ದೇಣಿಗೆಯಿಂದಲೇ ವಿಜ್ಞಾನ ಪ್ರಯೋಗಾಲಯ ನಿರ್ಮಾಣ!

By Kannadaprabha News  |  First Published Aug 21, 2022, 4:31 PM IST
  •  ದೇಣಿಗೆಯಿಂದಲೇ ವಿಜ್ಞಾನ ಪ್ರಯೋಗಾಲಯ ನಿರ್ಮಾಣ!
  • ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಪ್ರಯತ್ನಕ್ಕೆ ಬಂತು ನೆರವಿನ ಮಹಾಪೂರ

ಸೋಮರಡ್ಡಿ ಅಳವಂಡಿ

 ಕೊಪ್ಪಳ (ಆ.21) : ಸರ್ಕಾರಿ ಶಾಲೆ ಎಂದರೆ ಹಳಿಯುವವರೇ ಹೆಚ್ಚು. ಆದರೆ, ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಒಮ್ಮೆ ಭೇಟಿ ನೀಡಿದರೆ ನಿಮ್ಮ ಉಹೆ ತಪ್ಪಾಗುತ್ತದೆ. ಇಲ್ಲಿ ಶಿಕ್ಷಕರ ಪ್ರಯತ್ನದ ಫಲವಾಗಿ ಖಾಸಗಿ ಶಾಲೆ ಮೀರಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ದೇಣಿಗೆಯಿಂದಲೇ ಸುಸಜ್ಜಿತ ‘ವಿಜ್ಞಾನ ಪ್ರಯೋಗಾಲಯ’ ನಿರ್ಮಾಣ ಮಾಡಲಾಗಿದೆ. ವಿಜ್ಞಾನ ಶಿಕ್ಷಕ ದೇವೇಂದ್ರ ಜಿರ್ಲಿ ಅವರ ಪ್ರಯತ್ನಕ್ಕೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಅನೇಕರು ದೇಣಿಗೆ ನೀಡುತ್ತಿದ್ದು, ಶಾಲೆಯಲ್ಲಿ ಪ್ರಗತಿಯ ಕ್ರಾಂತಿಯಾಗುತ್ತಿದೆ. ಪಿಯು ವಿಜ್ಞಾನ ಕಾಲೇಜಿನಲ್ಲಿ ಇರಬಹುದಾದ ಸುಸಜ್ಜಿದ ವಿಜ್ಞಾನ ಪ್ರಯೋಗಾಲಯವನ್ನು ಪ್ರೌಢಶಾಲೆಯಲ್ಲಿ ಮಾಡಲಾಗಿದ್ದು, ಇಲ್ಲಿಯ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗುತ್ತಿದೆ.

Latest Videos

undefined

ಹಗರಿಗಜಾಪುರ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗುವುದೇ ಹರಸಾಹಸ

ನೆರವಿನ ಮಹಾಪೂರ: ಶಾಲೆಯಲ್ಲಿನ ಕೊರತೆಗಳನ್ನು ಮುಂದಿಟ್ಟುಕೊಂಡು ಇಲ್ಲಿಯ ಶಿಕ್ಷಕರು ಕೊರಗಲಿಲ್ಲ. ವಿಜ್ಞಾನ ಹಬ್ಬ ಮಾಡಿ ಸುದ್ದಿಯಾದರು. ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ವಿಜ್ಞಾನ ಆಸಕ್ತಿ, ಅರಿವು ಬೆಳೆಸಲು ವಿಜ್ಞಾನದ ಚಿತ್ರಗಳನ್ನೇ ಮನೆಯ ಮುಂದೆ ರಂಗೋಲಿ ಬಿಡಿಸಿ ಮಾದರಿಯಾದರು. ಇದೆಲ್ಲವೂ ಮಾಧ್ಯಮದಲ್ಲಿ ವರದಿಯಾಯಿತು. ಇಲ್ಲಿಯ ಪ್ರಗತಿ ಕಂಡು ಅನೇಕರು ದೇಣಿಗೆ ನೀಡಲು ಮುಂದೆ ಬಂದರು. ಅದರಲ್ಲೂ ಬೀಜೋತ್ಪಾದನೆ ಮಾಡುವ ಎಂಎನ್‌ಸಿ ಕಂಪನಿಯೊಂದು .4.67 ಲಕ್ಷ ದೇಣಿಗೆ ನೀಡಿತು.

