ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಜ. 20ರಂದು ಕಾರ್ಯದರ್ಶಿಗಳ, ಅಧಿಕಾರಿಗಳ ಸಭೆ ಕರೆದಿದ್ದು, ಅದನ್ನು ಹಿಂಪಡೆಯಲು ಸೂಚಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಹೇಳಿದರು.
ಹುಬ್ಬಳ್ಳಿ (ಜ.18) : ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಜ. 20ರಂದು ಕಾರ್ಯದರ್ಶಿಗಳ, ಅಧಿಕಾರಿಗಳ ಸಭೆ ಕರೆದಿದ್ದು, ಅದನ್ನು ಹಿಂಪಡೆಯಲು ಸೂಚಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಮಾಡಲು ಶಿಕ್ಷಣ ಇಲಾಖೆ 250ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಯಲ್ಲಿನ ಹೆಚ್ಚುವರಿ ಶಿಕ್ಷಕರನ್ನು ವರ್ಗಾಯಿಸಲು ಮುಂದಾಗಿದೆ. ಇಂತಹ ಅವೈಜ್ಞಾನಿಕ ಕೆಲಸ ಮಾಡಲು ಇಲಾಖೆ ಮುಂದಾದಾಗ ಸರ್ಕಾರ ಕಣ್ಮುಚ್ಚಿ ಕುಳಿತುಕೊಳ್ಳಬಾರದು. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಹಿಂಪಡೆಯಲು ಹೇಳುತ್ತೇನೆ. ಇಲ್ಲದಿದ್ದರೆ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಲಾಗುವುದು’ ಎಂದು ಹೇಳಿದರು.
ಹೊರಟ್ಟಿ ಮೇಲ್ವರ್ಗ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಕಲಿಲ್ಲವೇ?: ಕಾಂಗ್ರೆಸ್ ಸಿಡಿಮಿಡಿ
ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿಗೆ ಇದ್ದರೂ ಶಿಕ್ಷಕರನ್ನು ವರ್ಗಾಯಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕನಿಷ್ಠ ಬುದ್ಧಿಯೂ ಇಲ್ಲದಂತಾಗಿದೆ. ರೀತಿ, ನೀತಿಯಿಲ್ಲದ ಕಾಯ್ದೆಗಳು ಕನ್ನಡ ಶಾಲೆಗಳಿಗೆ ಮಾರಕವಾಗುತ್ತಿವೆ. ಇಂತಹ ಅಧಿಕಾರಿಗಳಿಂದಲೇ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರಿಗೆ ಅಧಿಕಾರಿಯೊಬ್ಬರು ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಮಾಹಿತಿ ಸಚಿವರಿಗೆ ತಿಳಿದಿಲ್ಲದ ಕಾರಣ, ಅಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದ ಹಾಗೆ ಅವರು ಕೇಳುತ್ತಿದ್ದಾರೆ. ಸಚಿವರ ಜೊತೆ ಆ ಕುರಿತು ಮಾತನಾಡಿದ್ದು, ಅಧಿಕಾರಿಗಳ ಜೊತೆ ಚರ್ಚಿಸಲು ತಿಳಿಸಿದ್ದೇನೆ ಎಂದರು.
ಯಾರದ್ದೇ ಆಡಳಿತ ಬರಲಿ, ಅಧಿಕಾರಿಗಳು ಅವರೇ ಆಗಿರುತ್ತಾರೆ. ಅವರು ತಮಗೆ ಹೇಗೆ ಬೇಕೋ ಹಾಗೆ ಸಚಿವರಿಗೆ ಹೇಳುತ್ತಾರೆ. ಕೆಲವು ಬಾರಿ ಸಚಿವರು ಒತ್ತಡದಲ್ಲಿದ್ದಾಗ ಕಡತಕ್ಕೆ ಸಹಿ ಹಾಕುತ್ತಾರೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.
ಮುಖ್ಯಮಂತ್ರಿ ನಮ್ಮ ಭಾಗದವರೇ ಆಗಿರುವುದರಿಂದ ಈ ಬಾರಿ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಶೇ 60ರಷ್ಟುಪಾಲು ದೊರೆಯುವ ವಿಶ್ವಾಸವಿದೆ. ಹೀಗೆ ಶೇ. 60ರಿಂದ 65ರಷ್ಟುಪಾಲು ಕೊಟ್ಟರೆ ಮಾತ್ರ ನನೆಗುದಿಗೆ ಬಿದ್ದಿರುವ ಯೋಜನೆಗಳೆಲ್ಲ ಪೂರ್ಣಗೊಳ್ಳಲಿವೆ. ಕೊಡದೇ ಇದ್ದರೆ ನಮ್ಮವರೇ ಮುಖ್ಯಮಂತ್ರಿಗಳಾಗಿ ಏನು ಪ್ರಯೋಜನ? ಎಂದು ಪ್ರಶ್ನಿಸಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಅಭಿವೃದ್ಧಿಯಾಗಬೇಕಿದೆ. ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಬಜೆಟ್ ಪೂರ್ವ ಸಭೆಗೆ ನಂಜುಂಡಪ್ಪ ವರದಿ ಅನುಷ್ಠಾನದ ಮಾಹಿತಿಯನ್ನು ಕೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದೆ. ಹೀಗಾಗಿ ಖಂಡಿತ ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಆದ್ಯತೆ ಸಿಗುತ್ತದೆ ಎಂದ ಅವರು, ಬೊಮ್ಮಾಯಿ ಅವರು ಅಧಿಕಾರಿಗಳ ಮಾತು ಕೇಳುವ ಜತೆಗೆ, ತಮ್ಮ ಬುದ್ಧಿಯನ್ನು ಸಹ ಖರ್ಚು ಮಾಡುತ್ತಾರೆ ಎಂದರು.
ಕರ್ನಾಟಕದ ಕಾಲೇಜನ್ನು ಆಯ್ಕೆ ಮಾಡದ ಸಿಇಟಿ ಟಾಪರ್ಸ್!
ರಾಜಕಾರಣ ಸಂಪೂರ್ಣ ಕಲುಷಿತವಾಗಿದೆ. ಜನರು ಆಮಿಷಕ್ಕೆ ಒಳಗಾಗದೆ ಒಳ್ಳೆಯವರಿಗೆ ಮತ ನೀಡುವಂತಾಗಬೇಕು. ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಈಗಾಗಲೇ ಒಂದು ಬಾರಿ ತರಬೇತಿ ನೀಡಲಾಗಿದೆ. ಮತ್ತೊಮ್ಮೆ ತರಬೇತಿ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.