
ಡೇಟಿಂಗ್ ಆ್ಯಪ್ ಇದೀಗ ಸಕತ್ ಫೇಮಸ್ ಆಗಿಬಿಟ್ಟಿದೆ. ಸಂಬಂಧ, ಮದುವೆ, ದಾಂಪತ್ಯ ಇವುಗಳಿಗೆಲ್ಲಾ ತುಂಬಾ ಗೌರವದ ಭಾವನೆ ಇರೋ ಭಾರತದಲ್ಲಿಯೂ ಈಗ ಯಾವುದೋ ವ್ಯಕ್ತಿಯ ಜೊತೆ ಡೇಟಿಂಗ್, ಡೇಟಿಂಗ್ ಹೆಸರಿನಲ್ಲಿ ಇನ್ನೇನೋ ಎಲ್ಲವೂ ಮಾಮೂಲು ಆಗಿಬಿಟ್ಟಿರುವ ಕಾರಣದಿಂದಲೇ ಈ ಆ್ಯಪ್ಗಳನ್ನು ರಚಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಆ್ಯಪ್ ಮೂಲಕ ಯಾರನ್ನೊ ಪರಿಚಯ ಮಾಡಿಕೊಂಡು ಅವರ ಜೊತೆ ದಿನಪೂರ್ತಿ ಇರುವುದು, ಕೆಲವೊಮ್ಮೆ ಆ ಸಂಬಂಧ ಇನ್ನೂ ಮುಂದಕ್ಕೆ ಹೋಗುವುದು... ಹೀಗೆ ಏನೇನೋ ನಡೆಯುತ್ತಲೇ ಇವೆ. ಅತ್ಯಂತ ಶ್ರೀಮಂತ ವರ್ಗಕ್ಕಷ್ಟೇ ಸೀಮಿತವಾಗಿದ್ದ ಇಂಥದ್ದೊಂದು ಚಟ ಇದೀಗ ಮಧ್ಯಮ ವರ್ಗದವರಿಗೂ ಅಂಟಿಬಿಟ್ಟಿದೆ. ಐಷಾರಾಮಿ ಬದುಕನ್ನು ಬಯಸುತ್ತಿರುವ ಯುವತಿಯರು, ಅದನ್ನೇ ಬಂಡವಾಳವಾಗಿಸಿಕೊಂಡು ದುಬಾರಿ ಬೆಲೆಬಾಳುವ ವಸ್ತುಗಳನ್ನು ಸಾಲ ಮಾಡಿಯಾದರೂ ನೀಡಿ ತಮ್ಮ ತೀಟೆ ತೀರಿಸಿಕೊಂಡು ನಡುನೀರಿನಲ್ಲಿ ಹುಡುಗಿಯರನ್ನು ಕೈಬಿಡುವ ಘಟನೆಗಳು ಅದೆಷ್ಟೋ ನಡೆಯುತ್ತಲೇ ಇದ್ದರೂ, ಹುಡುಗಿಯರಿಗೂ ಬುದ್ಧಿ ಬರುತ್ತಿಲ್ಲ.
ಇಂಥ ಡೇಟಿಂಗ್ ಆ್ಯಪ್ಗಳು ಅದೆಷ್ಟು ಮಟ್ಟಿಗೆ ಪ್ರಸಿದ್ಧವಾಗಿದೆ ಎಂದರೆ, ಚಿಕ್ಕ ಚಿಕ್ಕ ಮಕ್ಕಳೇ ಶಿಕ್ಷಕಿಯೊಬ್ಬಳಿಗೆ ಡೇಟಿಂಗ್ ಆ್ಯಪ್ ಬಗ್ಗೆ ಹೇಳಿಕೊಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ಘಟನೆ ಸಿಂಗಪುರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ಎಲ್ಲಿಯದ್ದು ಎನ್ನುವ ಸ್ಪಷ್ಟತೆ ಇಲ್ಲ. ಆದರೆ ಚಿಕ್ಕವಯಸ್ಸಿನ ಶಿಕ್ಷಕಿಯೊಬ್ಬಳಿಗೆ ಮಕ್ಕಳು ಟಿಂಡರ್ ಎನ್ನುವ ಡೇಟಿಂಗ್ ಆ್ಯಪ್ ಚೆನ್ನಾಗಿದೆ, ಅದನ್ನು ಬಳಸಿ ಎಂದು ಹೇಳಿಕೊಡುತ್ತಿದ್ದಾರೆ. ಶಿಕ್ಷಕಿ ಅದನ್ನು ಕೂಲ್ ಆಗಿ ಪರಿಗಣಿಸಿ ಹೌದಾ, ಅದು ಚೆನ್ನಾಗಿದ್ಯಾ ಹಾಗಿದ್ರೆ ನಾನು ಟ್ರೈ ಮಾಡುತ್ತೇನೆ ಎನ್ನುತ್ತಲೇ ನಿಮಗೆ ಇದರ ಬಗ್ಗೆ ಹೇಗೆ ಗೊತ್ತಾಯ್ತು ಎಂದು ಕೇಳಿದ್ದಾಳೆ. ಆಗ ಮಕ್ಕಳು ವಿವಿಧ ರೀತಿಯ ಉತ್ತರಗಳನ್ನು ಕೊಟ್ಟಿದ್ದಾರೆ.
