ಗ್ಯಾರೇಜ್​ ನಡೆಸುವ ಮೆಕಾನಿಕ್​ನ ಮಗಳು ಫಸ್ಟ್​ ರ‍್ಯಾಂಕ್

By Suvarna News  |  First Published Apr 29, 2022, 12:02 AM IST

* ಗ್ಯಾರೇಜ್​ ನಡೆಸುವ ಮೆಕಾನಿಕ್​ನ ಮಗಳು ಫಸ್ಟ್​ ರ‍್ಯಾಂಕ್
* ಬಾಗಲಕೋಟೆ ಗ್ಯಾರೇಜ್​ ಮೆಕಾನಿಕ್​ ರಫೀಕ್​ ಅವರ ಮಗಳು ರುಬೀನಾಳಿಂದ ಉತ್ತಮ ಸಾಧನೆ
* ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಯ ಎಕಾನಾಮಿಕ್ಸ್​ ವಿಷಯದಲ್ಲಿ ಫಸ್ಟ್ ರ‍್ಯಾಂಕ್
* ಪಿಎಚ್​ಡಿಗಾಗಿ ನೆರವು ಕೋರಿದ ಯುವತಿ


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ, (ಏ.28):
ಅದು ಬಡನತನದ ಕುಟುಂಬ, ಆತ ಗ್ಯಾರೇಜ್​ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದವ, ಬಡತನದ ಮಧ್ಯೆಯೂ ಬದುಕು ಸಾಗಿಸುತ್ತಾ ತನ್ನ ಮೂವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು.  ಇದರ ಪರಿಣಾಮವಾಗಿ ತಂದೆಯ ಸಂಕಷ್ಟದ ದಿನಗಳಲ್ಲಿಯೇ ಓದಿದ ಮಗಳು ರುಬಿನಾ ಇದೀಗ ಯುನಿವಸಿ೯ಟಿಯಲ್ಲಿ ಫಸ್ಟ್​ ರ‍್ಯಾಂಕ್​ ಪಡೆಯೋ ಮೂಲಕ ಸಾಧನೆ ಮಾಡಿದ್ದಾಳೆ. ಇವುಗಳ ಮಧ್ಯೆ ತನ್ನ ಮುಂದಿನ ಶಿಕ್ಷಣಕ್ಕಾಗಿ ಸರ್ಕಾರದಿಂದ ಸಹಾಯದ ನಿರೀಕ್ಷೆಯಲ್ಲಿದ್ದಾಳೆ. 

ಮೆಕಾನಿಕ್​ನ ಮಗಳು ಫಸ್ಟ್​ ರ‍್ಯಾಂಕ್

ಇತ್ತ ದಿನಬೆಳಗಾದ್ರೆ ಸಾಕು ಗ್ಯಾರೇಜ್​ನಲ್ಲಿ ಕೆಲ್ಸ ಮಾಡುತ್ತಾ ಬದುಕಿನ ಬಂಡಿ ನಡೆಸುವುದು, ಅತ್ತ ತಂದೆ ಬಡತನದ ಮಧ್ಯೆ ಓದಿಸಿದ ಪರಿಣಾಮ ಯುನಿವರ್ಸಿಟಿ ಫಸ್ಟ್​ ರ‍್ಯಾಂಕ್ ಪಡೆದಿರೋ ವಿದ್ಯಾರ್ಥಿನಿ, ಇವುಗಳ ಮಧ್ಯೆ ವಿದ್ಯಾರ್ಥಿನಿಯ ಮುಂದಿನ ವ್ಯಾಸಂಗಕ್ಕೆ ಸಹಾಯ ಮಾಡುವಂತೆ ಮನವಿ ಮಾಡುತ್ತಿರುವ ಸ್ಥಳೀಯರು. ಅಂದಹಾಗೆ ಇಂತಹವೊಂದು ಬಡತನದ ಮಧ್ಯೆ ವಿದ್ಯಾರ್ಥಿನಿ ಸಾಧನೆ ಮಾಡಿರುವುದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು. ನವನಗರದ ನಿವಾಸಿಯಾಗಿರುವ ರಫೀಕ್​ ಲೋಕಾಪೂರ ಅವರು ವೃತ್ತಿಯಿಂದ ಮೆಕಾನಿಕ್ ಆಗಿದ್ದು, ಬಡತನದ ಮಧ್ಯೆ ಜೀವನ ಕಳೆದವರು. ಇವುಗಳ ಮಧ್ಯೆ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ದುಡಿದಿದ್ದೆಲ್ಲಾ ಮಕ್ಕಳ ಓದಿಗಾಗಿ ಖರ್ಚು ಮಾಡುತ್ತಾ ಬಂದಿರುವ ರಫೀಕ್​ ಅವರು,   ತಾನು 7ನೇ ತರಗತಿವರೆಗೆ ಮಾತ್ರ ಓದಿದ್ದರೂ ಸಹ ಮಕ್ಕಳಿಗೆ ಮಾತ್ರ ಶಿಕ್ಷಣದಲ್ಲಿ ಕಡಿಮೆ ಆಗಬಾರದು ಅನ್ನೋ ಉದ್ದೇಶ ಹೊಂದಿದವರು. ಇದರ ಪರಿಣಾಮ ಎರಡನೇ ಮಗಳು ರುಬಿನಾ ನಿತ್ಯ ಕಷ್ಟಪಟ್ಟು ಓದಿ ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರದ ಅರ್ಥಶಾಸ್ತ್ರ  ವಿಭಾಗದಲ್ಲಿ ಫಸ್ಟ್​ ರ್ಯಾಂಕ್ ಪಡೆದುಕೊಂಡಿದ್ದಾಳೆ. ಇದೀಗ ಇಡೀ ಕುಟುಂಬ ಹೆಮ್ಮೆಪಡುವಂತಾಗಿದೆ.

