ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾ ಮಾಡಿಲ್ಲ: ಸಚಿವ ಅಶ್ವತ್ಥನಾರಾಯಣ

By Kannadaprabha News  |  First Published Jun 5, 2022, 8:42 AM IST

*   ಸಮಾಜದಲ್ಲಿ ಯಾವುದೇ ರೀತಿ ಒಡಕು ಮೂಡಿಸುವುದು ನಮ್ಮ ಸರ್ಕಾರದ ಉದ್ದೇಶ ಇಲ್ಲ
*  ತಪ್ಪು-ಒಪ್ಪುಗಳಲ್ಲಿ ಸ್ಪಷ್ಟತೆ ಇರಬೇಕು
*  ನಾವೆಲ್ಲರೂ ಆರೆಸ್ಸೆಸ್ಸೆ ಮೂಲವೇ 


ಬೆಳಗಾವಿ(ಜೂ.05): ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾ ಮಾಡಿಲ್ಲ. ಆ ಸಮಿತಿಯ ಅವಧಿಪೂರ್ಣಗೊಂಡ ಹಿನ್ನೆಲೆ ವಿಸರ್ಜನೆ ಮಾಡಲಾಗಿದೆ. ಪಠ್ಯದಲ್ಲಿ ಏನೇ ಗೊಂದಲ ಇದ್ದರೂ ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆ ಸಮಿತಿಯ ಅವಧಿ ಮುಗಿದಿದ್ದು, ವರದಿಯನ್ನು ಸಲ್ಲಿಸಿದೆ. ಹೀಗಾಗಿ ಆ ಸಮಿತಿ ವಜಾ ಮಾಡಿಲ್ಲ ಹೊರತು ವಿಸರ್ಜನೆ ಮಾಡಲಾಗಿದೆ. ಈಗ ಕೊಟ್ಟಿರುವ ಪಠ್ಯ ಪುಸ್ತಕದಲ್ಲಿ ಏನಾದರೂ ಹಾಗೂ ಯಾರದಾದರು ಅಭ್ಯಂತರ, ಸಮಸ್ಯೆ ಇದ್ದರೆ, ಭಾವನೆಗಳಿಗೆ ಧಕ್ಕೆ ಆಗುತ್ತಿದ್ದರೆ ಅವುಗಳನ್ನು ಗಮನದಲ್ಲಿ ಇಟ್ಟುಕೊಂಡು, ಸಲಹೆ ಸೂಚನೆ ಇದ್ದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ. ಸರ್ಕಾರ ಜನಪರ ಆಗಿರಬೇಕಾಗುತ್ತದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾರೇ ಕಾನೂನು ಉಲ್ಲಂಘನೆ, ಭಾವನೆಗಳಿಗೆ ಪ್ರಚೋದನಕಾರಿಯಾದ ಯಾವುದೇ ಕ್ರಿಯೆ ಇದ್ದರೂ ಸಂಬಂಧಪಟ್ಟಂತ ಪೊಲೀಸ್‌ ಇಲಾಖೆ, ಸೈಬರ್‌ ಕ್ರೈಂಗೆ ಕೇಸ್‌ ದಾಖಲಿಸಲು ಸರ್ಕಾರ ಸೂಚಿಸಿದೆ. ಸಮಾಜದಲ್ಲಿ ಯಾವುದೇ ರೀತಿ ಒಡಕು ಮೂಡಿಸುವುದು ನಮ್ಮ ಸರ್ಕಾರದ ಉದ್ದೇಶ ಇಲ್ಲ. ಎಲ್ಲ ವರ್ಗದ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಯಾವುದೇ ಗೊಂದಲ, ಸಮಸ್ಯೆ ಇಲ್ಲ, ಏನೇ ಗೊಂದಲ ಇದ್ದರೂ ಅದಕ್ಕೆ ಸ್ಪಂದಿಸುತ್ತೇವೆ. ಈಗ ಬಂದಿರುವ ಪ್ರಸ್ತಾವನೆಗಳನ್ನು ಗಮನಿಸಿ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ಒಬ್ಬ ವ್ಯಕ್ತಿಯ ಪ್ರಶ್ನೆ ಬರೋದಿಲ್ಲ. ವಿಚಾರಾಧಾರಿತವಾಗಿ ಆಗುತ್ತದೆ. ಅದರಲ್ಲಿ ನಾಲ್ಕಾರು ಸದಸ್ಯರಿದ್ದಾರೆ. ಪಠ್ಯ ಪುಸ್ತಕದಲ್ಲಿ ಏನೆಲ್ಲಾ ಅಳವಡಿಸಬೇಕು, ಜೋಡಿಸುವ ಕೆಲಸ ಆಗಿದೆ. ಯಾವುದೇ ಅಭ್ಯಂತರ ಇದ್ದರೆ ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಆಗುತ್ತದೆ ಎಂದರು.

