ಖಾಸಗಿ ಅಭ್ಯರ್ಥಿಗಳಿಗೆ ಪಿಯು ಪರೀಕ್ಷೆ ಇಂದಿನಿಂದ ಆರಂಭ

By Kannadaprabha News  |  First Published Aug 19, 2021, 7:50 AM IST

*  18 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿ ನಿರೀಕ್ಷೆ
*  ಫಲಿತಾಂಶ ತಿರಸ್ಕರಿಸಿದ್ದ 950 ಮಕ್ಕಳು ಕೂಡ ಪರೀಕ್ಷೆಗೆ
*  ಸುಸೂತ್ರವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಕ್ರಮ 
 


ಬೆಂಗಳೂರು(ಆ.19):  ರಾಜ್ಯದಲ್ಲಿ ಇಂದಿನಿಂದ (ಆ.19) ಸೆ.3ರವರೆಗೆ ಖಾಸಗಿ ಅಭ್ಯರ್ಥಿಗಳಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು 187 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌- ಏಪ್ರಿಲ್‌ನಲ್ಲಿ ನಡೆಯಬೇಕಿದ್ದ 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಿ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಫಲಿತಾಂಶದ ಆಧಾರದ ಮೇಲೆ ದ್ವಿತೀಯ ಪಿಯು ಫಲಿತಾಂಶ ಲೆಕ್ಕಾಚಾರ ಮಾಡಿ ಪ್ರಕಟಿಸಲಾಗಿತ್ತು. ಜತೆಗೆ ಯಾರನ್ನೂ ಫೇಲ್‌ ಮಾಡದೆ ಉತ್ತೀರ್ಣಗೊಳಿಸಲಾಗಿತ್ತು. ಆದರೆ, ಈ ಅವಕಾಶದಿಂದ ಖಾಸಗಿ ಅಭ್ಯರ್ಥಿಗಳನ್ನು ಮಾತ್ರ ಹೊರಗಿಡಲಾಗಿತ್ತು. ಅವರಿಗೆ ಮುಂದೆ ಪರೀಕ್ಷೆ ನಡೆಸುವುದಾಗಿ ಇಲಾಖೆ ಹೇಳಿತ್ತು. ಅದರಂತೆ 17,469 ಖಾಸಗಿ ಅಭ್ಯರ್ಥಿಗಳ ಜತೆಗೆ, ಇತ್ತೀಚೆಗೆ ಪ್ರಕಟಿಸಿದ ಪಿಯು ಫಲಿತಾಂಶ ತೃಪ್ತಿಕರವಾಗಿಲ್ಲ ಎಂದು ರದ್ದುಪಡಿಸಿಕೊಂಡಿರುವ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 352 ಪುನರಾವರ್ತಿತ ಅಭ್ಯರ್ಥಿಗಳಿಗೆ ಈಗ ಪರೀಕ್ಷೆ ನಡೆಸಲಾಗುತ್ತಿದೆ.

Tap to resize

Latest Videos

PUC ವಿದ್ಯಾರ್ಥಿಗಳಿಗೆ KSRTC ಬಂಪರ್ ಆಫರ್

ಕೋವಿಡ್‌ ನಿಯಮ ಪಾಲನೆ:

ಪರೀಕ್ಷೆಗೆ ಮುನ್ನ ಹಾಗೂ ನಂತರ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೇಂದ್ರ ಪ್ರವೇಶಿಸುವ ಮುನ್ನ ಅವರೆಲ್ಲರಿಗೂ ಕೈಗೆ ಸ್ಯಾನಿಟೈಸ್‌ ನೀಡುವ ವ್ಯವಸ್ಥೆ ಮಾಡಲಾಗಿದೆ. ಒಂದು ಡೆಸ್ಕ್‌ನಲ್ಲಿ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ ಗರಿಷ್ಠ 10 ವಿದ್ಯಾರ್ಥಿಗಳಿಗೆ ಮಾತ್ರ ಕೂರಲು ಅವಕಾಶವಿರುತ್ತದೆ.

ಕೋವಿಡ್‌ ಲಕ್ಷಣಗಳಿರುವ ಮಕ್ಕಳು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ. ಕೋವಿಡ್‌ ಸೋಂಕು ದೃಢಪಟ್ಟವರಿಗೆ ಪರೀಕ್ಷೆ ಬರೆಯಲು ನಿಗಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಆದರೆ, ಇದುವರೆಗೆ ಯಾವುದೇ ಮಕ್ಕಳಿಂದ ಅಂತಹ ಮಾಹಿತಿ ಬಂದಿಲ್ಲ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿ ತರಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್‌ ಹೇಳಿದ್ದಾರೆ.

ಸುಸೂತ್ರವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುವುದು. 2020-21ನೇ ಸಾಲಿನ ವಾರ್ಷಿಕ ಪರೀಕ್ಷೆ ರದ್ದಾಗಿದ್ದರಿಂದ ಪ್ರಸ್ತುತ ನಡೆಸುತ್ತಿರುವ ಪರೀಕ್ಷೆಯನ್ನು ಪೂರಕ ಪರೀಕ್ಷೆ ಎಂದು ಪರಿಗಣಿಸದೆ ವಾರ್ಷಿಕ ಪರೀಕ್ಷೆ ಎಂದೇ ಪರಿಗಣಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್‌ ತಿಳಿಸಿದ್ದಾರೆ.  
 

click me!