
ಶಾಲಾ ವಾಹನಗಳಲ್ಲಿ ಮಕ್ಕಳನ್ನ ಕಳಿಸೋ ಪೋಷಕರೇ ಎಚ್ಚರ.. ಎಚ್ಚರ..! ಖಾಸಗಿ ಶಾಲಾ ವಾಹನ ಚಾಲಕರಿಂದ ನಿಮ್ಮ ಮಕ್ಕಳ ಜೀವಕ್ಕೆ ಬರಬಹುದು ಕುತ್ತು! ಬೆಂಗಳೂರಿನಲ್ಲಿ ಬೆಳಗ್ಗೆಯೇ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಮದ್ಯಪಾನ ಮಾಡಿಕೊಂಡು ಶಾಲಾ ಬಸ್‌ಗಳನ್ನು ಓಡಿಸುತ್ತಿದ್ದ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.
ಬೆಳಿಗ್ಗೆ ಶಾಲಾ ಆರಂಭ ಸಮಯದಲ್ಲಿ ಡ್ರಂಕ್ ಅಂಡ್ ಡ್ರೈವ್ (DD) ತಪಾಸಣೆ ನಡೆಸಿದ ಸಂಚಾರಿ ಪೊಲೀಸರು ಹಲವಾರು ಶಾಕ್ ನೀಡುವ ವಿಚಾರಗಳನ್ನು ಪತ್ತೆ ಹಚ್ಚಿದರು. ಈ ವೇಳೆ ಹಲವಾರು ಖಾಸಗಿ ಶಾಲಾ ವಾಹನ ಚಾಲಕರು ಕಂಠಪೂರ್ತಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಆರ್.ಆರ್.ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿಯೂ ಈ ಅವ್ಯವಸ್ಥೆ ಪತ್ತೆಯಾಗಿದೆ. ಬೆಂಗಳೂರು ನಗರದಾದ್ಯಂತ ಸಂಚಾರಿ ಪೊಲೀಸ್ ಇಲಾಖೆ ಒಟ್ಟು 4,559 ಶಾಲಾ ವಾಹನಗಳ ಚಾಲಕರನ್ನು ಪರಿಶೀಲನೆಗೆ ಒಳಪಡಿಸಿದೆ. ಈ ವೇಳೆ 58 ಚಾಲಕರು ಮದ್ಯಪಾನ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದರೆಂದು ದೃಢಪಟ್ಟಿದೆ.
ಮದ್ಯಪಾನ ಮಾಡಿದ ಚಾಲಕರನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳಲಾಯಿತು. ಸಂಬಂಧಪಟ್ಟ ಶಾಲಾ ವ್ಯವಸ್ಥಾಪನಾ ಮಂಡಳಿಗೆ ಮಾಹಿತಿ ನೀಡಲಾಯಿತು. ಅಷ್ಟು ವಾಹನಗಳಿಗೂ ಬದಲಿಗೆ ಬೇರೆ ಚಾಲಕರನ್ನು ಕರೆಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸಲಾಯಿತು. ಮದ್ಯಪಾನ ಮಾಡಿದ ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಟ್ರಾಫಿಕ್ ಪೊಲೀಸರು ಆರ್‌ಟಿಒಗೆ ಪತ್ರ ಬರೆಯಲಿದ್ದು, ಈ ಬಗ್ಗೆ ಐಎಂವಿ (Indian Motor Vehicles Act) ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿದೆ.
ಮಕ್ಕಳ ಸುರಕ್ಷತೆ ಬಗ್ಗೆ ಪೂರಕ ಜಾಗೃತಿ ವಹಿಸಿ. ಶಾಲಾ ವಾಹನಗಳ ಚಾಲಕರ ಕುರಿತು ಸಮಯದಿಂದಲೇ ಪರಿಶೀಲನೆ ನಡೆಸಿ. ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುವುದು ನಿಮ್ಮ ಜವಾಬ್ದಾರಿ ಕೂಡ!