ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಉಡುಪಿ ಸರ್ಕಾರಿ ಕಾಲೇಜಲ್ಲಿ ಅಡ್ಮಿಷನ್ ಹೆಚ್ಚಳ

By Girish GoudarFirst Published Jun 5, 2022, 11:27 AM IST
Highlights

*  ಹಿಜಾಬ್ ವಿವಾದದಿಂದ ಗಮನಸೆಳೆದಿದ್ದ ಸ.ಪ.ಪೂ  ಹೆಮ್ಮಕ್ಕಳ ಕಾಲೇಜು
*  ಪ್ರಥಮ ಪಿಯುಸಿ ಅಡ್ಮಿಷನ್ ನಲ್ಲಿ ಗಣನೀಯ ಹೆಚ್ಚಳ
*  ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯವೇ ಮೆಚ್ಚುವಂತ ಸಾಧನೆ 
 

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಜೂ.05):  ಹಿಜಾಬ್  ಹೋರಾಟದ ಮೂಲಕ ವಿಶ್ವದ ಗಮನ ಸೆಳೆದಿದ್ದ ಉಡುಪಿಯ ಸರಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜು ಸದ್ದಿಲ್ಲದೆ ಸಾಧನೆ ಮಾಡಿದೆ. ಕಳೆದ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯವೇ ಮೆಚ್ಚುವ ದಾಖಲೆ ಬರೆದಿದ್ದು, ನೂತನ ಶೈಕ್ಷಣಿಕ ವರ್ಷದ ಪಿಯುಸಿ ಅಡ್ಮಿಷನ್‌ನಲ್ಲಿ ಹಿಂದೆಂದೂ ಕಾಣದ ಹೆಚ್ಚಳ ಕಂಡುಬಂದಿದೆ. ವಿವಾದ ನಿಮಗೆ ಶಿಕ್ಷಣ ನಮಗೆ, ಎಂದು ಈ ಕಾಲೇಜಿನ ವಿದ್ಯಾರ್ಥಿಗಳು ಘಂಟಾಘೋಷವಾಗಿ ಸಾರಿದ್ದಾರೆ!

ಉಡುಪಿಯ ಸರಕಾರಿ ಹೆಣ್ಮಕ್ಕಳ ಪದವಿಪೂರ್ವ ಕಾಲೇಜು ಯಾರಿಗೆ ಗೊತ್ತಿಲ್ಲ ಹೇಳಿ? ! ಅನೇಕ ದಶಕಗಳಿಂದ ಶೈಕ್ಷಣಿಕ ಸಾಧನೆಗಳನ್ನು ಮಾಡಿದ್ದರೂ ಗಮನಿಸದ ಜನರು, ಹಿಜಾಬ್ ಗದ್ದಲ ಆರಂಭವಾದ ನಂತರ ಕಾಲೇಜಿನ ಮಾನ ಹರಾಜು ಮಾಡಿದ್ದರು. ದೇಶ-ವಿದೇಶಗಳಲ್ಲೂ ಈ ಕಾಲೇಜು ಖ್ಯಾತಿ ಮತ್ತು ಅಪಖ್ಯಾತಿಗೆ ತುತ್ತಾಗಿದ್ದು. ವಿವಾದಗಳು ಏನೇ ಇರಲಿ ನೂತನ ಶೈಕ್ಷಣಿಕ ವರ್ಷದಲ್ಲಿ ಕಾಲೇಜ್ ನಲ್ಲಿ ಭರ್ಪೂರ್ ಅಡ್ಮಿಶನ್ ಆಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಲೇಜು ಸೇರ್ಪಡೆ ಯಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇಷ್ಟೆಲ್ಲಾ ಗದ್ದಲ ವಾದ ನಂತರ ಈ ಕಾಲೇಜಿಗೆ ವಿದ್ಯಾರ್ಥಿನಿಯರು ಬರಬಹುದೇ ಎಂಬ ಕುತೂಹಲವಂತೂ ಎಲ್ಲರಿಗೂ ಇತ್ತು.  ಸದ್ಯ ಈ ಕಾಲೇಜಿನಿಂದ ದ್ವಿತೀಯ ಪಿಯುಸಿ ಮುಗಿಸಿ ತೆರಳಿದ ವಿದ್ಯಾರ್ಥಿಗಳ ಸಂಖ್ಯೆ 253, ಆದರೆ  ಈ ಬಾರಿ ಪ್ರಥಮ ಪಿಯುಸಿಗೆ 335 ವಿದ್ಯಾರ್ಥಿನಿಯರು!  

