್ಲ. ಕೋವಿಡ್, ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹೇಗೆ ಸಂಪರ್ಕಿಸಬೇಕೆಂಬುದು ತಿಳಿಯುತ್ತಿಲ್ಲ ಎಂದು ಉಪನ್ಯಾಕಸರು ಸಮಸ್ಯೆಗಳ ಸರಮಾಲೆಯನ್ನೇ ನೀಡುತ್ತಿದ್ದಾರೆ.
ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲಾ ವಿಷಯಗಳಿಗೂ ಸಂಬಂಧಿಸಿದ ಸಮಾನ ಪ್ರಶ್ನೆಗಳನ್ನೊಳಗೊಂಡ ಎರಡು ಪ್ರಶ್ನೆ ಪತ್ರಿಕೆಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಅದರ ಲಿಂಕ್‌ಅನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ನಂಬರ್‌ಗೆ ಕಳುಹಿಸಲಾಗಿದೆ. ಇದು ತಲುಪದ ಮಕ್ಕಳಿಗೆ ಆಯಾ ಕಾಲೇಜುಗಳ ಮಾಹಿತಿ ನೀಡಿ ಆ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮದೇ ಹಾಳೆಯಲ್ಲಿ ಉತ್ತರಿಸಿ ಸ್ಯಾನ್ ಮಾಡಿ ವಾಟ್ಸಾಪ್, ಇ-ಮೇಲ್ ಅಥವಾ ಅಂಚೆ ಮೂಲಕ ಕಾಲೇಜುಗಳಿಗೆ ಕಳುಹಿಸಲು ಸೂಚಿಸಲಾಗಿದೆ.