ಬೆಂಗಳೂರು (ಜೂ.01): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದೂಡಲಾಗಿರುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿರುವ ರಾಜ್ಯ ಶಿಕ್ಷಣ ಇಲಾಖೆ, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಹಾದಿಯನ್ನು ಕಾದುನೋಡುತ್ತಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರವು ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೇ ಅಥವಾ ರದ್ದುಗೊಳಿಸಬೇಕೇ ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದು, ಅದೇ ಮಾನದಂಡವನ್ನೇ ರಾಜ್ಯದಲ್ಲೂ ಅನುಸರಿಸುವ ಸಾಧ್ಯತೆಗಳಿವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಸದ್ಯ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಸೋಂಕು ತೀವ್ರವಾಗಿರುವುದರಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೇ, ಮೌಲ್ಯಾಂಕನ ಪರೀಕ್ಷೆ ನಡೆಸಬೇಕೇ ಅಥವಾ ಬೇರಾರಯವ ಹೊಸ ಮಾರ್ಗ ಅನುಸರಿಸಬಹುದು ಎಂಬ ಗೊಂದಲವಿದೆ. ಹೀಗಾಗಿ, ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಬಹುದು ಎಂದು ಕಾಯ್ದು ನೋಡುವ ತಂತ್ರವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ.
undefined
ಶೈಕ್ಷಣಿಕ ವೇಳಾಪಟ್ಟಿ ಬದಲು, ಶಾಲೆ ಆರಂಭದ ದಿನಾಂಕ ಘೋಷಿಸಿದ ಇಲಾಖೆ ..
ಒಂದು ವೇಳೆ ಕೇಂದ್ರದ ಮಾನದಂಡ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎನಿಸಿದರೆ, ಅದೇ ಮಾನದಂಡವನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಮಾರ್ಗಗಳು
ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವುದು, ಪೂರ್ವಸಿದ್ಧತಾ ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ ಸೇರಿದಂತೆ ಹಿಂದಿನ ತರಗತಿಗಳ ಫಲಿತಾಂಶ ಆಧರಿಸಿ ಫಲಿತಾಂಶ ಪ್ರಕಟಿಸುವುದು ಅಥವಾ ಮಕ್ಕಳಿಗೆ ಲಸಿಕೆ ಕೊಡಿಸಿ ಪರೀಕ್ಷೆ ನಡೆಸುವುದು ಸೇರಿದಂತೆ ಹಲವಾರು ಮಾರ್ಗಗಳು ಚರ್ಚೆಯಾಗುತ್ತಿವೆ.
ಮತ್ತೊಂದೆಡೆ ಅಗತ್ಯ ಇರುವಷ್ಟುಲಸಿಕೆಗಳನ್ನು ತರಿಸಿಕೊಂಡು ವಿದ್ಯಾರ್ಥಿಗಳು ಹಾಗೂ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವುದು ಉತ್ತಮ. ಪರೀಕ್ಷೆ ನಡೆಸುವ ಮುನ್ನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವಂತೆ ರಾಜ್ಯ ಸರ್ಕಾರಕ್ಕೆ ಕೊರೋನಾ ತಾಂತ್ರಿಕ ಸಮಿತಿಯ ಡಾ. ಗಿರಿಧರ್ ಬಾಬು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.