Tap to resize

Latest Videos

undefined

ISRO Young Scientist ಕಾರ್ಯಕ್ರಮಕ್ಕೆ ಜಾರ್ಖಂಡ್‌ನ 10ನೇ ತರಗತಿ ವಿದ್ಯಾರ್ಥಿ ಆಯ್ಕೆ

ಬಡಜನರ ಸಹಾಯಕ್ಕೆ ನಿಲ್ಲಬೇಕೆಂಬ ಆಸೆ.
ಇನ್ನು ರ‍್ಯಾಂಕ್​ ಪಡೆದಿರುವ ರುಬಿನಾಳ ಓದಿನ ಹಂಬಲ ಮಾತ್ರ ಇನ್ನೂ ನಿಂತಿಲ್ಲ. ತಾನು ಬಡತನದಲ್ಲಿ ಓದಿ ಬಂದಂತೆ ಇನ್ನೂ ಸಾಕಷ್ಟು ಜನ ವಿದ್ಯಾರ್ಥಿಗಳು ಇರುತ್ತಾರೆ. ಅಂತವರನ್ನ ಗುರುತಿಸಿ ತಾನು ಸಹಾಯ ಮಾಡಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಶಯ ಹೊತ್ತಿದ್ದಾಳೆ. ಹೀಗಾಗಿ  ಹೇಗಾದರೂ ಮಾಡಿ ಇನ್ನಷ್ಟು ಓದಿ ಒಳ್ಳೆಯ ನೌಕರಿ ಪಡೆದುಕೊಳ್ಳಬೇಕು, ಸಮಾಜದಲ್ಲಿ ಬಡವರ್ಗದ ಜನರಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂಬ ಕನಸು ಹೊತ್ತವಳು. ಈ ಮಧ್ಯೆ ರುಬಿನಾಳಿಗೆ ಇದೀಗ ಕೋಚಿಂಗ್ ಪಡೆದು ಐಎಎಸ್​ ಪರೀಕ್ಷೆ ಬರೆಯಬೇಕು ಮತ್ತು ಪಿಎಚ್​ಡಿ ಮಾಡಬೇಕೆಂಬ ಹಂಬಲವಿದ್ದು, ಹೀಗಾಗಿ ಸರ್ಕಾರ ಉಚಿತ ಕೋಚಿಂಗ್ ಸೇರಿದಂತೆ ಮುಂದಿನ ಶಿಕ್ಷಣಕ್ಕೆ ನೆರವಿಗೆ ಬರಲಿ ಎನ್ನುವ ಆಶಯವನ್ನ ರುಬಿನಾ ವ್ಯಕ್ತಪಡಿಸಿದ್ದಾಳೆ. 

