ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೈಜೂಸ್‌ನ ಭಾರತೀಯ ಸಿಇಒ ಸ್ಥಾನಕ್ಕೆ ಅರ್ಜುನ್ ಮೋಹನ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೆ ಬೈಜು ರವೀಂದ್ರನ್ ಮರಳಿದ್ದಾರೆ. ಕಂಪೆನಿಯು ಮೂರು ವಿಭಾಗವಾಗಿದೆ.
ನವದೆಹಲಿ (ಏ.15): 2022ರಿಂದಲೂ ನಿರಂತರವಾಗಿ ಹಲವು ಹಂತಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಬೈಜೂಸ್‌ನಿಂದ ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಕಲಿಕಾ ಸಂಸ್ಥೆ ಬೈಜೂಸ್‌ನ ಭಾರತೀಯ ವ್ಯವಹಾರಗಳ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಸ್ಥಾನಕ್ಕೆ ಅರ್ಜುನ್ ಮೋಹನ್ ರಾಜೀನಾಮೆ ನೀಡಿದ್ದಾರೆ. ಆನ್ಲೈನ್ ಕೋಚಿಂಗ್ ಹಾಗೂ ಟ್ಯೂಷನ್ ಒದಗಿಸುವ ಮೂಲಕ ಫೇಮಸ್ ಆಗಿದ್ದ ಬೈಜೂಸ್ ಶಿಕ್ಷಣ ಸಂಸ್ಥೆಯ ಸಿಇಒ ಸ್ಥಾನದಿಂದ ಅರ್ಜುನ್ ಮೋಹನ್ ಕೆಳಗಿಳಿದ ಬೆನ್ನಲ್ಲೇ ಮತ್ತೆ ಸಿಇಓ ಸ್ಥಾನಕ್ಕೆ ಬೈಜು ರವೀಂದ್ರನ್ ಅವರು ಮರಳಿದ್ದಾರೆ.
ಕಳೆದ 2023ರ ಸೆಪ್ಟೆಂಬರ್‌ನಲ್ಲಿ ಅರ್ಜುನ್ ಮೋಹನ್ ಸಿಇಓ ಆಗಿ ನೇಮಕಗೊಂಡಿದ್ದರು. ಒಂದು ವರ್ಷ ಪೂರೈಸುವ ಮುನ್ನವೇ ರಾಜೀನಾಮೆ ನೀಡಿ ಪದತ್ಯಾಗ ಮಾಡಿದ್ದಾರೆ.
undefined
ನಿರ್ಗಮಿತ ಅರ್ಜುನ್ ಮೋಹನ್ ಅವರು ಬಾಹ್ಯ ಸಲಹೆಗಾರರಾಗಿ ಬೈಜೂಸ್ ಜೊತೆ ಸಂಬಂದ ಹೊಂದಿರಲಿದ್ದಾರೆ. ಆಡಳಿತ ನಿರ್ಧಾರಗಳಲ್ಲಿ ಅವರ ಪಾತ್ರ ಇರುವುದಿಲ್ಲ. ರವೀಂದ್ರನ್ ಅವರು ಈಗ ದೈನಂದಿನ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೈಜುಸ್ ಲರ್ನಿಂಗ್ ಆ್ಯಪ್, ಆನ್ಲೈನ್ ಕ್ಲಾಸ್ ಮತ್ತು ಟ್ಯೂಷನ್ ಕ್ಲಾಸ್ ಹಾಗು ಟೆಸ್ಟ್ ಪ್ರಿಪರೇಶನ್ ಹೀಗೆ ಮೂರು ಘಟಕಗಳಾಗಿ ಬೈಜುಸ್ ನಿರ್ವಹಣೆ ಆಗಲಿದೆ. ಈ ಮೂರು ಘಟಕಗಳು ಪ್ರತ್ಯೇಕ ನಾಯಕತ್ವದೊಂದಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿವೆ ಎಂದು ತಿಳಿದುಬಂದಿದೆ.
ಅರ್ಜುನ್ ಮೋಹನ್ ಈ ಮೊದಲು ಬೈಜುಸ್ನಲ್ಲಿ ಚೀಫ್ ಬಿಸಿನೆಸ್ ಆಗಿದ್ದರು. 2020ರಲ್ಲಿ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಕಂಪೆನಿ ತೊರೆದು ಅಪ್ಗ್ರಾಡ್ಗೆ ಸಿಇಒ ಆಗಿದ್ದರು. ಮತ್ತೆ ಬೈಜೂಸ್ ಗೆ ಮರಳಿದ ಅವರಿಗೆ ಭಾರತೀಯ ವ್ಯವಹಾರಗಳ ಸಿಇಒ ಸ್ಥಾನ ನೀಡಲಾಗಿತ್ತು. 10 ತಿಂಗಳ ಕಾಲ ಈ ಸ್ಥಾನದಲ್ಲಿದ್ದ ಅವರ ಆಡಳಿತದಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು.
ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೈಜೂಸ್ ಸಂಸ್ಥೆಯನ್ನು ತೊರೆದು ಬೈಜೂಸ್‌ನ ಮಾಲಕ ಸಂಸ್ಥೆ ಥಿಂಕ್ ಅಂಡ್ ಲರ್ನ್ನ ಸಹ-ಕಂಪನಿಯಾದ ಆಕಾಶ್ಗೆ ಸಿಇಒ ಆಗಲು ಪ್ರಯತ್ನಿಸಿದ್ದರು. ಆದರೆ ಇದು ಅವರಿಗೆ ದಕ್ಕಲಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವಾಗ ಸೂಕ್ತ ಹುದ್ದೆ ಕಷ್ಟ ಎಂದು ಯಾವಾಗ ಖಾತ್ರಿಯಾಯ್ತೋ ಈಗ ರಾಜೀನಾಮೆ ನೀಡಿ ತೆರಳಿದ್ದಾರೆ. ಬೈಜುಸ್ ಸ್ಥಾಪನೆಯಾದ ಬಳಿಕ ಮೂರು ಬಾರಿ ಸಿಇಒ ಬದಲಾವಣೆಯಾದಂತಾಗಿದೆ.