Hijab Row: ಉಪ್ಪಿನಂಗಡಿ ಡಿಗ್ರಿ ಕಾಲೇಜಲ್ಲಿ ಹಿಜಾಬ್‌ಧಾರಿ 6 ವಿದ್ಯಾರ್ಥಿಗಳ ಅಮಾನತು

ಹೌದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಂದ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲು ಈ ಕಾಲೇಜು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಾಲೇಜಿನಿಂದ ಇನ್ನೂ ನೂರು ಅರ್ಜಿ ಹೋಗಿದ್ದು ಮತ್ತಷ್ಟು ವಿದ್ಯಾರ್ಥಿಗಳು ಸೇರ್ಪಡೆ ಸಾಧ್ಯತೆಯಿದೆ. ಹತ್ತನೇ ತರಗತಿಯ ಸಪ್ಲಿಮೆಂಟರಿ ಎಕ್ಸಾಮ್ ನಂತರ ಅಡ್ಮಿಷನ್ ಹೆಚ್ಚಳ ಸಾಧ್ಯತೆಯಿದೆ. ಹಿಜಾಬ್ ವಿವಾದ ಏನೇ ಆಗಿರಲಿ, ಈಗಾಗಲೇ 40 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಗೆ ಸೇರ್ಪಡೆಯಾಗಿದ್ದಾರೆ. ಹಿಜಾಬ್ ವಿವಾದದ ಹೊರತಾಗಿಯೂ ಮುಸ್ಲಿಮ್ ವಿದ್ಯಾರ್ಥಿನಿಯರ ಅಡ್ಮಿಶನ್ ಗೆ ಅಡ್ಡಿಯಾಗಿಲ್ಲ ಅನ್ನೋದೇ ಗಮನಾರ್ಹ. 

ಅಷ್ಟು ಮಾತ್ರವಲ್ಲ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಎರಡು ಮತ್ತು ಕಾಮರ್ಸ್ ವಿಭಾಗದಲ್ಲಿ ಒಂದು ವಿಭಾಗವನ್ನು ಹೆಚ್ಚಳ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಕಂಪ್ಯೂಟರ್ಸಾಯನ್ಸ್ ಮತ್ತು ಫಿಸಿಕ್ಸ್ ಬಯಾಲಜಿ ಲ್ಯಾಬ್ ಗಳನ್ನು ಕೂಡ ಹೊಸದಾಗಿ ಆರಂಭಿಸಲಾಗುತ್ತಿದೆ.‌ ಮುಗಿದ ಶೈಕ್ಷಣಿಕ ವರ್ಷದಲ್ಲಿ ಎಸೆಸೆಲ್ಸಿ ವಿಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯೇ ನಡೆದಿದ್ದು, ಓರ್ವ ವಿದ್ಯಾರ್ಥಿನಿ 625 ಪೂರ್ಣಾಂಕ ದೊಂದಿಗೆ ಹೊಸ ದಾಖಲೆ ಬರೆದಿದ್ದಾಳೆ. 40ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು 10 ವಿದ್ಯಾರ್ಥಿಗಳು ಶೇ. 90ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ಧರ್ಮ, ವಿವಾದ ಯಾವುದಕ್ಕೂ ನಮಗೆ ಸಂಬಂಧವಿಲ್ಲ ಎಂದು ಸಾರಿದ ಈ ಕಾಲೇಜಿನ ಮಕ್ಕಳು ಶಿಕ್ಷಣವೇ ಮುಖ್ಯ ಎಂದು ಈ ಮೂಲಕ ಸಾಬೀತು ಮಾಡಿದ್ದಾರೆ. ಶಿಕ್ಷಣ ಕಾಂಕ್ಷಿ ಮಕ್ಕಳ ಬೆನ್ನಿಗೆ ಕಾಲೇಜಿನ ಆಡಳಿತ ಮಂಡಳಿ ನಿಂತಿದೆ.
 

click me!