Latest Videos

ಶಿಕ್ಷಕರ ನೇಮಕಾತಿ ಹೊಣೆಯನ್ನು ಸೆಕ್ಯೂರಿಟಿ ಏಜೆನ್ಸಿಗೆ ಕೊಟ್ಟ ಸರ್ಕಾರ

By Sathish Kumar KHFirst Published May 26, 2024, 6:48 PM IST
Highlights

ಬಡ ಮಕ್ಕಳಿಗೆ ಶಿಕ್ಷಣ ಪೂರೈಸುವ ಹೊಣೆಹೊತ್ತ ಬಿಬಿಎಂಪಿ ಮತ್ತು ಸರ್ಕಾರ ಶಾಲೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ಸೇವೆ ಪೂರೈಸಲು ಸೆಕ್ಯೂರಿಟಿ ಏಜೆನ್ಸಿಗೆ ಟೆಂಡರ್ ಕೊಡುವ ಮೂಲಕ ಹೊಣೆಗೇಡಿರನ ಪ್ರದರ್ಶನ ಮಾಡಿದೆ.

ಬೆಂಗಳೂರು (ಮೇ 26): ಬೆಂಗಳೂರಿನಲ್ಲಿ ತೀವ್ರ ಕಡು-ಬಡತನದ ಮಕ್ಕಳಿಗೆ ಶಿಕ್ಷಣ ಕೊಡುವ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ಮತ್ತು ಶಿಕ್ಷಣ ಇಲಾಖೆಯು ಸೆಕ್ಯೂರಿಟಿ ಏಜೆನ್ಸಿಗೆ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರ ಸೇವೆ ಪೂರೈಸುವ ಗುತ್ತಿಗೆಯನ್ನು ನೀಡಿದೆ. ರಾಜ್ಯ ಸರ್ಕಾರ ಬಡ ಮಕ್ಕಳಿಗೆ ಶಿಕ್ಷಣ ಪೂರೈಸುವಲ್ಲಿ ಪ್ರದರ್ಶಿಸಿದ ಹೊಣೆಗೇಡಿತನಕ್ಕೆ ಈ ಟೆಂಡರ್ ಸಾಕ್ಷಿಯಾಗಿದೆ. 

ಹೌದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರದಲ್ಲಿ ಖಾಲಿಯಿರುವ ಎಲ್ಲ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ನಿರುದ್ಯೋಗಿಗಳಿಗೆ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಇನ್ನು ನಮ್ಮದು ಬಡಜನರ ಸರ್ಕಾರ, ಉಳ್ಳವರ ಬಳಿಯಿರುವ ಸಂಪತ್ತನ್ನು ಕಿತ್ತುಕೊಂಡು ಸಮಾನವಾಗಿ ಹಂಚಿಕೆ ಮಾಡುತ್ತೇವೆ ಎಂದೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಆದರೆ, ಇಡೀ ಸರ್ಕಾರವನ್ನು ನಡೆಸುವ ಶಕ್ತಿ ಕೇಂದ್ರವಿರುವ ಬೆಂಗಳೂರಿನ ಬಿಬಿಎಂಪಿ ಶಾಲೆಗಳ ಬಡ ಮಕ್ಕಳ ಶಿಕ್ಷಣಕ್ಕೆ ವಂಚನೆ ಆಗುತ್ತಿದ್ದರೂ, ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತುಕೊಂಡಿದೆ ಎಂಬಂತೆ ಕಂಡುಬರುತ್ತಿದೆ. ಇದರ ಹಿಂದೆ ಪರ್ಸೆಂಟೇಜ್ ವ್ಯವಾಹರವೂ ನಡೆಯುತ್ತಿರಬಹುದು ಎಂಬ ಅನುಮಾನವೂ ಸಾರ್ವಜನಿಕರಿಗೆ ಕಾಡದೇ ಇರದು...

