ಎಸ್ಸೆಸ್ಸೆಲ್ಸಿಯಲ್ಲಿ ಶೇ.75 ಫಲಿತಾಂಶ ತನ್ನಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Kannadaprabha News   | Kannada Prabha
Published : May 30, 2025, 10:37 AM IST
Siddaramaiah

ಸಾರಾಂಶ

ಮಕ್ಕಳ ನೈಜ ಸಾಮರ್ಥ್ಯ ಗೊತ್ತಾಗಬೇಕಾದರೆ ಗ್ರೇಸ್‌ ಅಂಕಗಳನ್ನು ನೀಡಬಾರದು ಎಂದು ನಿಲ್ಲಿಸಿದೆ. ಇದರಿಂದ ಈ ಸಾಲಿನಲ್ಲಿ (2024-25) ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.63ರಷ್ಟು ಫಲಿತಾಂಶ ಬಂದಿದೆ.

ಬೆಂಗಳೂರು (ಮೇ.30): ಗ್ರೇಸ್‌ ಅಂಕ ಕೊಡುವುದರಿಂದ ಮಕ್ಕಳ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ಹಾಗಾಗಿ ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರೇಸ್‌ ಅಂಕ ನೀಡದೆ ಶೇ.75ರಷ್ಟು ಫಲಿತಾಂಶ ತೆಗೆದುಕೊಂಡು ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾರಂಭದ ಮೊದಲ ದಿನವೇ ಶಿಕ್ಷಣ ಸಚಿವರು, ಅಧಿಕಾರಿಗಳು ಮತ್ತು ಶಿಕ್ಷಕರಿಗೆ ತಾಕೀತು ಮಾಡಿದರು. ಆಡುಗೋಡಿಯ ಅಯ್ಯಪ್ಪ ಗಾರ್ಡನ್ ಪಟೇಲ್ ಮುನಿಚಿನ್ನಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2023-24ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯವರು ಶೇ.20ರಷ್ಟು ಗ್ರೇಸ್‌ ಅಂಕ ನೀಡುವ ಪರಿಪಾಠ ಇಟ್ಟುಕೊಂಡಿದ್ದರು.

ಆದರೆ, ಮಕ್ಕಳ ನೈಜ ಸಾಮರ್ಥ್ಯ ಗೊತ್ತಾಗಬೇಕಾದರೆ ಗ್ರೇಸ್‌ ಅಂಕಗಳನ್ನು ನೀಡಬಾರದು ಎಂದು ನಿಲ್ಲಿಸಿದೆ. ಇದರಿಂದ ಈ ಸಾಲಿನಲ್ಲಿ (2024-25) ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.63ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ.20ಕ್ಕಿಂತ ಹೆಚ್ಚು ಫಲಿತಾಂಶ ಕಡಿಮೆ ಆಗಿತ್ತು. ನೀವು ಗ್ರೇಸ್‌ ಅಂಕಗಳನ್ನು ನೀಡದೆಯೇ ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (2025-26ನೇ ಸಾಲು) ಶೇ.75ರಷ್ಟು ಫಲಿತಾಂಶ ತರಬೇಕು ಎಂದು ಸೂಚಿಸಿದರು. ಸಿಎಂ ಭಾಷಣದ ಮಧ್ಯೆ ಮಧ್ಯೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶೇ.20ರಷ್ಟು ಗ್ರೇಸ್‌ ಅಂಕ,

