* ವಿವಿ ಮುಚ್ಚಲಾಗುತ್ತದೆ ಎಂಬ ಗುಮಾನಿ ಕಪೋಲಕಲ್ಪಿತ: ವಿಪ ಸದಸ್ಯ ಅರುಣ ಶಹಾಪುರ
* ಭಾಗದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಲೂ ತೀರ್ಮಾನ
* ರಾಜಸ್ಥಾನ ಮಾದರಿ ಅನುಸರಿಸಿ
ವಿಜಯಪುರ(ಫೆ.26): ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ(Akkamahadevi Womens University) ಮುಚ್ಚುತ್ತಿಲ್ಲ. ಬದಲಾಗಿ ಸರ್ಕಾರದ ಮಟ್ಟದಲ್ಲಿ ಸುಧಾರಣೆಗೆ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಸಾಧನೆ, ಸವಾಲು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಈ ಸಂಬಂಧ ಈ ಭಾಗದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಲೂ ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ(Arun Shahapur) ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲಾಗುತ್ತದೆ ಎಂಬ ಗುಮಾನಿ ಕಪೋಲಕಲ್ಪಿತ. ಈ ರೀತಿಯ ಯಾವ ಪ್ರಯತ್ನವೂ ನಡೆದಿಲ್ಲ. ಅದರ ಬದಲಾಗಿ ವಿಶ್ವವಿದ್ಯಾಲಯದ ಸಬಲೀಕರಣಕ್ಕಾಗಿ(Empowerment) ಚರ್ಚೆ ನಡೆಯುತ್ತಿದೆ ಎಂದರು.
Russia Ukraine Crisis: ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾ, ಉಕ್ರೇನ್ ತೆರಳುವುದೇಕೆ?
ಅಕ್ಕಮಹಾದೇವಿ ಮಹಿಳಾ ವಿವಿಗೆ 20 ವರ್ಷ ತುಂಬಿದೆ. ಹಾಗಾಗಿ ವಿಶ್ವವಿದ್ಯಾಲಯದ ಮಹಿಳಾ ಕೇಂದ್ರಿತ ಸಾಧನೆ ಪರಾಮರ್ಶೆಗೆ ಚರ್ಚೆಯಾಗಬೇಕಿದೆ. ವಿವಿ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಇರುವ ಉತ್ಸಾಹ ನಂತರ ಕಡಮೆಯಾಗಿದೆ. ಹೀಗಾಗಿ ನಂತರದ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ? ಏನಾಗಬೇಕು ಎಂಬುದರ ಬಗ್ಗೆ ಪರಾಮರ್ಶೆ ನಡೆಯುವುದು ಸೂಕ್ತ ಎಂದರು.
ಮಹಿಳಾ ವಿವಿ ಅಭಿವೃದ್ಧಿಗೆ ನಮ್ಮ ಕೊಡುಗೆ ಹಾಗೂ ಬದ್ಧತೆ ಏನು ಎಂಬುದರ ಬಗ್ಗೆ ಸರ್ಕಾರ ಪ್ರಸ್ತುತಪಡಿಸಲು ಸಿದ್ಧವಾಗಿದೆ, ಹತ್ತರಲ್ಲಿ ಹನ್ನೊಂದು ಎಂಬ ವಿಶ್ವವಿದ್ಯಾಲಯ ಆಗಬಾರದು ಎಂಬುದು ನನ್ನ ಆಶಯ ಹಾಗೂ ಉದ್ದೇಶ. ಆತ್ಮಾವಲೋಕನಕ್ಕೆ ಇದೊಂದು ಅವಕಾಶ, ಮಹಿಳಾ ವಿವಿಯಾಗಿಯೇ ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂಬ ಆಶಯವಿದೆ ಎಂದರು.
ರಾಜಸ್ಥಾನ ಮಾದರಿ ಅನುಸರಿಸಿ:
ರಾಜಸ್ಥಾನ ಸರ್ಕಾರದ(Government of Rajasthan) ಮಾದರಿಯಲ್ಲಿ ರಾಜ್ಯ ಸರ್ಕಾರ(Government of Karnataka) ಸಹ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರು ಜಾರಿ ಮಾಡಬೇಕು. ಪ್ರಸಕ್ತ ಬಜೆಟ್‌ನಲ್ಲಿಯೇ(Budget) ಈ ಸಿಹಿಸುದ್ದಿಯನ್ನು ಸರ್ಕಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಆಶಯ ವ್ಯಕ್ತಪಡಿಸಿದರು.