ಈ ವಿಡಿಯೋ ನೋಡಲು ಮಜಾ ಎನ್ನಿಸಿದರೂ, ಇದರ ಆಳಕ್ಕೆ ಹೋದರೆ, ಮಕ್ಕಳ ತಲೆಯಲ್ಲಿ ಓದುವುದು ಬಿಟ್ಟು ಇಂಥದ್ದೆಲ್ಲಾ ತುಂಬಿಕೊಳ್ಳುತ್ತಿವೆಯೇ ಎನ್ನಿಸುವುದು ಉಂಟು. ಡೇಟಿಂಗ್ ಅಂದರೇನೂ ಎಂದೇ ಬಹುಶಃ ಈ ಮಕ್ಕಳಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದರ ಬಗ್ಗೆ ಮನೆಯಲ್ಲಿ ಮಾತನಾಡುವುದು, ಟಿವಿಗಳಲ್ಲಿ ಬಂದಿರುವುದನ್ನು ನೋಡುವುದು ಎಲ್ಲಕ್ಕಿಂತಲೂ ಮುಖ್ಯವಾಗಿ ಕೈಯಲ್ಲಿ ಇರುವ ಮೊಬೈಲ್ನಲ್ಲಿ ಸುಲಭದಲ್ಲಿ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶ ಇರುವುದರಿಂದ ಮಕ್ಕಳು ಇದರ ಬಗ್ಗೆ ತಿಳಿದುಕೊಂಡಿರುವುದು ಮಾತ್ರ ತುಂಬಾ ಆತಂಕಕಾರಿ ವಿಷಯವಂತೂ ಹೌದು. ಇತ್ತೀಚೆಗೆ ಪ್ರೈಮರಿ ಶಾಲೆಯ ಮಕ್ಕಳೇ ಅ*ತ್ಯಾಚಾರ, ಕೊ*ಲೆ ಮಾಡುವುದು ಬೆಳಕಿಗೆಬರುತ್ತಿದೆ. ಶಿಕ್ಷಕರನ್ನು ಶೂಟೌಟ್ ಮಾಡುವ ಘಟನೆಗಳೂ ನಡೆಯುತ್ತಿವೆ.
ಇದೇ ರೀತಿ ಪರಿಸ್ಥಿತಿ ಮುಂದೆ ಹೋದರೆ ತುಂಬಾ ಕಷ್ಟ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊನೆಯ ಪಕ್ಷ ಇಂಥ ವಿಷಯಗಳನ್ನು ಮನೆಯಲ್ಲಿ ಮಕ್ಕಳ ಎದುರು ಮಾತನಾಡದಂತೆ ಪಾಲಕರಿಗೆ ನೆಟ್ಟಿಗರು ಕಿವಿ ಮಾತನ್ನೂ ಹೇಳಿಕೊಡುತ್ತಿದ್ದಾರೆ. ಇದರ ಬಗ್ಗೆ ಅವರಿಗೆ ಅರಿವು ಇಲ್ಲದಿದ್ದರೂ ಅದೇನು ಎಂದು ತಿಳಿಯುವ ಕುತೂಹಲದಿಂದ ಮಕ್ಕಳು ಏನು ಬೇಕಾದರೂ ಮಾಡಿಯಾರು, ಅದಕ್ಕೆ ಈಗ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿವೆ ಎನ್ನುವುದು ಬಹುತೇಕರ ಅಭಿಪ್ರಾಯ. ಮನೆಯಲ್ಲಿ ಚಿಕ್ಕಮಕ್ಕಳು ಇಂಥ ಮಾತನಾಡಿದಾಗ, ಅದರ ಮುದ್ದು ಮುದ್ದು ಮಾತು ಕೇಳಿ ಮನೆಮಂದಿ ನಕ್ಕು ಮಗುವನ್ನು ಮತ್ತಷ್ಟು ಮುದ್ದು ಮಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳು ಮತ್ತೆ ಮತ್ತೆ ಅದನ್ನೇಮಾತನಾಡುತ್ತವೆ. ಸ್ವಲ್ಪ ದೊಡ್ಡವನಾದ ಮೇಲೆ ಇದೇ ಮಾತನಾಡಿದರೆ ಅದೇ ಅಪ್ಪ-ಅಮ್ಮ ಅದಕ್ಕೆ ಹೊಡೆಯುವುದು ಇದೆ. ಇಲ್ಲಿ ತಪ್ಪು ಯಾರದ್ದು ಎನ್ನುವುದನ್ನು ಗಮನಿಸಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದನ್ನು ಕಲಿಯಬೇಕಿದೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.