ಫಲಿತಾಂಶ ಕುಸಿತದ ಬಗ್ಗೆ ಸಮರ್ಥಿಸಿಕೊಂಡು ತಮ್ಮದೇ ಲೆಕ್ಕ, ವ್ಯಾಖ್ಯಾನ ನೀಡಲು ಮುಂದಾದರಾದರೂ ಅಂಕಿ ಅಂಶಗಳಲ್ಲಿ ಪಕ್ಕಾ ಇರುವ ಮುಖ್ಯಮಂತ್ರಿಯವರು ಅದು ಹಂಗಲ್ಲಪ್ಪ, ಅದೇನೇ ಆಗಲಿ ಗ್ರೇಸ್‌ ಅಂಕ ಜಾಸ್ತಿ ಮಾಡಿದ್ದರಿಂದ ಫಲಿತಾಂಶ ಜಾಸ್ತಿ ಆಗಿತ್ತು. ಮುಂದೆ ಗ್ರೇಸ್‌ ಅಂಕ ಕೊಡದೆ ಉತ್ತಮ ಫಲಿತಾಂಶ ತನ್ನಿ ಎಂದು ಗುರಿ ನೀಡಿದರು. ಇವತ್ತು 625ಕ್ಕೆ 625 ಅಂಕ ಪಡೆದವರು ಸೇರಿದಂತೆ ಅತ್ಯುನ್ನತ ಫಲಿತಾಂಶ ಪಡೆದ 40 ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದೇವೆ. ಆದರೆ, ಪ್ರತೀ ವರ್ಷ 8 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಒಂದು ಲಕ್ಷ ಮಕ್ಕಳಾದರೂ ಅತ್ಯುನ್ನತ ದರ್ಜೆಯಲ್ಲಿ ಪಾಸಾಗಬೇಕು ಕೂಡ ಹೇಳಿದರು.

ಕಾಯಂ ಶಿಕ್ಷಕರ ನೇಮಕಾತಿಗೆ ಕ್ರಮ: ಸರ್ಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣ, ಖಾಸಗಿ ಶಾಲೆಯಲ್ಲಿ ಸಿಗುವ ಶಿಕ್ಷಣ ಬೇರೆ ಬೇರೆ ಆಗಬಾರದು. ಈ ತಾರತಮ್ಯ ಹೋಗಲಾಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಬಾರಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮೋದನೆ ನೀಡಿದ್ದು, ಅವರ ಮಾಸಿಕ ಗೌರವಧನ ₹2000 ಹೆಚ್ಚಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ಶಿಥಿಲಾವಸ್ಥೆಯ ಶಾಲೆ, ಕೊಠಡಿಗಳ ದುರಸ್ಥಿಗೆ ಈ ವರ್ಷವೂ ಸೇರಿ 3 ವರ್ಷಗಳಿಂದ ಸೂಕ್ತ ಅನುದಾನ ನೀಡಲಾಗಿದೆ. ಮುಂದೆ ಕಾಯಂ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸುತ್ತೇವೆ ಎಂದರು.

ಮಕ್ಕಳು ಎಷ್ಟು ಭಾಷೆ ಕಲಿತರೂ ಒಳ್ಳೆಯದೆ. ಸಾಧ್ಯವಾದಷ್ಟು ಹೆಚ್ಚೆಚ್ಚು ಭಾಷೆ ಕಲಿಯಲು ಪ್ರಯತ್ನಿಸಿ ಆದರೆ ಕನ್ನಡದಲ್ಲಿ ಮುಂದಿರಿ. ತಾಯಿ ಭಾಷೆ ನಾಡು, ನುಡಿ, ನೆಲ, ಜಲದ ಬಗ್ಗೆ ಸದಾ ಪ್ರೀತಿ ಹೊಂದಿರಿ. ಶಿಕ್ಷಕರು ಮಕ್ಕಳನ್ನು ಬರೀ ವಿದ್ಯಾವಂತರನ್ನಾಗಿ ಮಾಡದೆ ವಿಚಾರವಂತರನ್ನಾಗಿ ಮಾಡಿ ಎಂದು ತಿಳಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ 329 ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ 625ಕ್ಕೆ 625 ಅಂಕಗಳನ್ನು ಪಡೆದಿರುವ 48 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಂಎಲ್‌ಸಿ ರಾಮೋಜಿಗೌಡ, ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಆಯುಕ್ತ ಡಾ. ಕೆ.ವಿ. ತ್ರಿಲೋಕ್‌ಚಂದ್ರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅತ್ಯಂತ ಉತ್ತಮವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕ್ಷೇತ್ರ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ, ಮಕ್ಕಳ ದಾಖಲಾತಿಯೂ ಹೆಚ್ಚಾಗಿದೆ. ರಾಜ್ಯದ ಎಲ್ಲ ಶಾಸಕರೂ ಇದನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಕ್ಷೇತ್ರಗಳ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