
ಬೆಂಗಳೂರು(ಮೇ.30): ಮುಂಬರುವ ಆಯವ್ಯಯದಲ್ಲಿ ಶಿಕ್ಷಣಕ್ಕೆ ಶೇ.20ರಷ್ಟು ಅನುದಾನ ಮೀಸಲಿಡಬೇಕು, ಕಳೆದ ಬಿಜೆಪಿ ಸರ್ಕಾರದಲ್ಲಿ ಪಠ್ಯಪರಿಷ್ಕರಣೆ ಮೂಲಕ ಬದಲಾಯಿಸಿದ್ದ ಎಲ್ಲ ಪಾಠಗಳು ಅಥವಾ ಕಲಿಕಾಂಶಗಳನ್ನು ಪಠ್ಯಪುಸ್ತಕದಿಂದ ಕೈಬಿಡಬೇಕು. ಜೊತೆಗೆ ಎಲ್ಲ ಪಠ್ಯಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪುನರ್ ಪರಿಶೀಲಿಸಲು ಕೂಡಲೇ ತಜ್ಞರ ಸಮಿತಿ ರಚಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಸಮನ್ವಯ ವೇದಿಕೆಯ ಮಹಾ ಪೋಷಕ ಪ್ರೊ.ವಿ.ಪಿ.ನಿರಂಜನಾರಾಧ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗಿದೆ.
ಬೆಂ.ನಗರ ವಿವಿಯಲ್ಲಿ ವಿದೇಶಿ ಭಾಷೆಯಲ್ಲಿ ಡಿಗ್ರಿ: ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಭಾಷೆ ಪರಿಚಯ
ಬಿಜೆಪಿ ಅವಧಿಯಲ್ಲಿ ಸಂವಿಧಾನ ಬಾಹಿರವಾಗಿ ಪಠ್ಯಪರಿಷ್ಕರಣೆ ಮಾಡಿ ಮಕ್ಕಳಲ್ಲಿ ಕೋಮುಭಾವನೆ ಮುಡಿಸುವ ಪಾಠಗಳನ್ನು ಸೇರಿಸಲಾಗಿದೆ. ಅಂತಹ ಎಲ್ಲ ಪಾಠಗಳನ್ನೂ ಕೈಬಿಟ್ಟು ಉಳಿದ ಪಾಠಗಳನ್ನು ಮಾತ್ರ ಬೋಧಿಸಲು ಶಿಕ್ಷಕರಿಗೆ ಸೂಚನೆ ನೀಡಬೇಕು. ಜತೆಗೆ ಅಂತಹ ಪಾಠಗಳನ್ನು ಪುನರ್ ಪರಿಷ್ಕರಣೆ ಮೂಲಕ ತೆಗೆದುಹಾಕಲು ತಜ್ಞರ ಸಮಿತಿ ರಚಿಸಬೇಕು. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಖಾಲಿ ಇರುವ ಇನ್ನಷ್ಟುಶಿಕ್ಷಕ ಹುದ್ದೆಗಳ ಭರ್ತಿಗೂ ತಕ್ಷನ ಮುಂದಾಗಬೇಕು. ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಅನ್ನು ವಿಳಂಬವಾಗದಂತೆ ವಿದ್ಯಾರ್ಥಿಗಳಿಗೆ ನೀಡಬೇಕು. ಪ್ರೌಢ ಶಾಲಾ ಮಕ್ಕಳಿಗೆ ಸೈಕಲ್ ನೀಡುವ ಯೋಜನೆ ಪುನಾರಂಭಸಬೇಕೆಂದು ಕೋರಿದೆ. ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಹಾರ ಯೋಜನೆ ಜಾರಿಗೆ ತರಬೇಕು. ಅಂಗನವಾಡಿಯಿಂದ 10ನೇ ತರಗತಿ ವರೆಗೆ ಎಲ್ಲ ಮಕ್ಕಳಿಗೂ ಅಪೌಷ್ಠಿಕತೆ ತಡೆಗಟ್ಟಲು ಮೊಟ್ಟೆ ವಿತರಿಸಬೇಕು ಎಂದು ಮನವಿ ಮಾಡಲಾಗಿದೆ.