Bengaluru: ಕೆಇಎ ಎದುರು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳಿಂದ ಮುಂದುವರಿದ ಪ್ರತಿಭಟನೆ

By Govindaraj S  |  First Published Aug 1, 2022, 11:31 PM IST

ಸಿಇಟಿ-2021 ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ರಾಜ್ಯ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದು, ಜತೆಗೆ ಆ.4ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. 


ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು (ಆ.01): ಸಿಇಟಿ-2021 ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ರಾಜ್ಯ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಹಾಗೂ ಪಾಲಕರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದು, ಜತೆಗೆ ಆ.4ರಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಸೋಮವಾರ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಮಾಡಿದ ತಪ್ಪಿಗೆ ನಾವು ಬಲಿಪಶುವಾಗಬೇಕಿದೆ. 

Tap to resize

Latest Videos

ಸರ್ಕಾರದ ಎಡಬಿಡಂಗಿತನದಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಇಎ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಿರುವ ವಿರುದ್ಧ ಮತ್ತು ಸಿಇಟಿ ಪ್ರಕಟಣೆ ವೇಳೆ ಯಾವುದೇ ರೀತಿಯ ನಿಖರ ಮಾಹಿತಿ ನೀಡದ ಕುರಿತು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಲಾಗಿದೆ. ಈ ಸಂಬಂಧ ವಕೀಲರನ್ನು ಸಂಪರ್ಕಿಸಲಾಗುತ್ತಿದ್ದು ಶೀಘ್ರದಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುತ್ತದೆ ಎಂದು ತಿಳಿಸಿದರು. ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೊದಲು ಮಾಹಿತಿ ನೀಡದೆ ಕೆಇಎ ತಪ್ಪು ಮಾಡಿದೆ. 

ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ, ಪಾಲಕರು, ವಿದ್ಯಾರ್ಥಿಗಳು ಪ್ರತಿಭಟನೆ

2020-21ನೇ ಸಾಲಿಗೆ ಮಾತ್ರ ಸಿಇಟಿ ಅಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗುವುದು’ ಎಂಬ ಆದೇಶ ಕೂಡ ಇದೆ. ಈ ಆದೇಶ ಕಳೆದ ವರ್ಷಕ್ಕೆ ಅನ್ವಯವಾಗುವುದೇ ಹೊರತು ಈ ವರ್ಷಕ್ಕಲ್ಲ. ಹೀಗಿರುವಾಗ ಸರ್ಕಾರ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮುಂದಾಗಬೇಕೇ ಹೊರತು ಆಗಿರುವ ತಪ್ಪನ್ನು ಸಮರ್ಥಿಸಿಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ 17ರಿಂದ 20 ಸಾವಿರ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳು ಈ ಬಾರಿ 1.2 ಲಕ್ಷಕ್ಕೆ ಹೋಗಿದೆ. ಇದರಿಂದ ಸೀಟು ಪಡೆಯಲು ಯಾವ ರೀತಿಯಲ್ಲಿ ನಿರೀಕ್ಷೆಯನ್ನಿಟ್ಟುಕೊಳ್ಳಬೇಕು ಎಂದು ನೊಂದ ವಿದ್ಯಾರ್ಥಿಯರು ಅಳಲು ತೋಡಿಕೊಂಡಿದ್ದಾರೆ. 

ಇದಕ್ಕೂ ಮೊದಲು ತಮಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕೆಇಎ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು, ಪಾಲಕರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೆಇಎ ಮುಂದೆ ಮತ್ತು ಉನ್ನತ ಶಿಕ್ಷಣ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸದಂತೆ ಪೊಲೀಸರು ಸೂಚಿಸಿದರು. ಇಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಇಲ್ಲಿಯೇ ಹೋರಾಟ ಮುಂದುವರಿಸಿದರೆ, ತಮ್ಮ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಇದರಿಂದ ತಮ್ಮ ಭವಿಷ್ಯ ಹಾಳಾಗಲಿದೆ ಎಂಬ ಎಚ್ಚರಿಕೆ ನೀಡಿದರು. ಒಂದು ವೇಳೆ ಪ್ರತಿಭಟನೆ ನಡೆಸುವುದಾದರೆ, ಸ್ವಾತಂತ್ರೃ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. 

KCET Results 2022; ಸಿಇಟಿ ಫಲಿತಾಂಶ ಬಿಡುಗಡೆ, ಆಗಸ್ಟ್ 5ರಿಂದ ದಾಖಲಾತಿ ಪರಿಶೀಲನೆ

ಇದರಿಂದ ಮತ್ತಷ್ಟು ಕೆರಳಿದ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೋರಾಟವನ್ನು ಮುಂದುವರಿಸಿದರು. ‘ಕೊರೋನಾ ಸಮಯದಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು ದಡ್ಡರು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಮ್ಮ ಬಗ್ಗೆ ತುಂಬಾ ಹಗುರವಾಗಿ ಮಾತಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳು, ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನಿರ್ದೇಶಕರ ಪ್ರಕಾರ ಇವರೆಲ್ಲರೂ ದಡ್ಡರಾ ಹಾಗಾದರೆ? ಸರ್ಕಾರ ಮಾಡಿರುವ ತಪ್ಪಿಗೆ ನಾವು ಬಲಿಪಶುಗಳಾಗಿದ್ದೇವೆ. ಕಳೆದ ವರ್ಷ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದ್ದರೆ, ನಾವು ಬರೆಯುತ್ತಿದ್ದೇವು. ಕೊರೋನಾದಿಂದ ಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸರ್ಕಾರ ಕೈಗೊಂಡ ನಿರ್ಧಾರವೇ ಹೊರತು ವಿದ್ಯಾರ್ಥಿಗಳು ನಿರ್ಧರಿಸಿದ್ದಲ್ಲ. ಆದ್ದರಿಂದ ಸರ್ಕಾರವೇ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

click me!