Latest Videos

undefined

ಆರೆಸ್ಸೆಸ್‌ ಹೆಡಗೇವಾರ್‌ ಭಾಷಣ ಶಾಲಾ ಮಕ್ಕಳಿಗೆ ಯಾಕ್‌ ಬೇಕ್ರಿ?: ಸಿದ್ದರಾಮಯ್ಯ

ನಾವೆಲ್ಲರೂ ಆರೆಸ್ಸೆಸ್ಸೆ ಮೂಲವೇ:

ಆರ್‌ಎಸ್‌ಎಸ್‌ ಮೂಲದವರು ಎಂಬ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಆರ್‌ಎಸ್‌ಎಸ್‌ನ ಮೂಲವೇ. ಇಲ್ಲಿ ಕುಳಿತಿರುವ ಎಲ್ಲರೂ ಆರ್‌ಎಸ್‌ಎಸ್‌ನವರೇ. ಇನ್ಯಾರು ಇರುತ್ತೇವೆ. ಆದರೆ ಎಲ್ಲರನ್ನೂ ಒಗ್ಗೂಡಿಸುವ, ದೇಶ, ಸಮಾಜ ಕಟ್ಟುವ ಕೆಲಸದಲ್ಲಿ ನಾವಿದ್ದೇವೆ. ಸಮಾಜ ಮತ್ತು ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು. ಆರ್‌ಎಸ್‌ಎಸ್‌ ಮಾರ್ಗದರ್ಶನದಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್‌ಎಸ್‌ಎಸ್‌ ಮಾರ್ಗದರ್ಶನ ಅಂತಲ್ಲ, ಆರ್‌ಎಸ್‌ಎಸ್‌ ಮೂಲದಲ್ಲಿದ್ದೇವೆ. ಸಂಘಟನೆಯಲ್ಲಿದ್ದೇವೆ. ಸರ್ಕಾರದಲ್ಲಿ ಇರುತ್ತೇವೆ. ಸರ್ಕಾರದಲ್ಲಿ ಇದ್ದಾಗ ಜನಪರವಾಗಿ, ಜನರ ಎಲ್ಲರ ಅಭಿಪ್ರಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಆರ್‌ಎಸ್‌ಎಸ್‌ ಎಂದರೆ ಸ್ವಯಂ ಸೇವಕ ಸಂಘ. ಇದರಲ್ಲಿ ಎಲ್ಲ ಧರ್ಮ, ಜಾತಿಯ ಎಲ್ಲರೂ ಇರುವಂತಹ ಸಂಘಟನೆ. ಸಮಾಜ ಪೂರಕವಾಗಿ ದೇಶ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ತಪ್ಪು-ಒಪ್ಪುಗಳಲ್ಲಿ ಸ್ಪಷ್ಟತೆ ಇರಬೇಕು:

ಬಿಜೆಪಿ ಬಿಟ್ಟು ಆರ್‌ಎಸ್‌ಎಸ್‌ ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ್‌, ಸುದ್ದಿಯಲ್ಲಿರಲು, ವಿಚಾರ ಮಾತಾಡಬೇಕು. ವೈಯಕ್ತಿವಾಗಿ ಹೋಗುವುದಕ್ಕಿಂತ, ಯಾವುದು ತಪ್ಪು, ಒಪ್ಪುಗಳ ನಿಲುವಿನಲ್ಲಿ ಸ್ಪಷ್ಟತೆ ಇರಬೇಕು. ಯಾವ ಕೆಲಸದಲ್ಲಿ ಏನು ದೋಷವಿದೆ. ದೋಷ ಆಧಾರಿತವಾಗಿ ಮಾತಾಡಬೇಕು. ತೇಜೋವಧೆ ಮಾಡುವಂತಹದು, ಅವಮಾನ ಮಾಡುವಂತಹದು, ಕೆಟ್ಟ ಹೇಳಿಕೆ ಕೊಡುವುದರಿಂದ ದೂರ ಬರಬೇಕು. ಇಂತಹ ಹೇಳಿಕೆಗಳನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದರು? ಯಾವ ರೀತಿ ನಡೆದುಕೊಂಡರು? ಅಧಿಕಾರದ ಅಮಲಿನಲ್ಲಿ ಜನಪರವಾಗಿ ಕೆಲಸ ಮಾಡುವ ಬದಲು ತಮ್ಮ ಶ್ರೇಯೋಭಿವೃದ್ಧಿ ಮಾಡಿಕೊಂಡರು. ಹೀಗಾಗಿ ಜನರು ಇವರನ್ನು ತಿರಸ್ಕರಿಸಿದ್ದಾರೆ ಎಂದು ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಅನಿಲ್‌ ಬೆನಕೆ, ವಿಧಾನ ಪರಿಷತ್‌ ಮಾಜಿಸದಸ್ಯ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.
 

click me!