ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

By Suvarna News  |  First Published May 21, 2021, 9:31 PM IST

* ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
* ಪದವಿ ಹಾಗೂ ಸ್ನಾತಕೋತ್ತರ ಪದವಿ ಬಗ್ಗೆ ಮಾಹತಿ ನೀಡಿದ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ
* ಸೆಮಿಸ್ಟರ್‌  ಹಾಗೂ ಕೋರ್ಸ್‌ ಬಗ್ಗೆ ಸ್ಪಷ್ಟನೆ


ಬೆಂಗಳೂರು, (ಮೇ.21): ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕಾಲೇಜುಗಳು ಪದವಿ ಕೋರ್ಸ್‌ಗಳ ಸಮ ಸ್ಥಾನಿಕ ಸೆಮಿಸ್ಟರ್‌ ಕೋರ್ಸ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಈ ಕೋರ್ಸ್‌ಗಳ ಭೌತಿಕ ತರಗತಿಗಳನ್ನು ಆರಂಭಿಸುವ ಕುರಿತು ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶುಕ್ರವಾರ ತಿಳಿಸಿದ್ದಾರೆ.

ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಪರೀಕ್ಷೆಗಳನ್ನು ಇನ್ನೂ ಪೂರೈಸದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ (2ನೇ, 4ನೇ, 6ನೇ ಮತ್ತು 8ನೇ ಸೆಮಿಸ್ಟರ್‌ಗಳು) ಆನ್‌ಲೈನ್‌ ತರಗತಿಗಳನ್ನು ಶುರು ಮಾಡಬೇಕು. ಬಹುತೇಕ ಕೋರ್ಸ್‌ಗಳಿಗೆ ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದರಿಂದ ಪದವಿ ಕೋರ್ಸ್‌ಗಳ ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಕೋವಿಡ್‌ ಪರಿಸ್ಥಿತಿ ತಹಬಂದಿಗೆ ಬಂದಮೇಲೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

undefined

ಕೊರೋನಾ ಸಂಕಷ್ಟ: ಮಕ್ಕಳ ಮುಂದಿನ ಶಿಕ್ಷಣಕ್ಕೆ ಸುರೇಶ್ ಕುಮಾರ್ ಕ್ರಮ

ಕೆಲವು ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಮಾತ್ರ ಮುಂದಿನ ಸೆಮಿಸ್ಟರ್‌ಗಳಿಗೆ ಹೋಗಲು ಕ್ಯಾರಿ ಓವರ್‌ ಪದ್ಧತಿ ಅನ್ವಯವಾಗುವುದಿಲ್ಲ. ಅವುಗಳ ಬಗ್ಗೆ ಕುಲಪತಿಗಳು ಹಾಗೂ ಪ್ರಾಂಶುಪಾಲರುಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕು ಎಂದರು,

ಸ್ನಾತಕೋತ್ತರ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ಕೋವಿಡ್‌ ಕಾರಣದಿಂದಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೊದಲ ಸೆಮಿಸ್ಟರ್‌ಗೆ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಮೂರನೇ ಸೆಮಿಸ್ಟರ್‌ನ ತರಗತಿಗಳು ಮುಗಿದಿದ್ದು, ಕೆಲವೆಡೆ ಪರೀಕ್ಷೆಗಳು ಕೂಡ ಆರಂಭವಾಗಿದ್ದವು. ಹೀಗಾಗಿ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ, ಮೂರನೇ ಸೆಮಿಸ್ಟರ್‌ನ ತರಗತಿಗಳು ಈಗಾಗಲೇ ಮುಗಿದಿದ್ದು, ಪರೀಕ್ಷೆಗಳನ್ನು ನಡೆಸುವುದು ಮಾತ್ರ ಬಾಕಿ ಉಳಿದಿದ್ದರೆ, ಅಲ್ಲಿ ಕೂಡ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕು. ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಬಾಕಿ ಉಳಿಯುವ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುವುದು ಎಂದು ಹೇಳಿದರು.

ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು. ಒಂದೊಮ್ಮೆ ಈ ತರಗತಿಗಳು ಮುಗಿದ ಮೇಲೂ ಕೋವಿಡ್‌ನಿಂದಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ತಕ್ಷಣವೇ ಮುಂದಿನ ಸಮ ಸ್ಥಾನಿಕ ಸೆಮಿಸ್ಟರ್‌ಗಳಿಗೆ ಆನ್‌ಲೈನ್‌ ತರಗತಿಗಳನ್ನು ಶುರುಮಾಡಬೇಕು. ಇದರಿಂದಾಗಿ ಬಾಕಿ ಉಳಿಯುವ ಬೆಸ ಸ್ಥಾನಿಕ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕೋವಿಡ್‌ ನಿಯಂತ್ರಣಕ್ಕೆ ಬಂದಮೇಲೆ ನಡೆಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು

ಪರಿಸ್ಥಿತಿಯ ಬೆಳವಣಿಗೆಗಳಿಗೆ ಅನುಗುಣವಾಗಿ ಕುಲಪತಿಗಳು ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲಿ ಹೊರಹೊಮ್ಮುವ ನಿರ್ಧಾರಗಳನ್ನು ಆಧರಿಸಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪಾಲಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಹಾಗೂ ವೇಳಾಪಟ್ಟಿಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

click me!