ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ; ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರು

By Suvarna News  |  First Published Oct 29, 2021, 2:33 AM IST

* ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ರೂಪಾಂತರ: ಅಶ್ವತ್ಥನಾರಾಯಣ 
* ಶಿಕ್ಷಣದಲ್ಲಿ ಕ್ರಾಂತಿಕಾರಕ ಡಿಜಿಟಲ್ ಬದಲಾವಣೆ
* ಎಲ್ಲ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯ


ಬಳ್ಳಾರಿ(ಅ. 29)  ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಅನ್ವಯಿಕತೆಯ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ನಾಸ್ಕಾಂ ನಡುವಿನ ಒಡಂಬಡಿಕೆಗೆ ಮತ್ತು ಎನ್ಇಪಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಈ ಕಾರ್ಯಾಗಾರವು ಇಲ್ಲಿನ ಬಳ್ಳಾರಿ ಇಂಜಿನಿಯರಿಂಗ್ ಸಂಸ್ಥೆ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು. 

Tap to resize

Latest Videos

undefined

ದೇಶದ ಮಿಲಿಟರಿ ವಿಭಾಗದಲ್ಲಿ ಡಿಜಿಟಲ್ ಕ್ರಾಂತಿ

ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. 

 ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹುಶಿಸ್ತೀಯ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ನೋಡುತ್ತಿದೆ ಎಂದು ಸಚಿವರು ನುಡಿದರು. 

ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳ ಆಡುಂಬೊಲವಾಗಿದೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಎನ್ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿತನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಅನುಭವನಿಷ್ಠ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. 

ಇಂಜಿನಿಯರಿಂಗ್ ನಲ್ಲಿ ಈಗಾಗಲೇ ಆಂತರಿಕ ಮೌಲ್ಯಮಾಪನವನ್ನು ಪ್ರತೀ ವಿಷಯಕ್ಕೆ 50 ಅಂಕಗಳಿಗೆ ಹೆಚ್ಚಿಸಲಾಗಿದೆ. ಪದವಿ ಶಿಕ್ಷಣದಲ್ಲೂ ಇದೇ ವ್ಯವಸ್ಥೆ ಜಾರಿಯಾಗಲಿದೆ. ಇದರನ್ವಯ, 45 ನಿಮಿಷಗಳ ಬೋಧನೆ ಮತ್ತು 15 ನಿಮಿಷಗಳ ಆಂತರಿಕ ಮೌಲ್ಯಮಾಪನ ಎಲ್ಲೆಡೆ ಬರಲಿದೆ. ಇದರ ಜತೆಗೆ ಅತ್ಯುತ್ತಮ ವಿದೇಶೀ ವಿ.ವಿ.ಗಳೊಂದಿಗೆ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. 

ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ ಸಿ ಕೆ.ಸಿ.ಕೊಂಡಯ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ., ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ,  ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಬಿಐಇಟಿ ಅಧ್ಯಕ್ಷ ಯಶವಂತ್ ಭೂಪಾಲ್ ಉಪಸ್ಥಿತರಿದ್ದರು. 

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ; ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಗುರಿಯಿಂದ `ಅನ್ಅಕಾಡೆಮಿ’ ಎನ್ನುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಲೇಜುಗಳಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಅವರು, ಮ್ಯಾತ್ಸ್ ವರ್ಕ್ ಸಲ್ಲೂಷನ್ಸ್ ಸಂಸ್ಥೆಗಳ ಶೈಕ್ಷಣಿಕ ಮಾರ್ಗದರ್ಶನದಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಹೊಸದಾಗಿ 21 ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಿರುವುದನ್ನು ಶ್ಲಾಘಿಸಿದರು. 

ಅಲೆಮಾರಿ ಸಮುದಾಯದ ಪ್ರತಿಭೆಗೆ ಶಹಬ್ಬಾಷ್!: ಕಾರ್ಯಕ್ರಮದಲ್ಲಿ ಕೂಡ್ಲಿಗಿಯ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಸೈಬರ್ ಸೆಕ್ಯುರಿಟಿ ಡಿಪ್ಲೊಮಾ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ, ಅಲೆಮಾರಿ ಸಮುದಾಯದ ಮೌನೇಶನಿಗೆ ಸಚಿವರು ಟ್ಯಾಬ್ ಕೊಟ್ಟು ಸನ್ಮಾನಿಸಿದರು. ಈ ಕ್ಷಣಕ್ಕೆ ಆತನ ತಂದೆ-ತಾಯಿಗಳೂ ಸಾಕ್ಷಿಯಾದರು. 

ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಈತ ಬಡತನದ ಕಾರಣದಿಂದಾಗಿ ವಿದ್ಯಾಭ್ಯಾಸವನ್ನೇ ನಿಲ್ಲಿಸಿ, ಮನೆಯಲ್ಲಿದ್ದ. ಈ ಸಂಗತಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ ಗೊತ್ತಾದ ನಂತರ, ಸಂಬಂಧಿಸಿದ ಅಧಿಕಾರಿಗಳು ಕೂಡ್ಲಿಗಿಯ ಪಾಲಿಟೆಕ್ನಿಕ್ ಗೆ ತಂದು ಸೇರಿಸಿ, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ನಾನು ಉನ್ನತ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಈ ಹುದ್ದೆಗೆ ಬರುವುದಕ್ಕಿಂತಲೂ ಮೊದಲೇ ನಾನು ಶಿಕ್ಷಣದ ಶಕ್ತಿ ಏನೆನ್ನುವುದನ್ನು ಕಂಡಿದ್ದೇನೆ. ಗುಣಮಟ್ಟದ ಶಿಕ್ಷಣವೊಂದೇ ನಮ್ಮ ಶಕ್ತಿ. ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ಮತ್ತು ಉಜ್ವಲ ಭವಿಷ್ಯ ನಿರ್ಮಾಣವೇ ನಮ್ಮ ಗುರಿ ಎಂದು ಸಚಿವರು ತಿಳಿಸಿದರು.

click me!