ಆಘಾತ ತಂದ ಪಿ.ಯು ಫಲಿತಾಂಶ, ಚಿತ್ರದುರ್ಗದಲ್ಲಿ ಆತ್ಮಾವಲೋಕನ ಸಭೆ

By Suvarna News  |  First Published Jun 23, 2022, 8:03 PM IST
  • ಫಲಿತಾಂಶ ಸುಧಾರಣೆಗೆ ಚಿಂತನ ಮಂಥನ ಸಭೆ
  • ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪೂರಕ ಬೋಧನೆ
  • ಜಿಲ್ಲೆಯ ಪಿ.ಯು. ಫಲಿತಾಂಶ ಆಘಾತ ತಂದಿದೆ ಎಂದ ವಿಧಾನ ಪರಿಷತ್ ಶಾಸಕ 
     

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂನ್.22): ಪ್ರಸಕ್ತ ವರ್ಷದ ದ್ವೀತಿಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಶೈಕ್ಷಣಿಕ ಸಾಧನೆ ಕುಸಿತದ ಬಗ್ಗೆ ಗುರುವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ನೇತೃತ್ವದಲ್ಲಿ ಪಿ.ಯು. ಕಾಲೇಜು ಪ್ರಾಂಶುಪಾಲರ ಆತ್ಮಾವಲೋಕ ಸಭೆ ಜರುಗಿತು. ಸಭೆಯಲ್ಲಿ ಮುಂದಿನ ವರ್ಷದ ಪಿ.ಯು. ಫಲಿತಾಂಶ ಸುಧಾರಣೆ ಮಾರ್ಗೋಪಾಯಗಳ ಕುರಿತು ಚಿಂತನ ಮಂಥನ ಜರುಗಿತು.

Tap to resize

Latest Videos

ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಸ್.ನವೀನ್ ಜಿಲ್ಲೆಯ ಪಿ.ಯು. ಫಲಿತಾಂಶ ಆಘಾತ ತಂದಿದೆ. ಮಕ್ಕಳ ಶೈಕ್ಷಣಿಕ ಸಾಧನೆ ಕಳಪೆಯಾಗಿರುವುದಕ್ಕೆ ಬೋಧಕರು ಮಾತ್ರವಲ್ಲ, ಪೋಷಕರು,ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಜವಬ್ದಾರಿ ಹೊರಬೇಕಿದೆ. ಇದರ ಜೊತೆಗೆ ಫಲಿತಾಂಶ ಸುಧಾರಣೆ ಕ್ರಮಗಳನ್ನು ಸಹ ಕೈಗೊಳ್ಳಬೇಕು. ಪಿ.ಯು. ಹಂತದ ಮಕ್ಕಳಿಗೆ ಕಠಿಣ ಎನಿಸುವ ವಿಷಯಗಳ ಕುರಿತು ವಿಶೇಷವಾಗಿ ಆನ್‌ಲೈನ್ ಮೂಲಕ ಪೂರಕ ಬೋಧನೆಗೆ ಕ್ರಮ ವಹಿಸಲಾಗಿದೆ. ವಿಶ್ವದ ಶ್ರೇಷ್ಠ ಆನ್‌ಲೈನ್ ಬೋಧನಾ ಸಂಸ್ಥೆ ಆಂಥಾಲಜಿ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆಗೆ ಅಡ್ಮಿಶನ್ ಆಗಿರುವ ಟಾಪ್ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ತರಗತಿ ಕೊಠಡಿ!

ಸದ್ಯ ಕೋವಿಡ್ ಭಯವಿಲ್ಲ. ಪೋಷಕರು ಹಾಗೂ ವಿಧ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು. ಪಿ.ಯು. ಕಾಲೇಜುಗಳಲ್ಲಿ ಕೊಠಡಿ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಖನಿಜ ಪ್ರತಿಷ್ಠಾನ, ಹಾಗೂ ಸಾಂಸ್ಥಿಕ ಹೊಣೆಗಾರಿಕೆ ನಿಧಿಯಡಿ ಕಲ್ಪಿಸಲಾಗುವುದು. ಪಿ.ಯು. ಫಲಿತಾಂಶ ಸುಧಾರಣೆಯ ಮೇಲು ವಿಚಾರಣೆಗೆ ತಜ್ಞರ ತಂಡ ರಚಿಸಲಾಗುವುದು. ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಸರ್ಕಾರಿ ಕಾಲೇಜುಗಳ ಫಲಿತಾಂಶ ಕಡಿಮೆಯಾದರೆ ಖಾಸಗಿ ಕಾಲೇಜುಗಳು ಇದರ ಲಾಭ ಪಡೆದುಕೊಳ್ಳುತ್ತವೆ ಎಂದರು.

ಕಾಲೇಜು ದತ್ತು ನೀಡಲು ಚಿಂತನೆ : ಸರ್ಕಾರಿ ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಆಸಕ್ತ ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಶಿಕ್ಷಣ ಸಚಿವರ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗುವುದು. ಜಿಲ್ಲೆಯಲ್ಲೂ ಈ ರೀತಿ ದತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು.

ವೈಜ್ಞಾನಿಕ ಸಂಗ್ರಹಾಲಯ ಸ್ಥಾಪನೆ : ಇಸ್ರೋ, ಡಿ.ಆರ್.ಡಿ.ಓ ಹಾಗೂ ಬಾಬಾ ಅಣು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ಔದ್ಯಮಿಕ ಮತ್ತು ತಾಂತ್ರಿಕ ವಸ್ತು ಸಂಗ್ರಾಹಲಯ ಮಾದರಿಯಲ್ಲಿ, ಚಿತ್ರದುರ್ಗ ಜಿಲ್ಲೆಯಲ್ಲಿ ವೈಜ್ಞಾನಿಕ ಸಂಗ್ರಹಾಲಯ ಹಾಗೂ ಪ್ರಯೋಗಾಲಯವನ್ನು ಸ್ಥಾಪನೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾಡಳಿತ 400 ಎಕರೆ ಭೂಮಿ ಗುರುತಿಸಿದೆ. ಇದರಿಂದ ಮಕ್ಕಳು ವಿಜ್ಞಾನದ ಪರಿಕಲ್ಪನೆಗಳನ್ನು ಪ್ರಯೋಗದ ಮೂಲಕ ತಿಳಿದುಕೊಳ್ಳಬಹುದು. ಮಕ್ಕಳಲ್ಲಿ ವಿಜ್ಞಾನ ವಿಷಯದ ಕುರಿತು ಆಸಕ್ತಿ ಹಾಗೂ ಕುತೂಹಲ ಮೂಡುವುದು. ಪಿ.ಯು. ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಿಲಿದೆ ಎಂದು ಶಾಸಕ ಕೆ.ಎಸ್.ನವೀನ್ ಅಭಿಪ್ರಾಯ ಪಟ್ಟರು.

ಹಾವೇರಿ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನುಂಗಿದ ಸಿಬ್ಬಂದಿ..!

ಕ್ರಿಯಾ ಯೋಜನೆ ಸಲ್ಲಿಕೆಗೆ ಸೂಚನೆ : ನರೇಗಾದಡಿ ಪ್ರಾಥಮಿಕ, ಪ್ರೌಢಶಾಲೆಗಳ ಜೊತೆ ಗ್ರಾಮೀಣ ಭಾಗದಲ್ಲಿ ಪಿ.ಯು. ಕಾಲೇಜುಗಳ ಕೊಠಡಿ , ಆಟದ ಮೈದಾನ, ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶವಿದೆ. ಸಂಬಂಧ ಪಟ್ಟ ಕಾಲೇಜುಗಳ ಪ್ರಾಂಶುಪಾಲರು ಅಗತ್ಯ ಕ್ರಿಯಾ ಯೋಜನೆಗಳನ್ನು ಸಲ್ಲಿಸಿದರೆ ಮಂಜೂರಾತಿ ನೀಡಲಾಗುವುದು ಎಂದು ಜಿ.ಪಂ.ಸಿಇಓ ಡಾ.ಕೆ.ನಂದಿನಿದೇವಿ ಸಭೆಯಲ್ಲಿ ಹೇಳಿದರು.

ಪಿ.ಯು.ಬೋಧಕರಿಗೆ ವಿಶೇಷ ತರಬೇತಿ ನೀಡಲಾಗುವುದು. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಬೋಧನೆಗೆ ಅನುಕೂಲವಾಗುವಂತೆ ಟ್ಯೂಟರ್‌ಗಳನ್ನು ನೇಮಿಸಲಾಗುವುದು. ಪಿ.ಯು. ಕಾಲೇಜುಗಳಲ್ಲಿ ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಸೇರಿದಂತೆ ಇತರೆ ಅವಶ್ಯಕತೆಗಳ ಪೂರೈಕಗೆ ಸಹ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದರು. ಪಿ.ಯು. ಫಲಿತಾಂಶ ಸುಧಾರಣೆಗೆ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳು ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜಪ್ಪ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧನಾ ಕೊಠಡಿ, ಪ್ರಯೋಗಾಲಯ, ಶೌಚಾಲಯಗಳ ಕೊರತೆಯಿದೆ. ಪ್ರತಿ ವಿಭಾಗಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 

ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಈ ಸಂಖ್ಯೆ 60 ಮೀರಬಾರದು. ಪ್ರೌಢಶಾಲೆಯೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳಲ್ಲಿ ಸಮಯದ ಹೊಂದಾಣಿಕೆ ಸಮಸ್ಯೆಯಿದೆ. ವಿಷಯ ಉಪನ್ಯಾಸಕರ ಕೊರತೆಯಿದೆ. ಉಪನ್ಯಾಸಕರು ಎರಡು ಮೂರು ಕಾಲೇಜುಗಳಲ್ಲಿ ಡೆಪ್ಯುಟೇಷನ್ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಅಂಶಗಳು ದ್ವೀತಿಯ ಪಿ.ಯು. ಫಲಿತಾಂಶ ಕುಂಠಿತಕ್ಕೆ ಕಾರಣವಾಗುತ್ತವೆ. ಖಾಸಗಿ ಕಾಲೇಜುಗಳಂತೆ ಸರ್ಕಾರಿ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನಡೆಸಬೇಕು ಎಂದರು.

click me!