ಖಾಸಗಿ ಶಾಲೆಗಳಲ್ಲಿ ವಿಧಿಸುತ್ತಿರುವ ದುಬಾರಿ ಶುಲ್ಕ ನಿಯಂತ್ರಿಸಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಜ್ಯದಲ್ಲಿ 6500 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು (ಮೇ.09): ಖಾಸಗಿ ಶಾಲೆಗಳಲ್ಲಿ (Private Schools) ವಿಧಿಸುತ್ತಿರುವ ದುಬಾರಿ ಶುಲ್ಕ (Expensive Fees) ನಿಯಂತ್ರಿಸಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ರಾಜ್ಯದಲ್ಲಿ (Karnataka) 6500 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ಭಾನುವಾರ ‘ಮೊದಲಿಯಾರ್ ಸೇವಾ ಸಂಘ’ದ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕೊಠಡಿ ಸೇರಿದಂತೆ ಮೂಲಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದೆ. ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಶಾಲೆಗಳ ಸಂಖ್ಯೆ ಕಡಿಮೆ ಇದೆ. ಆದರೆ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಮಕ್ಕಳ ಶಿಕ್ಷಣದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ. ಆದ್ದರಿಂದ ಇಂತಹ ಸಮುದಾಯಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಮುಂದೆ ಬಂದರೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ಸಹಭಾಗಿತ್ವ ಅಗತ್ಯ: ಮೊದಲಿಯಾರ್ ಸೇವಾ ಸಂಘವು ನಗರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಸಮಾಜದಲ್ಲಿ ಬದಲಾವಣೆ ತರಲು ಸಾಮಾಜಿಕ ಹೊಣೆಗಾರಿಕೆಯುಳ್ಳ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯವಾಗಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
ಯಾವುದೇ ಕಾರ್ಯ ಯಶಸ್ವಿಯಾಗಲು ಸಮುದಾಯದ ಮಾರ್ಗದರ್ಶನ ಹಾಗೂ ಸೇವೆ ಅವಶ್ಯಕತೆಯಿದೆ. ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಕುಮಾರ್, ತಮಿಳುನಾಡಿನ ಶಾಸಕ ಮಣಿಕಂಬೈ, ಮೊದಲಿಯಾರ್ ಸೇವಾ ಸಂಘದ ಅಧ್ಯಕ್ಷ ನರಸಿಂಹನ್ ಮತ್ತಿತರರು ಉಪಸ್ಥಿತರಿದ್ದರು.
ವಜ್ರದಂತೆ ಗಟ್ಟಿಸಮುದಾಯ: ದಕ್ಷಿಣ ಭಾರತದಲ್ಲಿ ಮೊದಲಿಯಾರ್ ಸಮುದಾಯ ಕಠಿಣ ಪರಿಶ್ರಮ, ವೈಜ್ಞಾನಿಕ ಚಿಂತನೆ ಮಾಡುವ ಬುದ್ಧಿವಂತಿಕೆಯ ಪ್ರವೃತ್ತಿಯಿಂದ ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿನ ಆಡಳಿತಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದವರು. ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮದು ಬಸವ ಪಥದ ಸರ್ಕಾರ ಎಂದ ಬೊಮ್ಮಾಯಿ
ಮೈಸೂರು ಸಂಸ್ಥಾನದ ಪ್ರಮುಖರಾಗಿದ್ದ ಅರ್ಕಾಟ್ ನಾರಾಯಣಸ್ವಾಮಿ ಅವರು ಹೈಕೋರ್ಚ್, ಅಠಾರ ಕಚೇರಿ ಕಟ್ಟಡ ಸೇರಿದಂತೆ ಮೈಸೂರು, ಬೆಂಗಳೂರಿನ ಪ್ರಮುಖ ಕಟ್ಟಡಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅದೇ ರೀತಿ ಬಿ.ಆರ್.ಮಾಣಿಕಂ ಮೊದಲಿಯಾರ್ ಅವರು ವಿಧಾನಸೌಧ, ವಾಣಿ ವಿಲಾಸ ಆಸ್ಪತ್ರೆ, ರಸೆಲ್ ಮಾರುಕಟ್ಟೆನಿರ್ಮಾಣದ ಕಾರಣಿಕರ್ತರಲ್ಲಿ ಪ್ರಮುಖರು ಎಂದು ಸ್ಮರಿಸಿಕೊಂಡರು.