11 ಜಿಲ್ಲೆಯಲ್ಲಿ ಅನ್‌ಲಾಕ್‌ ಬಳಿಕ ಶಿಕ್ಷಕರು ಶಾಲೆಗೆ : ಪಾಠಗಳು ಆರಂಭ ಯಾವಾಗಿಂದ..?

By Kannadaprabha News  |  First Published Jun 15, 2021, 9:14 AM IST
  • ಪ್ರಸಕ್ತ ಸಾಲಿನ (2021-22) ಶೈಕ್ಷಣಿಕ ವರ್ಷವು ಜು.1ರಿಂದ ಆರಂಭ
  • ಅನ್‌ಲಾಕ್‌ ಆಗಿರುವ ಜಿಲ್ಲೆಗಳ ಶಿಕ್ಷಕರು ಜೂ.15ರಿಂದ 30ರ ವರೆಗೆ ಶಾಲೆಗಳಿಗೆ ಹಾಜರಾಗಬೇಕು
  • ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಶಿಕ್ಷಕರಿಗೆ ಸೂಚನೆ 

 ಬೆಂಗಳೂರು (ಜೂ.15):  ಪ್ರಸಕ್ತ ಸಾಲಿನ (2021-22) ಶೈಕ್ಷಣಿಕ ವರ್ಷವು ಜು.1ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅನ್‌ಲಾಕ್‌ ಆಗಿರುವ ಜಿಲ್ಲೆಗಳ ಶಿಕ್ಷಕರು ಜೂ.15ರಿಂದ 30ರ ವರೆಗೆ ಶಾಲೆಗಳಿಗೆ ಹಾಜರಾಗಬೇಕು. ಉಳಿದ ಜಿಲ್ಲೆಯವರು ಲೌಕ್‌ಡೌನ್‌ ತೆರವಾದ ನಂತರ ಶಾಲೆಗಳಿಗೆ ಭೌತಿಕವಾಗಿ ಹಾಜರಾಗಬೇಕು ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿ​ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮಂಗಳವಾರದಿಂದ ಶಾಲೆಗಳಿಗೆ ಶಿಕ್ಷಕರು ಹಾಜರಾಗಿ ಮಕ್ಕಳ ನೋಂದಣಿ ಪ್ರಾರಂಭಿಸಬೇಕಿತ್ತು. ಆದರೆ, ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇರುವುದರಿಂದ ರಾಜ್ಯದ ಎಲ್ಲೆಡೆ ಈ ಪ್ರಕ್ರಿಯೆ ಸಾಧ್ಯವಿಲ್ಲ. ಹೀಗಾಗಿ ಲೌಕ್ಡೌನ್‌ ತೆರವಾಗಿರುವ ಜಿಲ್ಲೆಗಳಲ್ಲಿರುವ ಶಿಕ್ಷಕರು ಭೌತಿಕವಾಗಿ, ಉಳಿದ ಜಿಲ್ಲೆಯ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಮತ್ತು ಶೈಕ್ಷಣಿಕ ಸಾಲಿನ ತಯಾರಿ ಕಾರ್ಯಗಳನ್ನು ಮನೆಯಿಂದಲೇ ನಡೆಸುವಂತೆ ಸೂಚಿಸಲಾಗಿದೆ ಎಂದರು.

Tap to resize

Latest Videos

undefined

ಸಿಇಟಿ ಪರೀಕ್ಷೆ: PUC ಸೈನ್ಸ್ ವಿದ್ಯಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ ...

ಪರೀಕ್ಷಾ ಸಿಬ್ಬಂದಿಗೆ ಲಸಿಕೆ:

ಜುಲೈ ಮೂರನೇ ವಾರದಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಪತ್ರ ಬರೆದು ಲಸಿಕೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಹಕಾರ ಕೋರಲು ಜೂ.28ರಂದು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.