ಹಳೆಯ ವಿದ್ಯಾರ್ಥಿಗಳಿಂದ ಸುಮಾರು .80 ಸಾವಿರ ಸಂಗ್ರಹವಾಗಿದೆ. ಇವರ ಕಾರ್ಯಕ್ಷಮತೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ನೋಡಿ ಹಲವರು ದೇಣಿಗೆ ನೀಡುತ್ತಿದ್ದಾರೆ. ಇದುವರೆಗೂ ಸುಮಾರು .6 ಲಕ್ಷ ಸಂಗ್ರಹವಾಗಿದ್ದು, ಇದರಿಂದ ಸುಸಜ್ಜಿತ ಪ್ರಯೋಗಾಲಯವನ್ನು ನಿರ್ಮಾಣ ಮಾಡಲಾಗಿದೆ. ನೆರವು ಇನ್ನೂ ಬರುತ್ತಲೇ ಇರುವುದರಿಂದ ವಿಜ್ಞಾನ ಕೇಂದ್ರವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಕಾರ್ಯಚಟುವಟಿಕೆ ಶುರುವಾಗಿದೆ. ಸಾಹಿತ್ಯ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಪರಿಕರಗಳನ್ನು ಹೊಂದುವ ಮೂಲಕ ಮಾದರಿ ಶಾಲೆಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.

ಏನೇನು ಇವೆ?: ಭೌತ ವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನ ಹಾಗೂ ಗಣಿತದ ಸುಮಾರು 80ಕ್ಕೂ ಹೆಚ್ಚು ವರ್ಕಿಂಗ್‌ ಮಾಡೆಲ್‌ ಹಾಗೂ ವಿದ್ಯುತ್‌ ಚಾಲಿತ 32 ವರ್ಕಿಂಗ್‌ ಮಾಡೆಲ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಪಾಠ ಪರಿಣಾಮಕಾರಿ: ತಾಳಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇದರಿಂದ ಪಾಠ ಬೋಧನೆ ಪರಿಣಾಮಕಾರಿಯಾಗಿದೆ. ಅದರಲ್ಲೂ ವಿಜ್ಞಾನದ ಆಸಕ್ತಿ ವಿದ್ಯಾರ್ಥಿಗಳಲ್ಲಿ ಹೆಚ್ಚಳವಾಗಿದೆ. ಈಗ ಇಲ್ಲಿಂದ ತೇರ್ಗಡೆಯಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಿದ್ದಾರೆ ಎನ್ನುವುದು ವಿಶೇಷ.

ಸೋರುತ್ತಿರುವ ಸರ್ಕಾರಿ ಶಾಲಾ ಕಟ್ಟಡ: ಮಕ್ಕಳ ಗೋಳು ನೋಡಲಾಗದೇ ಶಾಲೆಯ ಛಾವಣಿ ಏರಿದ ಪೋಷಕರು

ನೀವು ದೇಣಿಗೆ ನೀಡಿ:ತಾಳಕೇರಿ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಪಣ ತೊಟ್ಟಿರುವ ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಯರಿಗೆ ನೀವು ಕೈಜೋಡಿಸಬಹುದು. ಅದಕ್ಕಾಗಿ ತಾಳಕೇರಿಯ ಸರ್ಕಾರಿ ಪ್ರೌಢ ಶಾಲೆಯ ಮೊ. 9945138298 ಸಂಪರ್ಕಿಸಬಹುದು.

ಮೊದಲು ವಿಜ್ಞಾನ ಹಬ್ಬ, ವಿಜ್ಞಾನ ಚಿತ್ರದ ರಂಗೋಲಿ ಹಾಕುವ ಮೂಲಕ ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಹೆಚ್ಚಿಸುವ ಪ್ರಯತ್ನ ಮಾಡಿದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಕೆಲವರು ಸಹಾಯ ಮಾಡಲು ಮುಂದೆ ಬಂದರು. ಇದರಿಂದ ಪ್ರೇರಣೆಗೊಂಡು ವಿಜ್ಞಾನ ಪ್ರಯೋಗಾಲಯ ಮಾಡಿದ್ದು, ವಿಜ್ಞಾನಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ದೇವೇಂದ್ರ ಜಿರ್ಲಿ, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ತಾಳಕೇರಿ

click me!