* ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸ್ವಪಕ್ಷದಲ್ಲಿಯೇ ವಿರೋಧ
* ಶಿಕ್ಷಣ ಸಚಿವ ಸುರೇಶ್ ಕುಮಾರ್ ನಡೆಗೆ ಪರಿಷತ್ ಸದಸ್ಯ ವಿಶ್ವನಾಥ್ ಆಕ್ರೋಶ
* ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿಶ್ವನಾಥ್
ಮೈಸೂರು, (ಜೂನ್.29): ರಾಜ್ಯದಲ್ಲಿ ಎಸ್‌ಎಸ್‌ಎಲ್ ಪರೀಕ್ಷೆ ನಡೆಸುತ್ತಿರುವುದಕ್ಕೆ ಸ್ವಪಕ್ಷದ ನಾಯಕ ಎಚ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ ತೀರ್ಮಾನ ಮಾಡಿ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಕೇಂದ್ರ ಸರ್ಕಾರ ಎಲ್ಲಾ ಯೋಚನೆ ಮಾಡಿ, ಸಲಹೆ ಪಡೆದೆ ತೀರ್ಮಾನ ಮಾಡಿದೆ. ಆದರೆ ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಯಾಕೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ಮಾಡುತ್ತಿದೆ. ಮೊದಲು ಜೀವ ಉಳಿಸಿಕೊಳ್ಳಿ ಎಂದು ಮೋದಿಯೇ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರ ಜೀವ ,ಜೀವನ ಎರಡನ್ನೂ ತೆಗೆಯಲು ಹೊರಟಿದೆ ಎಂದು ಕಿಡಿಕಾರಿದರು.
SSLC ಪರೀಕ್ಷೆ: ಸುರೇಶ್ ಕುಮಾರ್ ನಡೆಗೆ ಆರೋಗ್ಯ ಸಚಿವ ಸುಧಾಕರ್ ಬೇಸರ
ಜಗತ್ತಿನ ಹೊಸ ಸಮಸ್ಯೆಯನ್ನ ಲೆಕ್ಕಿಸದೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರು ನಾನು ಹೇಳಿದ್ದೆ ಸರಿ, ನಾನು ಮಾಡಿದ್ದೆ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಶಿಕ್ಷಣ ಇಲಾಖೆ ತುಂಬಾ ಸೂಕ್ಷ್ಮ ಇಲಾಖೆ. ರಾಜ್ಯದ ಪ್ರತಿ ಮನೆಯೂ ಇಲಾಖೆ ವ್ಯಾಪ್ತಿಯಲ್ಲಿದೆ ಎಂದರು.
ಇನ್ನು ಹತ್ತು ಹನ್ನೆರಡು ದಿನದಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗತ್ತದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕು, ಆದರೆ ಮಗುವನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದೇವೆ. ಎಲ್ಲರೂ ಸೇರಿ ಮಗುವನ್ನ ಸಾಯಿಸುತ್ತಿದ್ದೇವೆ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ಸಭೆ ಮೇಲೆ ಸಭೆ ನಡೆಸುತ್ತೀರಿ. ಈ ವಿಚಾರದಲ್ಲಿ ನಿಮಗೆ ಗೊತ್ತಾಗಲಿಲ್ಲವೇ? ಪರೀಕ್ಷೆ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು ಎಂದರು.