ಬೆಳಗಾವಿ: ಖಾಸಗಿ ನರ್ಸರಿಗಳಿಗೆ ಅಂಗನವಾಡಿಗಳ ಸಡ್ಡು

By Kannadaprabha News  |  First Published Dec 11, 2022, 7:00 PM IST

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನರೇಗಾ ಹಾಗೂ ನಾನಾ ಯೋಜನೆಗಳ ಅನುದಾನಗಳನ್ನು ಬಳಸಿ ಸರ್ಕಾರಿ ಅಂಗನವಾಡಿಗಳ ಅಂದ ಹೆಚ್ಚಿಸಲಾಗುತ್ತಿದೆ. 


ರವಿ ಕಾಂಬಳೆ

ಹುಕ್ಕೇರಿ(ಡಿ.11): ಮಕ್ಕಳ ಬಾಲ್ಯಾವಸ್ಥೆಯಲ್ಲಿನ ಶಿಕ್ಷಣದ ಅಡಿಪಾಯ ಎನಿಸಿರುವ ಅಂಗನವಾಡಿಗಳ ಶ್ರೇಯೋಭಿವೃದ್ಧಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇದಕ್ಕೆ ಪೂರಕವಾಗಿ ಹುಕ್ಕೇರಿ ತಾಲೂಕಿನಲ್ಲಿ ನರೇಗಾ ಹಾಗೂ ನಾನಾ ಯೋಜನೆಗಳ ಅನುದಾನಗಳನ್ನು ಬಳಸಿ ಸರ್ಕಾರಿ ಅಂಗನವಾಡಿಗಳ ಅಂದ ಹೆಚ್ಚಿಸಲಾಗುತ್ತಿದೆ. ಅಗತ್ಯ ಸೌಕರ್ಯಗಳನ್ನು ಹೊಂದಿರುವ ಖಾಸಗಿ ಯುಕೆಜಿ, ಎಲ್‌ಕೆಜಿ ಹಾಗೂ ನರ್ಸರಿಗಳಿಗೆ ಸಡ್ಡು ಹೊಡೆಯುವಂತೆ ಸರ್ಕಾರಿ ಅಂಗನವಾಡಿಗಳನ್ನು ರೂಪಿಸುವ ಕಾರ್ಯ ಭರದಿಂದ ಸಾಗಿದೆ.

Tap to resize

Latest Videos

ಹೆಚ್ಚುವರಿ ಅಂಗನವಾಡಿ ಸ್ಥಾಪನೆಗೆ ಅನುಮೋದನೆ:

ತಾಲೂಕಿನಲ್ಲಿ ಈಗಾಗಲೇ 472 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದ್ದು ಹೆಚ್ಚುವರಿಯಾಗಿ 6 ಹೊಸ ಅಂಗನವಾಡಿ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಮೂಲಕ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಅನುಮೋದನೆ ನೀಡಿದೆ. ಇದೇ ತಿಂಗಳೊಳಗಾಗಿ ತಾಲೂಕಿನ 6 ಕಡೆಗಳಲ್ಲಿ ಹೊಸ ಅಂಗನವಾಡಿಗಳು ಕಾರ್ಯಾರಂಭ ಮಾಡಲಿವೆ.
ತಾಲೂಕು ಬೆಳೆದಂತೆ ಜನಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಅಂಗನವಾಡಿ ಸ್ಥಾಪನೆಗೆ ಒತ್ತಾಯ, ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದವು. ಹಾಗಾಗಿ ಹುಕ್ಕೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಟಬಾಗಿಯ ಲಕ್ಷ್ಮೀನಗರ, ದಾಸರಟ್ಟಿ, ಹುನ್ನೂರ ಆರ್‌ಸಿ, ಅಂಕಲಗುಡಿಕ್ಷೇತ್ರ ಮತ್ತು ಯಮಕನಮರಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಭರಮಾಪುರ, ಬೊಳಶ್ಯಾನಟ್ಟಿಯಲ್ಲಿ ಹೊಸ ಅಂಗನವಾಡಿಗಳು ಆರಂಭವಾಗಲಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಪರಸನ್ನವರ ಮಾಹಿತಿ ನೀಡಿದರು.