ಕಷ್ಟ ತನಗಿದ್ದರೂ ಮಕ್ಕಳ ಶಿಕ್ಷಣ ಕೊರತೆ ಮಾಡದ ತಂದೆ ರಫೀಕ್​

ಇನ್ನು ತಂದೆ ರಫೀಕ್​ ಅವರು ಕಳೆದ ಹಲವು ವರ್ಷಗಳ ಹಿಂದೆ ರಸ್ತೆಯ ಪಕ್ಕದಲ್ಲಿಯೇ ಮೆಕಾನಿಕ್​ ಕೆಲ್ಸ ಮಾಡುತ್ತಾ ಬಡತನದಲ್ಲಿಯೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಾ ಬಂದವರು. ತಮಗಾಗಿ ಏನನ್ನು ಮಾಡದೇ ನಿತ್ಯ ದುಡಿಯೋದ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಎಂಬಂತೆ ಮಕ್ಕಳ ಶಿಕ್ಷಣವೇ ರಫೀಕ್​ ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ಯಾರೇ ಏನೇ ಅಂದರೂ ತಮ್ಮ ಹೆಣ್ಣು ಮಕ್ಕಳಿಗೆ ಓದಿಸುವುದನ್ನು ಮಾತ್ರ ಬಿಡಲಿಲ್ಲ. ಇವುಗಳ ಮಧ್ಯೆ ತನ್ನ ಉದ್ಯೋಗದ ಮಧ್ಯೆಯೂ ಬೆಳಿಗ್ಗೆ 4 ಗಂಟೆಗೆ ಎದ್ದು ಮಕ್ಕಳನ್ನು ಎಬ್ಬಿಸಿ ನಿತ್ಯ ಓದಲು ಪ್ರೇರಿಪಿಸುತ್ತಾ ಬರ್ತಿದ್ದರು. ಇದರ ಪರಿಣಾಮ ಇಂದು ಮೂವರು ಹೆಣ್ಣು ಮಕ್ಕಳ ಪೈಕಿ ರುಬಿನಾ ಎಂಎ ಪದವಿ ಪಡೆದರೆ,  ಓರ್ವಳು ಬಿಎಸ್ಸಿ ಬಿಎಡ್​, ಮತ್ತೋರ್ವಳು ಬಿಎ ಬಿಎಡ್​ ಕಲಿತಿದ್ದು, ಇನ್ನೋರ್ವ ಮಗ ಡಿಪ್ಲೋಮಾ ಕಲಿತಿದ್ದಾನೆ.

ಹೀಗೆ ತಾವು ಬಡತನದಲ್ಲಿ ಬಂದರೂ ಸಹ ಮಕ್ಕಳಿಗಾಗಿ ನಿತ್ಯ ದುಡಿದು ಅವರಿಗೆ ಸಾರ್ಥಕ ಬದುಕಿನ ಶಿಕ್ಷಣವನ್ನ ರಫೀಕ್ ನೀಡಿಸಿದ್ದಾರೆ. ಇದರ ಪರಿಣಾಮ ಇಂದು ಮಕ್ಕಳು ವಿದ್ಯಾವಂತರಾಗಿದ್ದು, ಇನ್ನು ಯುನಿರ್ಸಿಟಿಗೆ ರ್ಯಾಂಕ್ ಪಡೆದ ಮಗಳು ಇದೀಗ ಐಎಎಸ್​ , ಪಿಎಚ್​ಡಿ ಕಲಿಕೆ ಮಾಡಬೇಕೆಂಬ ಆಶಯ ಹೊತ್ತಿದ್ದು, ಇದಕ್ಕೆ ಸರ್ಕಾರ ಉಚಿತ ಕೋಚಿಂಗ್ ಸೇರಿದಂತೆ ನೆರವಿಗೆ ಬಂದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಅನ್ನೋ ಆಶಯವನ್ನ ರಫೀಕ್ ವ್ಯಕ್ತಪಡಿಸಿದ್ದರೆ ಇತ್ತ  ಸ್ಥಳೀಯರು ಸಹ ರಫೀಕ್​ ಅವರ ಮಗಳು ರುಬಿನಾ ಸಾಧನೆ ಕಂಡು ಹೆಮ್ಮೆ ಪಟ್ಟು ಈ ವಿದ್ಯಾರ್ಥಿನಿಗೆ ಸರ್ಕಾರ ನೆರವು ನೀಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಡತನದಲ್ಲಿ ಬೆಳೆದು ಬಂದ ವಿದ್ಯಾರ್ಥಿನಿಯೋರ್ವಳು ಇದೀಗ ಅಥ೯ಶಾಸ್ತ್ರ ವಿಷಯದಲ್ಲಿ ಯುನಿವರ್ಸಿಟಿಗೆ ಫಸ್ಟ್​ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದು, ಈ ವಿದ್ಯಾರ್ಥಿನಿಗೆ ಸರ್ಕಾರ ನೆರವು ನೀಡಿ ಆಕೆಯ ಸಾಧನೆಗೆ ಪ್ರೇರಣೆಯಾಗಲಿ ಅನ್ನೋದೆ ಎಲ್ಲರ ಆಶಯ..

click me!