ಚಾಟ್‌ಜಿಪಿಟಿ ಬಳಸಿ ಪರೀಕ್ಷೆ ವೇಳೆ ಅಕ್ರಮ: ಪಿಎಸ್‌ಐ ನೇಮಕಾತಿ ಮಾದರಿ ಅಕ್ರಮ ಬೆಳಕಿಗೆ

By Kannadaprabha NewsFirst Published May 31, 2023, 9:25 AM IST
Highlights

ಚಾಟ್‌ಜಿಪಿಟಿ ಮೂಲಕ ಪರೀಕ್ಷಾ ಮೋಸ ನಡೆದಿದ್ದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಜೊತೆಗೆ ಈ ಪ್ರಕರಣ ಬಹುತೇಕ ಕರ್ನಾಟಕದಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಅಕ್ರಮವನ್ನು ಹೋಲುತ್ತಿದೆ.

ಹೈದರಾಬಾದ್‌ (ಮೇ 31, 2023): ಕಳೆದ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆದ ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಚಾಟ್‌ಜಿಪಿಟಿ ಸಹಾಯ ಪಡೆದು ಪರೀಕ್ಷಾ ಅಕ್ರಮ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಾಟ್‌ಜಿಪಿಟಿ ಮೂಲಕ ಪರೀಕ್ಷಾ ಮೋಸ ನಡೆದಿದ್ದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಜೊತೆಗೆ ಈ ಪ್ರಕರಣ ಬಹುತೇಕ ಕರ್ನಾಟಕದಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಅಕ್ರಮವನ್ನು ಹೋಲುತ್ತಿದೆ.

ಇತ್ತೀಚೆಗೆ ನಡೆದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಹಾಗೂ ವಿಭಾಗೀಯ ಲೆಕ್ಕಾಧಿಕಾರಿ (ಡಿಎಒ) ನೇಮಕಾತಿ ಪರೀಕ್ಷೆಗಳ ವೇಳೆ ಈ ಅಕ್ರಮ ನಡೆದಿದೆ ಎಂದು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಗೊತ್ತಾಗಿದೆ. ತೆಲಂಗಾಣ ರಾಜ್ಯ ಉತ್ತರ ವಿದ್ಯುತ್‌ ವಿತರಣಾ ಕಂಪನಿಯ ಪೆಡ್ಡಂಪಲ್ಲಿ ಕಚೇರಿಯಲ್ಲಿ ವಿಭಾಗೀಯ ಎಂಜಿನಿಯರ್‌ ಆಗಿರುವ ಪೂಲ ರಮೇಶ್‌ (35) ಎಂಬಾತನೇ ಕೃತ್ಯದ ರೂವಾರಿ. ಈತ ಶೀಘ್ರದಲ್ಲೇ ಬಂಧನ ಆಗುವ ಸಾಧ್ಯತೆ ಇದೆ.

ಇದನ್ನು ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!

ಚಾಟ್‌ಜಿಪಿಟಿ ವಂಚನೆ ಹೇಗೆ?
ಪರೀಕ್ಷಾ ಕೇಂದ್ರದಲ್ಲಿದ್ದ ಪ್ರಾಂಶುಪಾಲರೊಬ್ಬರು ಪರೀಕ್ಷೆ ಆರಂಭವಾದ 10 ನಿಮಿಷಗಳ ನಂತರ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ರಮೇಶ್‌ಗೆ ಕಳುಹಿಸಿದ್ದಾರೆ. ಬೇರೆ ಸ್ಥಳದಲ್ಲಿ ತನ್ನ ನಾಲ್ವರು ಸಹಚರರೊಂದಿಗೆ ಕುಳಿತಿದ್ದ ರಮೇಶ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವಾದ ‘ಚಾಟ್‌ಜಿಪಿಟಿ’ ಬಳಸಿ ಸರಿಯಾದ ಉತ್ತರಗಳನ್ನು ಪಡೆದಿದ್ದಾನೆ. ನಂತರ ಆ ಉತ್ತರಗಳನ್ನು ಪರೀಕ್ಷೆಗೆ ಕುಳಿತಿದ್ದ 7 ಅಭ್ಯರ್ಥಿಗಳಿಗೆ ಹೇಳಿಕೊಟ್ಟಿದ್ದಾನೆ. ಈ ಏಳೂ ಅಭ್ಯರ್ಥಿಗಳು ಬ್ಲೂಟೂತ್‌ ಇಯರ್‌ ಬಡ್‌ಗಳನ್ನು ಯಾರಿಗೂ ಗೊತ್ತಾಗದ ರೀತಿ ಅಕ್ರಮವಾಗಿ ಧರಿಸಿದ್ದರು. ಇಯರ್‌ ಫೋನ್‌ ಸಹಾಯದಿಂದಲೇ ಪೂಲ ರಮೇಶ್‌ ಹೇಳಿಕೊಟ್ಟ ಉತ್ತರಗಳನ್ನು ಬರೆದಿದ್ದಾರೆ.