ಪ್ರಥಮ ಪಿಯು ಮೌಲ್ಯಾಂಕನ ಅವ​ಧಿ ವಿಸ್ತರಣೆ:

ಉಪನ್ಯಾಸಕ ಸಂಘಟನೆಗಳ ಮನವಿ ಮೇರೆಗೆ ಪ್ರಥಮ ಪಿಯುಸಿ ಮೌಲ್ಯಾಂಕನ ದಾಖಲಿಸಲು ಲಾಕ್‌ಡೌನ್‌ ಅವ​ಧಿ ಪೂರ್ಣಗೊಳ್ಳುವವರೆಗೆ ಸಮಯ ವಿಸ್ತರಿಸಲಾಗಿದೆ. ಈ ಸಂಬಂಧ ಇಲಾಖೆಯು ಕ್ರಮ ಕೈಗೊಳ್ಳಲಿದೆ ಎಂದರು.

ಜುಲೈ 15 ರಿಂದ ಶಾಲೆಗಳಲ್ಲಿ ದಾಖಲಾತಿ ಆರಂಭ, ಪೂರ್ವತಯಾರಿಗೆ ಶಿಕ್ಷಕರಿಗೆ ಸೂಚನೆ ...

ಚೈಲ್ಡ್‌ ಪ್ರೊಫೈಲ್‌ ನಿಯಮಿತ ದಾಖಲೆ:

ಈ ಬಾರಿ ನಿಗದಿತ ಅವ​ಧಿಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ ವಿದ್ಯಾರ್ಥಿಗಳ ಚೈಲ್ಡ್‌ ಪ್ರೊಫೈಲ್‌ಗಳನ್ನು ನಿಯಮಿತವಾಗಿ ದಾಖಲಿಸಲು, ಕಲಿಕಾ ಸಾಮರ್ಥ್ಯಗಳನ್ನು ಅಳೆಯುವ ಮಾನದಂಡಗಳಾಗಿ ರೂಪಿಸುವ ಸದೃಢ ವ್ಯವಸ್ಥೆ ರೂಪಿಸಬೇಕು. ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿ​ಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಎಸ್‌.ಆರ್‌. ಉಮಾಶಂಕರ್‌, ಇಲಾಖೆ ಆಯುಕ್ತ ಅನ್ಬುಕುಮಾರ್‌, ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್‌ ಸೇರಿದಂತೆ ಹಿರಿಯ ಅಧಿ​ಕಾರಿಗಳು ಉಪಸ್ಥಿತರಿದ್ದರು.

ಶೀಘ್ರ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಪ್ರಕಟ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ ಶೀಘ್ರ ವೇಳಾಪಟ್ಟಿಪ್ರಕಟಿಸುವಂತೆ ಸಭೆಯಲ್ಲಿ ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಂತ್ರಿಕ ಕಾರಣಕ್ಕಾಗಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಯಾಗಬಾರದು. ಶಿಕ್ಷಕರಿಗೆ ಸಮಸ್ಯೆ ಉಂಟಾWದಂತೆ ಈ ಬಾರಿ ಪ್ರಕ್ರಿಯೆ ನಡೆಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮುಖ್ಯಮಂತ್ರಿಯವರು ಘೋಷಿಸಿರುವಂತೆ ಖಾಸಗಿ ಶಾಲಾ ಶಿಕ್ಷಕರ ಪ್ಯಾಕೇಜ್‌ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆಯೂ ಅವರು ಸೂಚಿಸಿದರು. ಶಿಕ್ಷಕರ, ಶಿಕ್ಷಕೇತರರ ಹಾಗೂ ಅತಿಥಿ ಶಿಕ್ಷಕರ ಬ್ಯಾಂಕ್‌ಖಾತೆಗಳ ವಿವರಗಳನ್ನು ಶೀಘ್ರ ಸಂಗ್ರಹಿಸಿ ಅನುದಾನವನ್ನು ನೇರ ಶಿಕ್ಷಕರ ಖಾತೆಗಳಿಗೆ ವರ್ಗಾಯಿಸಬೇಕು. ಅತ್ಯಂತ ಸಮರ್ಪಕವಾಗಿ ಈ ಪ್ರಕ್ರಿಯೆ ನಿರ್ವಹಣೆಯಾಗಬೇಕು ಎಂದು ಅವರು ತಾಕೀತು ಮಾಡಿದರು.

ವಿಧಾನಸೌಧದಲ್ಲಿ ಸೋಮವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಎಸ್‌.ಆರ್‌. ಉಮಾಶಂಕರ್‌, ಅನ್ಬುಕುಮಾರ್‌, ಸ್ನೇಹಲ್‌ ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!