ರಾಜಸ್ಥಾನ ಸರ್ಕಾರ ಈಗಾಗಲೇ ಓಪಿಎಸ್(OPS) ಪದ್ಧತಿಯನ್ನು ಮರು ಅಳವಡಿಸಿಕೊಂಡಿದೆ. ಈ ರೀತಿ ನಮ್ಮ ಸರ್ಕಾರ ಸಹ ಸರ್ಕಾರಿ ನೌಕರರಿಗೆ ಬಹುದೊಡ್ಡ ನಿರ್ಣಯ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದೇನೆ ಎಂದರು.ಎಲ್ಲ ಸರ್ಕಾರಿ ನೌಕರರಿಗೆ ಈ ಮೊದಲು ಪಿಂಚಣಿ(Pension) ಬರುತ್ತಿತ್ತು. ಅದು ಅವರಿಗೆ ಆಧಾರವಾಗಿತ್ತು. ಈ ಪದ್ಧತಿ ರದ್ದಾಗಿರುವುದರಿಂದ ನೌಕರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಹೇಳಿದರು.
ವಿ.ವಿ.ಗಳಲ್ಲಿ ಇ-ಆಫೀಸ್ ಕಡ್ಡಾಯ: ಮಾರ್ಚ್ 1ರ ಗಡುವು ವಿಧಿಸಿದ ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ಕರ್ನಾಟಕದ (Karnataka) ಎಲ್ಲ ಸರಕಾರಿ ವಿಶ್ವವಿದ್ಯಾಲಯಗಳು (University) ಮಾರ್ಚ್ 1ರಿಂದ ತನ್ನ ಎಲ್ಲ ಕಡತಗಳನ್ನು ಇ- ಕಚೇರಿ (E Office) ಮೂಲಕವೇ ಅನ್ ಲೈನ್ ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಗಡುವಿನ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಬಗ್ಗೆ ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, `ಇ-ಆಫೀಸ್’ ತಂತ್ರಾಂಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೂ ಕೆಲ ವಿ.ವಿ.ಗಳಲ್ಲಿ ಈ ಕೆಲಸ ಆಗಿಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ’ ಎಂದು ಎಚ್ಚರಿಸಿದ್ದಾರೆ.
ತಮ್ಮ ಕಚೇರಿಯು ಈಗಾಗಲೇ ಸಂಪೂರ್ಣವಾಗಿ ಇ-ಆಫೀಸ್ ತಂತ್ರಾಂಶದ ಮೇಲೆಯೇ ಕೆಲಸ ಮಾಡುತ್ತಿದೆ. ಆದರೆ ಇಲಾಖೆಗೆ ವಿ.ವಿ.ಗಳಿಂದ ಎಲ್ಲ ಪತ್ರಗಳು, ಕಡತಗಳು ಮತ್ತು ಪ್ರಸ್ತಾವನೆಗಳು ಭೌತಿಕ ರೂಪದಲ್ಲಿ ಬರುತ್ತಿವೆ. ಇದರಿಂದಾಗಿ ಇ-ಆಫೀಸ್ ತಂತ್ರಾಂಶ ಅಳವಡಿಕೆಯ ಮೂಲೋದ್ದೇಶವೇ ವಿಫಲವಾದಂತಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Hijab Row: ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆ ಇಲ್ಲ: ಸಚಿವ ನಾಗೇಶ್
ವಿ.ವಿ.ಗಳ ಆಡಳಿತವೂ ಸೇರಿದಂತೆ ಪ್ರತಿಯೊಂದು ಕೆಲಸವೂ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಮಾಡಬೇಕೆನ್ನುವುದು ಇ-ಆಫೀಸ್ ತಂತ್ರಾಂಶದ ಗುರಿಯಾಗಿದೆ. ವಿ.ವಿ.ಗಳು ಸಮಕಾಲೀನ ಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಜೊತೆಗೆ, ಎನ್ಇಪಿ ಅನುಸಾರ ವಿ.ವಿ.ಗಳಲ್ಲಿ ನಡೆಯುತ್ತಿರುವ ಡಿಜಿಟಲೀಕರಣ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಅಳವಡಿಕೆ, ರಾಷ್ಟ್ರೀಯ ಶೈಕ್ಷಣಿಕ ಕೋಶ (ಎನ್ಎಡಿ), ಇ-ಆಫೀಸ್ ಬಳಕೆಗೆ ವಿ.ವಿ.ಗಳಲ್ಲಿನ ಸಿಬ್ಬಂದಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಿ, 15 ದಿನಗಳಲ್ಲಿ ತಮಗೆ ವರದಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.