ಫೆಬ್ರವರಿ 22, 26 ಹಾಗೂ ಮಾರ್ಚ್‌ 5ರಂದು ನಡೆದ ಪರೀಕ್ಷೆಗಳ 3 ಪ್ರಶ್ನೆಪತ್ರಿಕೆಗಳ ಪೈಕಿ ಮೊದಲ 2ರಲ್ಲಿ ಈ ಚಾಟ್‌ಜಿಪಿಟಿ ಅಕ್ರಮ ನಡೆದಿದೆ. ಇನ್ನು ಮಾರ್ಚ್‌ 5ರಂದು ನಡೆದ ಇನ್ನೊಂದು ಪರೀಕ್ಷೆಯಲ್ಲೂ ರಮೇಶ್‌ ಅಕ್ರಮ ಎಸಗಿದ್ದಾನೆ. ಆದರೆ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿದ್ಯುತ್‌ ಇಲಾಖೆಯಲ್ಲಿ ಕಿರಿಯ ಸಹಾಯಕನಾಗಿದ್ದ ತನ್ನ ಬಂಧು ಪೂಲ ರವಿ ಕಿಶೋರ್‌ ಸಹಾಯದಿಂದ ಸಾಕಷ್ಟು ದಿನ ಮೊದಲೇ ಸೋರಿಕೆ ಆಗಿ ರಮೇಶ್‌ ಕೈ ಸೇರಿತ್ತು. ಹೀಗಾಗಿ ಮೊದಲೇ ಉತ್ತರ ಸಿದ್ಧಪಡಿಸಿ ಇಟ್ಟುಕೊಂಡು ಪರೀಕ್ಷಾರ್ಥಿಗಳಿಗೆ ಆತ ಒದಗಿಸಿದ್ದ. ಆಗ ಚಾಟ್‌ ಜಿಪಿಟಿ ಅಗತ್ಯ ಬೀಳಲಿಲ್ಲ ಎಂದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಕೋರ್ಟಲ್ಲಿ ChatGPT ಬಳಕೆ: ಜಾಮೀನು ತೀರ್ಪಿನ ವೇಳೆ ಕೃತಕ ಬುದ್ಧಿಮತ್ತೆ ಅಭಿಪ್ರಾಯ ಪಡೆದ ಹೈಕೋರ್ಟ್‌

ಒಬ್ಬನಿಂದ 40 ಲಕ್ಷ ರೂ. ಡೀಲ್‌
ಚಾಟ್‌ ಜಿಪಿಟಿ ಮೂಲಕ ತಾವು ಉತ್ತೀರ್ಣರಾಗಲು ಸಹಾಯ ಮಾಡಿದ್ದಕ್ಕಾಗಿ ಈ ಏಳೂ ಮಂದಿ ಅಭ್ಯರ್ಥಿಗಳು ರಮೇಶ್‌ಗೆ ತಲಾ 40 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದರು. ಇನ್ನು ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಕೂಡ ರಮೇಶ್‌ 30 ಅಭ್ಯರ್ಥಿಗಳಿಗೆ ತಲಾ 25 ಲಕ್ಷ ರೂ.ನಿಂದ 30 ಲಕ್ಷ ರೂ. ವರೆಗೆ ಮಾರಿದ್ದಾನೆ.

ಇದನ್ನೂ ಓದಿ: ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಫೇಲ್‌ ಆದ ChatGPT: ನೆಟ್ಟಿಗರಿಂದ ಸಖತ್‌ ಟ್ರೋಲ್‌

click me!