Latest Videos

ನಿನ್ನೆಯೇ ಬಹುತೇಕ ಖಾಸಗಿ ಶಾಲೆ ಶುರು, ನಾಳೆಯಿಂದ ಸರ್ಕಾರಿ ಸ್ಕೂಲ್‌ ಆರಂಭ

By Kannadaprabha NewsFirst Published May 30, 2023, 10:18 AM IST
Highlights

ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಖಾಸಗಿ ಶಾಲೆಗಳು ಸೋಮವಾರ ಆರಂಭವಾಗಿದ್ದು ಮೊದಲ ದಿನವೇ ಶಿಕ್ಷಕರು ತರಗತಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಬೇಸಿಗೆ ರಜೆ ಮುಗಿಸಿಕೊಂಡು ಬಂದ ಮಕ್ಕಳನ್ನು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. 

ಬೆಂಗಳೂರು(ಮೇ.30):  ಪ್ರಸಕ್ತ 2023-24ನೇ ಸಾಲಿನ ಶೈಕ್ಷಣಿಕ ಅವಧಿ ಶುರುವಾಗಿದ್ದು ಸರ್ಕಾರಿ ಶಾಲೆಗಳು ಆರಂಭಕ್ಕೆ ಎರಡು ದಿನ ಮೊದಲೇ ಸೋಮವಾರದಿಂದ ರಾಜ್ಯಾದ್ಯಂತ ಬಹುತೇಕ ಖಾಸಗಿ ಶಾಲೆಗಳು ಪುನಾರಂಭಗೊಂಡಿವೆ. ಸರ್ಕಾರಿ ಶಾಲೆಗಳಲ್ಲಿ ಮೇ.31ರಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿವೆ.

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಅನೇಕ ಖಾಸಗಿ ಶಾಲೆಗಳು ಸೋಮವಾರ ಆರಂಭವಾಗಿದ್ದು ಮೊದಲ ದಿನವೇ ಶಿಕ್ಷಕರು ತರಗತಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಬೇಸಿಗೆ ರಜೆ ಮುಗಿಸಿಕೊಂಡು ಬಂದ ಮಕ್ಕಳನ್ನು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. ಎರಡು ತಿಂಗಳ ಬಳಿಕ ಶಾಲೆಗೆ ಆಗಮಿಸಿದ ಮಕ್ಕಳು ಕೂಡ ತಮ್ಮ ನೆಚ್ಚಿನ ಗುರುಗಳ ಮುಖ ನೋಡಿದ ಕೂಡಲೇ ನಗುಮೊಗದಿಂದಲೇ ನಮಸ್ಕಾರ ತಿಳಿಸುತ್ತಾ ಶಾಲೆ ಪ್ರವೇಶಿಸುತ್ತಿದ್ದುದು ಎಲ್ಲೆಡೆ ಕಂಡುಬಂತು.

ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ

ಇನ್ನು ಎಲ್‌ಕೆಜಿ, 1ನೇ ತರಗತಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಖಾಸಗಿ ಶಾಲೆಗಳಲ್ಲಿ ಮುಂದುವರೆದಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆತಂದು ದಾಖಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ:

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಆಗಮಿಸಿ ಕೆಲವು ಹಿರಿಯ ತರಗತಿ ಮಕ್ಕಳು, ಪೋಷಕರ ಸಹಕಾರದೊಂದಿಗೆ ಶಾಲೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ. ಮಂಗಳವಾರವೂ ಇದು ಮುಂದುವರೆಯಲಿದ್ದು ಬುಧವಾರದಿಂದ ಸರ್ಕಾರಿ ಶಾಲೆಗಳಲ್ಲೂ ತರಗತಿ ಚಟುವಟಿಕೆಗಳು ಆರಂಭವಾಗಲಿವೆ.

ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ನಡೆಸಲು ಸೂಚನೆ

ರಾಜ್ಯದಲ್ಲಿ ಮೇ 31ರಿಂದ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳು ಶುರುವಾಗಲಿದ್ದು, ಈ ಅವಧಿಯಲ್ಲಿ 1ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ‘ಸೇತುಬಂಧ’ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚಿಸಿದೆ.

ಮಕ್ಕಳಲ್ಲಿನ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಳ್ಳುತ್ತದೆ. 1ರಿಂದ 10ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ dsert.karnataka.gov.in/​info-sethubandha+Literature/kn ದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ರಾಜ್ಯಾದ್ಯಂತ 27 ಸಾವಿರ ಅತಿಥಿ ಶಿಕ್ಷಕರ ನೇಮಕ: ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ..

ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯವನ್ನು ಸಿದ್ಧಪಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವುದು ಸೇತುಬಂಧ ಶಿಕ್ಷಣದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ 1ರಿಂದ 10 ತರಗತಿಗೆ ಸೇತುಬಂಧ ಆಯೋಜಿಸಲಾಗಿದೆ.

ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ ಲಿಖಿತ ಅಥವಾ ಮೌಖಿಕ ಪ್ರಶ್ನೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು, ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು, ಮನೆಪಾಠ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು. ಸೇತುಬಂಧದ ಬಳಿಕವೂ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಗಳಿಕೆ ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿ ಪಠ್ಯ ಬೋಧನಾ ಸಂದರ್ಭದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನೀಡುವಾಗ ಸಾಮರ್ಥ್ಯಗಳಿಗೆ ವಿಶೇಷ ಆದ್ಯತೆ ನೀಡಿ ಕಲಿಕೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದೆ.

click me!