Shivamogga: ಅಂಗನವಾಡಿ ಕಾರ್ಯಕರ್ತೆಯರ ಸೇವೆ ಮಹತ್ವದ್ದು: ಬಿಎಸ್‌ವೈ

ಸ್ವಂತ ಕಟ್ಟಡ ಅವಶ್ಯಕತೆ:

ಹುಕ್ಕೇರಿ ತಾಲೂಕಿನಲ್ಲಿರುವ 472 ಅಂಗನವಾಡಿಗಳಲ್ಲಿ 320 ಸ್ವಂತ ಕಟ್ಟಡ, 120 ಬಾಡಿಗೆ ಕಟ್ಟಡ, 32 ಅಂಗನವಾಡಿಗಳು ಪಂಚಾಯಿತಿ ಕಟ್ಟಡ, ಯುವಕ, ಮಹಿಳಾ ಮಂಡಳದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಬಾರ್ಡ್‌ನ ಆರ್‌ಐಡಿಎಫ್‌, ಗ್ರಾಪಂ, ತಾಪಂ, ಸೇರಿ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳ ಅನುದಾನದಡಿ ಕಟ್ಟಡ ನಿರ್ಮಾಣ, ಅಂಗನವಾಡಿಗಳ ಅಭಿವೃದ್ಧಿ, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ.
ಗ್ರಾಮೀಣ ಭಾಗದ ಜನರಿಗೆ ವರವಾಗಿರುವ ನರೇಗಾ ಯೋಜನೆ ಮಕ್ಕಳ ಶಿಕ್ಷಣಕ್ಕೂ ಕೈಜೋಡಿಸಿದೆ. ತಾಲೂಕಿನಲ್ಲಿ ಕಳೆದ ಮತ್ತು ಪ್ರಸಕ್ತ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಸಹಭಾಗಿತ್ವದಡಿ ಅಗತ್ಯ ಕಟ್ಟಡಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಅದರಂತೆ ಗ್ರಾಮೀಣ ಜನರಲ್ಲಿ ಭರವಸೆಯಾಗಿರುವ ನರೇಗಾ ಯೋಜನೆಯು ಅಂಗನವಾಡಿಗಳನ್ನು ನಿರ್ಮಿಸಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೂ ಅಡಿಪಾಯವಾಗಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಜಿಪಂ, ತಾಪಂ, ಗ್ರಾಪಂನ ವಿವಿಧ ಅನುದಾನದಡಿ ಮಕ್ಕಳಿಗೆ ಅಗತ್ಯವಿರುವ ಆಟಿಕೆ ಸಾಮಗ್ರಿ ಖರೀದಿಸಿ ಮಕ್ಕಳ ಸ್ನೇಹಿ ಅಂಗನವಾಡಿ ನಿರ್ಮಿಸಲಾಗುತ್ತಿದೆ. ಎಲ್ಲ ಅಂಗನವಾಡಿಗಳಿಗೆ ಸೂಕ್ತ ಕಟ್ಟಡ, ಕಂಪೌಂಡ್‌ ನಿರ್ಮಿಸಲು ಶ್ರಮಿಸಲಾಗುತ್ತಿದೆ ಅಂತ ಹುಕ್ಕೇರಿ ತಾಪಂ ಇಒ ಉಮೇಶ ಸಿದ್ನಾಳ ತಿಳಿಸಿದ್ದಾರೆ. 

ಹೆಚ್ಚುವರಿ ಅಂಗನವಾಡಿ ಮಂಜೂರಾತಿ ಕೋರಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗೆ ನಿವೇಶನ ಒದಗಿಸುವಂತೆ ಪುರಸಭೆ, ತಾಪಂ, ಗ್ರಾಪಂಗೆ ಪತ್ರ ಬರೆಯಲಾಗಿದ ಅಂತ ಹುಕ್ಕೇರಿ ಸಿಡಿಪಿಒ ಮಂಜುನಾಥ ಪರಸನ್ನವರ ಹೇಳಿದ್ದಾರೆ. 
 

click me!