ಶೈಕ್ಷಣಿಕ ವರ್ಷ ಆರಂಭ: ಶಾಲೆಗೆ ಮಕ್ಕಳ ಪ್ರವೇಶ ನಾಳೆಯಿಂದ ಶುರು

By Kannadaprabha News  |  First Published Jun 14, 2021, 11:50 AM IST

* ಶಿಕ್ಷಕರಿಗೆ ಶಾಲೆಗೆ ತೆರಳಲು ಸೂಚನೆ
* ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಆ.30ರೊಳಗೆ ಕಾಲಾವಕಾಶ
*  ಜು.1ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭ 


ಬೆಂಗಳೂರು(ಜೂ.14):  ರಾಜ್ಯದಲ್ಲಿ 2021-22ನೇ ಸಾಲಿನ ಜೂ. 15ರಿಂದ ಆರಂಭವಾಗಲಿದ್ದು, ಅಂದಿನಿಂದಲೇ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.

ಶಿಕ್ಷಣ ಇಲಾಖೆ ಜುಲೈ 1ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಇಲಾಖೆ ಸೂಚಿಸಿದ್ದರೂ ಜೂ.15ರಿಂದ 30ರವರೆಗೆ ಶಿಕ್ಷಕರು ಶಾಲೆಗೆ ಹಾಜರಾಗಿ ಶಾಲಾ ಸ್ವಚ್ಛತೆ, ಪ್ರವೇಶ ಪ್ರಕ್ರಿಯೆ ಸೇರಿದಂತೆ ಶಾಲಾ ಪ್ರಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಿದೆ. 

Latest Videos

undefined

ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್‌ 30ರೊಳಗೆ ಕಾಲಾವಕಾಶ ನೀಡಲಾಗಿದೆ. ಜು.1ರಿಂದ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬಹುದು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳಿಗೆ ಭೌತಿಕ ತರಗತಿ ನಡೆಸುವಂತಿಲ್ಲ. ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಗತಿಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.

ಮುಗಿಯದ ಕೊರೋನಾ ಗೋಳು: ಮೊಬೈಲಲ್ಲೇ ಪಾಠಕ್ಕೆ ಶಿಕ್ಷಣ ಇಲಾಖೆ ಅಣಿ..!

ಶಿಕ್ಷಕರು ಈ 15 ದಿನಗಳಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ಚರ್ಚಿಸುವುದು. ಶಾಲಾ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿ, ಶಾಲಾ ಪಂಚಾಂಗ ಸಿದ್ಧಪಡಿಸುವುದು. ಮುಖ್ಯ ಶಿಕ್ಷಕರು ತರಗತಿ ಶಿಕ್ಷಕರನ್ನು ನೇಮಿಸುವುದು. ಹಿಂದಿನ ವರ್ಷದ ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ಹಾಜರಾತಿ ವಹಿ ಸಿದ್ದಪಡಿಸುವುದು. ದಾಖಲಾತಿ ಆಂದೋಲನ ನಡೆಸುವುದು. ಅಲ್ಲದೆ, ಪೋಷಕರ ಬಳಿ ಟಿವಿ, ಆ್ಯಂಡ್ರಾಯ್ಡ್‌ ಮೊಬೈಲ್‌, ರೇಡಿಯೋ, ಕಂಪ್ಯೂಟರ್‌, ಇಂಟರ್ನೆಟ್‌ ಸೇರಿ ಯಾವೆಲ್ಲಾ ತಾಂತ್ರಿಕ ಸೌಲಭ್ಯಗಳಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. 

1ರಿಂದ 10ನೇ ತರಗತಿ ಮಕ್ಕಳಿಗೆ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗುವ ಸಂವೇದಾ ಕಲಿಕಾ ಕಾರ್ಯಕ್ರಮ, ಎಫ್‌ಎಂ ರೇಡಿಯೋದಲ್ಲಿ ಪ್ರಸಾರವಾಗುವ ರೇಡಿಯೋ ಪಾಠ, ಕೇಂದ್ರ ಸರ್ಕಾರದ ದೀಕ್ಷಾ ಆ್ಯಪ್‌ನಲ್ಲಿ ಇರುವ ಕಲಿಕೆಗೆ ಯಾವೆಲ್ಲಾ ಅವಕಾಶಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.
 

click me!