ಮದರಸಾಗಳಲ್ಲಿ ಸಾಮಾನ್ಯ ಶಿಕ್ಷಣಕ್ಕೆ ಮುಸ್ಲಿಮರಿಂದ ಬೇಡಿಕೆ: ಬಿ.ಸಿ. ನಾಗೇಶ್‌

By Kannadaprabha News  |  First Published Jul 20, 2022, 1:30 AM IST

ಶೈಕ್ಷಣಿಕವಾಗಿ ಹಿಂದುಳಿದಿರುವ ಆ ಸಮುದಾಯದ ಮಕ್ಕಳು ಮುಂದಿನ ದಿನಗಳಲ್ಲಾದರೂ ಸಾಮಾನ್ಯ ಶಿಕ್ಷಣದೊಂದಿಗೆ ಮುಂದೆ ಬರಬೇಕೆಂಬುದು ಆ ಸಮುದಾಯದ ಪ್ರಜ್ಞಾವಂತರ ಆಶಯ


ಬೆಂಗಳೂರು(ಜು.20):  ರಾಜ್ಯದ ಮದರಸಾಗಳಲ್ಲೂ ಸಾಮಾನ್ಯ ಶಿಕ್ಷಣ ನೀಡಬೇಕು, ಈ ನಿಟ್ಟಿನಲ್ಲಿ ಅಗತ್ಯ ಪಠ್ಯಪರಿಷ್ಕರಣೆಯೂ ಆಗಬೇಕೆಂಬ ಬೇಡಿಕೆಗಳು ಮುಸ್ಲಿಂ ಸಮುದಾಯದಿಂದ ಬಂದಿದೆ. ಆದರೆ, ಸದ್ಯಕ್ಕೆ ಇದನ್ನು ಜಾರಿ ಮಾಡುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ. ಭವಿಷ್ಯದಲ್ಲಿ ಈ ಬಗ್ಗೆ ಯೋಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಮದರಸಾಗಳಲ್ಲಿ ಶಿಕ್ಷಣವನ್ನು ನಿಯಂತ್ರಿಸುವ ಸಂಬಂಧ ನಿರ್ಧಾರ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳು ಸೇರಿದಂತೆ ಇತರೆ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಸಾಮಾನ್ಯ ಶಿಕ್ಷಣವನ್ನು ಮದರಸಾಗಳಲ್ಲೂ ಜಾರಿಗೊಳಿಸಬೇಕು. ಇದಕ್ಕಾಗಿ ಅವುಗಳ ಪಠ್ಯ ಪರಿಷ್ಕರಿಸಬೇಕು ಎಂಬ ಮುಸ್ಲಿಂ ಸಮುದಾಯದಿಂದ ಬೇಡಿಕೆ ರಾಜ್ಯದಲ್ಲೂ ಬಂದಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಆ ಸಮುದಾಯದ ಮಕ್ಕಳು ಮುಂದಿನ ದಿನಗಳಲ್ಲಾದರೂ ಸಾಮಾನ್ಯ ಶಿಕ್ಷಣದೊಂದಿಗೆ ಮುಂದೆ ಬರಬೇಕೆಂಬುದು ಆ ಸಮುದಾಯದ ಪ್ರಜ್ಞಾವಂತರ ಆಶಯವಾಗಿದೆ. ಈ ಸಂಬಂಧ ಮುಸ್ಲಿಂ ಸಮುದಾಯದ ಕೆಲ ಮುಖಂಡರು, ನಾಯಕರು ತಮ್ಮನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಯೋಚನೆ ಮಾಡಿಲ್ಲ ಎಂದರು.

Tap to resize

Latest Videos

Bengaluru: ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ

ಇಸ್ಕಾನ್‌ ಬಿಸಿಯೂಟದ ಶಾಲೆಗಳಲ್ಲೂ ಮೊಟ್ಟೆ

ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ವಾರದಲ್ಲಿ ಎರಡು ದಿನ ಮೊಟ್ಟೆನೀಡುವ ಯೋಜನೆಯಡಿ ಅಕ್ಷಯ ಪಾತ್ರ ಫೌಂಡೇಶನ್‌ ಸೇರಿದಂತೆ ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿರುವ ಎಲ್ಲ ಸಂಸ್ಥೆಗಳೂ ತಮ್ಮದೇ ಆದ ವ್ಯವಸ್ಥೆಯಲ್ಲಿ ಮೊಟ್ಟೆವಿತರಣೆಗೆ ಕ್ರಮ ವಹಿಸಲಿವೆ ಎಂದು ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಮೊಟ್ಟೆಗಳನ್ನು ನೀಡುವ ನಿರ್ಧಾರ ಮುಖ್ಯವಾಗಿ ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸುವುದು. ನಾವು ಅಕ್ಷಯ ಪಾತ್ರ ಫೌಂಡೇಶನ್‌ಗೆ ಅದೇ ವಿಷಯವನ್ನು ತಿಳಿಸಿದ್ದೇವೆ ಮತ್ತು ಅವರು ಕೂಡ ಒಪ್ಪಿಗೆ ನೀಡಿದ್ದಾರೆ. ಅವರು ಮೂರನೇ ವ್ಯಕ್ತಿಯ ಮೂಲಕ ಮೊಟ್ಟೆಗಳನ್ನು ಸರಬರಾಜು ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ಕಾರ್ಯಪಡೆಯ ಸಮಿತಿಯೊಂದು ಮಕ್ಕಳಿಗೆ ಮೊಟ್ಟೆ, ಹಾಲಿನಂತಹ ಆಹಾರ ನೀಡಬಾರದು ಎಂದು ಶಿಫಾರಸು ಮಾಡಿರುವುದು ಚರ್ಚೆಗೆ ಒಳಗಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಿಂದ ಸಿದ್ಧಪಡಿಸಿರುವ ಎಲ್ಲ 27 ವಿಷಯ ಪತ್ರಿಕೆಗಳನ್ನೂ ವೆಬ್‌ಸೈಟ್‌ ಮೂಲಕ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡಲಾಗಿದೆ. ಸಾರ್ವಜನಿಕರು ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಇದನ್ನು ಪರಿಶೀಲಿಸಿ ಎನ್‌ಸಿಇಆರ್‌ಟಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದರು.
 

click me!