ದಿಲ್ಲಿಗೆ ಸ್ವಂತ ಶಿಕ್ಷಣ ಮಂಡಳಿ: ಮೋದಿಗೆ ಕೇಜ್ರಿ ಸಡ್ಡು?| ಇಲ್ಲಿವರೆಗೆ ಕೇವಲ ಕೇಂದ್ರ ಸರ್ಕಾರದ ಸಿಲೆಬಸ್ ಪಾಠ| ಇನ್ಮುಂದೆ ರಾಜ್ಯ ಸರ್ಕಾರ ರೂಪಿಸುವ ಪಠ್ಯ ಬೋಧನೆ
ನವದೆಹಲಿ(ಮಾ.07): ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಅಭಿವೃದ್ಧಿಪಡಿಸಿ ಮೆಚ್ಚುಗೆಗೆ ಪಾತ್ರವಾದ ದೆಹಲಿಯ ಆಮ್ ಆದ್ಮಿ (ಆಪ್) ಸರ್ಕಾರ ಇದೀಗ ದೆಹಲಿ ಶಿಕ್ಷಣ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿದೆ. ತನ್ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನಷ್ಟುಸುಧಾರಣೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ದೆಹಲಿಯಲ್ಲಿ 1000 ಸರ್ಕಾರಿ ಶಾಲೆಗಳು ಹಾಗೂ 1700 ಖಾಸಗಿ ಶಾಲೆಗಳಿವೆ. ಹೆಚ್ಚುಕಮ್ಮಿ ಈ ಎಲ್ಲ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಎಸ್‌ಇ ಪಠ್ಯಕ್ರಮ ಬೋಧಿಸಲಾಗುತ್ತದೆ. ಇದೀಗ ರಾಜ್ಯ ಶಿಕ್ಷಣ ಮಂಡಳಿ ರಚಿಸುವ ಮೂಲಕ ಮೊದಲ ವರ್ಷ 20ರಿಂದ 25 ಸರ್ಕಾರಿ ಶಾಲೆಗಳ ಸಿಬಿಎಸ್‌ಇ ನೋಂದಣಿ ತಪ್ಪಿಸಿ ರಾಜ್ಯ ಶಿಕ್ಷಣ ಮಂಡಳಿಗೆ ಅವುಗಳನ್ನು ನೋಂದಣಿ ಮಾಡಲಾಗುತ್ತದೆ. ತನ್ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಡ್ಡು ಹೊಡೆದಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಹುತೇಕ ಎಲ್ಲಾ ರಾಜ್ಯಗಳಲ್ಲೂ ರಾಜ್ಯ ಶಿಕ್ಷಣ ಮಂಡಳಿಗಳಿವೆ. ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿ ಈ ಶಿಕ್ಷಣ ಮಂಡಳಿಯ ಪಠ್ಯಕ್ರಮವನ್ನೇ ಬೋಧಿಸಲಾಗುತ್ತದೆ. ಆದರೆ, ದೆಹಲಿಯಲ್ಲಿ ಶಿಕ್ಷಣ ಮಂಡಳಿ ಇರಲಿಲ್ಲ. ಹೀಗಾಗಿ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮ ಮಾತ್ರ ಬೋಧಿಸಲಾಗುತ್ತಿತ್ತು. ‘ದೆಹಲಿ ಶಿಕ್ಷಣ ಮಂಡಳಿ ರಚನೆಯಾದ ನಂತರ ಇದರಡಿ ಬರುವ ಶಾಲೆಗಳಲ್ಲಿ ವಿದ್ಯಾರ್ಥಿಯ ವೈಯಕ್ತಿಕ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪಾಠ ಮಾಡುವ ವ್ಯವಸ್ಥೆ ತರಲು ಸರ್ಕಾರ ನಿರ್ಧರಿಸಿದ್ದೇವೆ. ನಾಲ್ಕೈದು ವರ್ಷಗಳಲ್ಲಿ ಎಲ್ಲಾ ಶಾಲೆಗಳೂ ತಾವಾಗಿಯೇ ಈ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವ ವಿಶ್ವಾಸವಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