ರಾಜ್ಯ ಸರ್ಕಾರದ ಅಡಿಯಲ್ಲಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದಲೂ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಬಿಬಿಎಂಪಿ ಶಾಲೆಗಳಲ್ಲಿ ಶೇ.20 ಪರ್ಮನೆಂಟ್ ಶಿಕ್ಷಕರಿದ್ದರೆ ಬಾಕಿ ಶೇ.80ಗಿಂತ ಅಧಿಕ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳುತ್ತಿದೆ. ಆದರೆ, ಈ ಮೂಲಕ ಕಳಪೆ ಶಿಕ್ಷಣ ಪೂರೈಕೆಗೆ ಕುಖ್ಯಾತಿ ಆಗಿರುವ ಬಿಬಿಎಂಪಿ ಈಗ ಮತ್ತೊಂದು ಹೊಣೆಗೇಡಿತನವನ್ನು ಪ್ರದರ್ಶನ ಮಾಡಿದೆ. ಬಿಬಿಎಂಪಿ ಶಾಲೆಗಳಲ್ಲಿ ಹೊರ ಗುತ್ತಿದೆ ಆಧಾರದಲ್ಲಿ 10 ಕೋಟಿ ರೂ. ಮೌಲ್ಯಕ್ಕೆ ಶಿಕ್ಷಕರ ಸೇವೆಯನ್ನು ಪಡೆಯಲು ಸ್ವತಃ ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆಯನ್ನು ನೀಡಿದೆ. ಸೆಕ್ಯೂರಿಟಿ ಏಜೆನ್ಸಿಯು ಹೇಗೆ ಶಿಕ್ಷಣ ಪೂರೈಕೆ ಮಾಡುತ್ತದೆ ಎಂಬುದು ಮಾತ್ರ ಸೋಜಿಗದ ಸಂಗತಿಯಾಗಿದೆ.

ಶಿಕ್ಷಣ ಸಚಿವರಾದವರಿಗೆ ಡಬಲ್ ಬ್ರೈನ್ ಇರಬೇಕು, ಇವರಿಗೆ ಕನ್ನಡವೇ ಬರೊಲ್ಲ: ಎನ್‌ ಮಹೇಶ್

ಈ ಬಗ್ಗೆ ಮಾಜಿ ಶಿಕ್ಷಣ ಸಚಿವರೂ ಆಗಿರುವ ಎಸ್. ಸುರೇಶ್ ಕುಮಾರ್ ಅವರು ಆಕ್ರೋಶ ಹೊರ ಹಾಕಿದ್ದಾರೆ. ನಾನು ಈ ಹಿಂದೆಯೂ ಈ ವಿಚಾರವನ್ನು ರಾಜ್ಯದ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ. ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ, ಈ ಅಂಶಗಳನ್ನು ಹೇಳುವ ಮೂಲಕ ಸರ್ಕಾರಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ.

 ಬಿಬಿಎಂಪಿ ಹೊರ ಗುತ್ತಿಗೆ ಶಿಕ್ಷಕರ  ಸೇವಾ ಪೂರೈಕೆ ಮಾಡಲು 3 ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ಕೊಡಲಾಗಿದೆ. ಶಿಕ್ಷಕರ ನೇಮಕಾತಿ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ನೀಡಲಾಗಿದ್ದು, ಶಿಕ್ಷಣ ಕ್ಷೇತ್ರ ಎಂತಹ ಸ್ಥಿತಿ ತಲುಪಿದೆ ನೋಡಿ.. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಇವರಿಗೆ ಪಾಠ ಮಾಡಲು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಬೇಕಾಗುತ್ತದೆ. ಆದರೆ, ಭದ್ರತಾ ಸಿಬ್ಬಂದಿ ಪೂರೈಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ಯಾವ ಮಾನದಂಡದ ಅನುಸಾರ ಶಿಕ್ಷಕರ ಸೇವೆ ಪೂರೈಸಲು ಗುತ್ತಿಗೆ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಶಿಕ್ಷಕರ ಸೇವೆ ಒದಗಿಸಲು  ಶಿಕ್ಷಣ ಕ್ಷೇತ್ರದ ಅರಿವು ಇರುವವರಿಗೆ ಮತ್ತು ನುರಿತ ಏಜೆನ್ಸಿರವರಿಗೆ ನೀಡಬೇಕು. ಅದರೆ ಶಿಕ್ಷಕ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಿರುವುದು ಬಿಬಿಎಂಪಿಯ ವಿಚಿತ್ರ ವೈಖರಿಯಾಗಿದೆ. ಈ ಬಗ್ಗೆ ಮೊದಲೇ ಪ್ರಶ್ನೆ ಮಾಡಿದ್ದಕ್ಕೆ ಶಿಕ್ಷಕರ ಸೇವೆ ಪೂರೈಸಲು ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ಇಷ್ಟು ದಿನ ಚುನಾವಣೆ ಕಾರ್ಯದಲ್ಲಿ ತೊಡಗಿ ಏಕಾಏಕಿ ಶಾಲೆ ಆರಂಭದ ಮುಂಚೆ ಎಚ್ಚೆತ್ತುಕೊಂಡು ತರಾತುರಿಯಲ್ಲಿ ಪುನಃ ಗುತ್ತಿಗೆ ಏಜೆನ್ಸಿಗೆ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾದ್ದಾರಿ ಎದ್ದು ಕಾಣುತ್ತದೆ. ಸೆಕ್ಯೂರಿಟಿ ಸಂಸ್ಥೆಗಳು ಶಿಕ್ಷಕರ ಅರ್ಹತೆ ಮತ್ತು ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವುದು ಮತ್ತು ನಡವಳಿಕೆ ಮಾಪನ ಮಾಡಲು ಸಾಧ್ಯ? ಈ ಹಿಂದೆ ರಾಜ್ಯ ಶಿಕ್ಷಣ ಇಲಾಖೆಯ ವತಿಯಿಂದ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದರು, ಆದರೆ ಅದು ನಡೆಯಲಿಲ್ಲ.

ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಪಡೆದು ಸರ್ಕಾರಿ ನೌಕರಿಗೆ ಆಯ್ಕೆಯಾದವನಿಗೆ ಓದು, ಬರಹವೇ ಬರೊಲ್ಲ!

ಸೆಕ್ಯೂರಿಟಿ ಏಜೆನ್ಸಿಗೂ ಶಿಕ್ಷಕರ ಸೇವಾ ಪೂರೈಕೆಗೆ  ಎತ್ತಣ  ಸಂಬಂಧ? ರಸ್ತೆ ಕಾಮಗಾರಿ ಮಾಡಲು ಮತ್ತು ಕ್ರೀಡಾ ಸಲಕರಣೆ ಸರಬರಾಜು ಮಾಡಲು ನಿರ್ದಿಷ್ಟ ಗುತ್ತಿಗೆದಾರರಿಗೆ ನೀಡುತ್ತಾರೆ. ಅದರೆ, ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲು ಯಾವ ಮಾನದಂಡ ಉಪಯೋಗಿಸಿದ್ದಾರೆ. ಈ ಹಿಂದೆ ಗುತ್ತಿಗೆ ಪಡೆದ ಕ್ರಿಸ್ಟಲ್ ಸಂಸ್ಥೆಯಲ್ಲಿರುವ ಶಿಕ್ಷಕರನ್ನ ಮುಂದು ವರಿಸಲು ಹೊಸದಾಗಿ ಗುತ್ತಿಗೆ ಪಡೆದ ಸೆಕ್ಯೂರಿಟಿ ಅರ್ಜಿ ಆಹ್ವಾನ ಮಾಡಿದ್ದಾರೆ. ಹೊಸ ಶಿಕ್ಷಕರನ್ನ ನೇಮಿಸಿಕೊಳ್ಳಲು ಸೆಕ್ಯೂರಿಟಿ ಏಜೆನ್ಸಿಗಳಿಗೆ ಶಿಕ್ಷಣ ಕ್ಷೇತ್ರ ಕುರಿತು ಅನುಭವವಿರಬೇಕು ಈ ಏಜೆನ್ಸಿಗಳಿಗೆ ಇದೆಯೇ ಎಂಬುದನ್ನೂ ನೋಡಿಲ್ಲ. ಇನ್ನು ಬಿಬಿಎಂಪಿಗೆ ಶಿಕ್ಷಕರ ಸೇವೆ ಪೂರೈಸುವ ಗುತ್ತಿಗೆ ಪಡೆದ ಸೆಕ್ಯೂರಿಟಿ ಸಂಸ್ಥೆಯಾದ ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿಮಿಟಿಡ್ ಮೈಸೂರು ನಗರದಲ್ಲಿ ಕಛೇರಿ ಹೊಂದಿದೆ. ಶಿಕ್ಷಕರು ಇಎಸ್ಐ ಮತ್ತು ಪಿಎಫ್ ಹಾಗೂ ಸಹಿ ಸೇರಿದಂತೆ ಇನ್ನಿತರೆ ಸಮಸ್ಯಾದಲ್ಲಿ ಮೈಸೂರಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೇ ಟೆಂಡರ್ ಕೊಟ್ಟ ಅಧಿಕಾರಿಯ ವಿರುದ್ಧ ಕ್ರಮವಾಗಬೇಕು ಎಂದು ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ಸೇವೆ ಪೂರೈಸುತ್ತಿರುವ ಸೆಕ್ಯೂರಿಟಿ ಏನೆಜ್ಸಿಗಳು:
1)ದಕ್ಷಿಣ ವಲಯ ಮತ್ತು ಆರ್.ಆರ್. ನಗರ ವಲಯ: ಅಪ್ಪು ಡಿಟೆಕ್ಟಿವ್ ಆಂಡ್ ಸೆಕ್ಯೂರಿಟಿ ಸರ್ವೀಸ್.
2)ಪೂರ್ವ ವಲಯ : ಡಿಟೆಕ್ಷವೆಲ್ ಅಂಡ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿ.
3)ಪಶ್ಚಿಮ ವಲಯ: ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟಿಡ್ ಎಂದು ಎಸ್. ಸುರೇಶ್ ಕುಮಾರ್ ನಮೂದಿಸಿದ್ದಾರೆ..

click me!