* ಶಿಕ್ಷಣದ ಪೂರ್ಣ ಜವಾಬ್ದಾರಿ ಹೊರುತ್ತೇವೆ: ಚುಂಚಶ್ರೀ
* ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು
* ಕೊರೋನಾ ಸಂಕಷ್ಟದ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಿದ ಮಠ
ಬೆಂಗಳೂರು(ಮೇ.21): ಕೊರೋನಾ ಸೋಂಕಿನಿಂದ ಮೃತಪಟ್ಟವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನೋಡಿಕೊಳ್ಳಲಿದೆ ಎಂದು ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ಇಡೀ ನಾಡನ್ನು ಕೊರೋನಾ ಸೋಂಕು ಬಾಧಿಸುತ್ತಿದೆ. ಸೋಂಕಿನಿಂದ ತಂದೆ, ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಶಿಕ್ಷಣದ ಜತೆ ಆಶ್ರಯದ ಕೊರತೆ ಎದುರಾಗಿದೆ. ಈ ವಿಚಾರಗಳು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಅನ್ನ, ಅಕ್ಷರ, ಆರೋಗ್ಯ ವಿಚಾರದಲ್ಲಿ ಮುಂದಿರುವ ಮಠದಲ್ಲೇ ಅಂತಹ ಮಕ್ಕಳಿಗೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.
ತಂದೆ- ತಾಯಿ ಮತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಇನ್ನಿತರ ಮಾಹಿತಿಗಾಗಿ ಬೆಂಗಳೂರಿನ ದೂರವಾಣಿ ಸಂಖ್ಯೆ 94480 71803 ಇಲ್ಲವೇ ಆದಿಚುಂಚನಗಿರಿ ಮಠದ ದೂರವಾಣಿ 91480 24141ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
'ಕೋವಿಡ್‌ನಿಂದ ಮೃತ ಶಿಕ್ಷಕರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿ'
ಕೊರೋನಾ ಸಂಕಷ್ಟದ ಸಂದರ್ಭವನ್ನು ಗಂಭೀರವಾಗಿ ಪರಿಗಣಿಸಿರುವ ಮಠವು, ಬೆಂಗಳೂರು ಆಯುರ್ವೇದಿಕ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್, ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ, ಚಿಕ್ಕಬಳ್ಳಾಪುರದಲ್ಲಿ ಸೋಂಕಿತರಿಗೆ ಸಾರಿಗೆ ವ್ಯವಸ್ಥೆ ಹಾಗೂ ಔಷಧ ಕಿಟ್‌ಗಳ ವಿತರಣೆ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಿದೆ ಎಂದು ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona