ಆ. 23ರಿಂದ ಹೊಸ ಶಿಕ್ಷಣ ನೀತಿ ಅಡಿ ಅಡ್ಮಿಷನ್‌: ಅಶ್ವತ್ಥ ನಾರಾಯಣ

By Kannadaprabha News  |  First Published Aug 19, 2021, 8:44 AM IST

*  ಪ್ರವೇಶ ಪ್ರಕ್ರಿಯೆಗೆ ಬೊಮ್ಮಾಯಿ, ಕೇಂದ್ರ ಸಚಿವ ಪ್ರಧಾನ್‌ ಚಾಲನೆ
*  ಹೊಸ ಶಿಕ್ಷಣ ನೀತಿಯಲ್ಲಿ ಬಹುಆಯ್ಕೆಯ ಕಲಿಕೆಗೆ ವಿಪುಲ ಅವಕಾಶ
*  ವಿದ್ಯಾರ್ಥಿಗಳು ಇಚ್ಛೆಯ ವಿಷಯವನ್ನು ವ್ಯಾಸಂಗ ಮಾಡಬಹುದು
 


ಬೆಂಗಳೂರು(ಆ.19): ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣ ಕಲಿಕೆಗೆ ಆ.23ರಿಂದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತ ಜಯಂತಿ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘-2020 ಅನುಷ್ಠಾನ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಹೊಸ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿ ಆದೇಶ ಮಾಡಲಾಗಿದೆ. ಅದರಡಿಯೇ ಈ ಬಾರಿ ಪ್ರವೇಶ ಪ್ರಕ್ರಿಯೆಗಳೂ ನಡೆಯಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆಯೇ ಹೊರತು ಇದನ್ನು ಬಿಟ್ಟು ಬೇರಾವುದೇ ಅಜೆಂಡಾ ಇಲ್ಲ. ಹೊಸ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೆ ಅಥವಾ ಸರಿಯಾಗಿ ಗ್ರಹಿಸದೆ ಟೀಕೆ ಮಾಡುವುದು, ವಿರೋಧ ಮಾಡುವುದು ಸರಿಯಲ್ಲ. ಈ ನೀತಿ ವಿರೋಧಿಸುವುದು ದೇಶದ ಅಭಿವೃದ್ಧಿ ವಿರೋಧಿಸುವುದು ಎರಡೂ ಒಂದೇ ಎಂದು ಅಭಿಪ್ರಾಯಪಟ್ಟರು.

Latest Videos

undefined

2022-23ರಿಂದ ಕನ್ನಡದಲ್ಲಿ ವೃತ್ತಿ ಶಿಕ್ಷಣ: ಡಿಸಿಎಂ ಅಶ್ವತ್ಥನಾರಾಯಣ

ನಮ್ಮ ದೇಶದ ಜನಸಂಖ್ಯೆ ಈಗ 130 ಕೋಟಿ ಮೀರುತ್ತಿದೆ. ಅದೇ ಪ್ರಮಾಣದಲ್ಲಿ ಸವಾಲುಗಳು, ಅಗತ್ಯಗಳು ಹೆಚ್ಚುತ್ತಿವೆ. ಇವೆಲ್ಲವನ್ನೂ ಎದುರಿಸಿ ಗೆಲ್ಲಬೇಕಾದರೆ ನಮಗೆ ಎದುರಿಗಿರುವ ಏಕೈಕ ಸಾಧನವೆಂದರೆ ಶಿಕ್ಷಣ ಮಾತ್ರ ಎಂದು ಪ್ರತಿಪಾದಿಸಿದ ಸಚಿವರು, ಹೊಸ ಶಿಕ್ಷಣ ನೀತಿಯಲ್ಲಿ ಬಹು ಆಯ್ಕೆಯ ಕಲಿಕೆಗೆ ವಿಪುಲ ಅವಕಾಶವಿದ್ದು ಇಚ್ಛೆಯ ವಿಷಯವನ್ನು ಕಲಿಯಬಹುದು. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಇತರೆ ಯಾವುದೇ ಕ್ಷೇತ್ರವೇ ಇರಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಆಮೂಲಾಗ್ರ ಮತ್ತು ರಚನಾತ್ಮಕ ಪ್ರಗತಿ ಸಾಧಿಸಬೇಕಿದ್ದರೆ ಶಿಕ್ಷಣಕ್ಕೆ ಒತ್ತು ನೀಡಲೇಬೇಕು. ಈ ನಿಟ್ಟಿನಲ್ಲಿ ಜರ್ಮನಿ, ದಕ್ಷಿಣ ಕೊರಿಯಾ, ಜಪಾನ್‌ ನಂಥ ಚಿಕ್ಕ ಚಿಕ್ಕ ದೇಶಗಳು ಅದ್ಭುತಗಳನ್ನೇ ಸೃಷ್ಟಿಮಾಡಿವೆ ಎಂದು ಸಚಿವರು ಹೇಳಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಡಿ.ಕುಮುದಾ, ಕ್ರಿಸ್ತ ಜಯಂತಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್‌ ಡಾ.ಅಗಸ್ಟೀನ್‌ ಜಾಜ್‌ರ್‍ ಮಾತನಾಡಿದರು. ಬೆಂಗಳೂರು ಉತ್ತರ ವಿವಿ ಕುಲಸಚಿವ ಡಾ.ವಿ.ವೆಂಕಟೇಶ ಮೂರ್ತಿ, ಕ್ರಿಸ್ತ ಜಯಂತಿ ಕಾಲೇಜಿನ ಡೀನ್‌ ಡಾ.ಜೆ.ಅಲೋಶಿಯಸ್‌ ಎಡ್ವರ್ಡ್‌ ಉಪಸ್ಥಿತರಿದ್ದರು.
 

click me!