ಅವೈಜ್ಞಾನಿಕ ಶುಲ್ಕ ಏರಿಕೆ, ಹಾಸ್ಟೆಲ್‌ಗಳ ಅವ್ಯವಸ್ಥೆಗೆ ವಿದ್ಯಾರ್ಥಿಗಳ ತೀವ್ರ ಅಕ್ರೋಶ. ಅಧ್ಯಾಪಕರ ಅಕ್ರಮ ನೇಮಕಾತಿ, ಜಸ್ಟೀಸ್ ಕೇಶವ ನಾರಾಯಣ ವರದಿಗೆ ಧೂಳು. ಎಲ್ಲಾ ವಿಚಾರಗಳು ಸೇರಿ ಎಬಿವಿಪಿ ಪ್ರತಿಭಟನೆ ನಡೆಸಿತು.
ದಾವಣಗೆರೆ (ನ.18): ರಾಜ್ಯದ ಪ್ರತಿಷ್ಠಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಗರಿಮೆಯ ದಾವಣಗೆರೆ ಯುಬಿಡಿಟಿ ಕಾಲೇಜಿನ ಬಗ್ಗೆ ವಿಟಿಯು ಹೊಂದಿರುವ ಅಸಡ್ಡೆ, ವಿದ್ಯಾರ್ಥಿಗಳಿಗೆ ಅವೈಜ್ಞಾನಿಕ ಶುಲ್ಕ ವಿಧಿಸುತ್ತಿರುವುದನ್ನು ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಗರದ ಯುಬಿಡಿಟಿ ಕಾಲೇಜು ಬಳಿಯಿಂದ ಡಾ.ಎಂ.ಸಿ.ಮೋದಿ ವೃತ್ತದವರೆಗೂ ಎಬಿವಿಪಿ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿಟಿಯು ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ವಿಟಿಯು ಅವೈಜ್ಞಾನಿಕವಾಗಿ ಶುಲ್ಕ ವಿಧಿಸುತ್ತಿದೆ. ಕಾಲೇಜು ಆಡಳಿತ ಮಂಡಳಿ 2 ಮತ್ತು 3ನೇ ವರ್ಷ(ಲ್ಯಾಟರಲ್ ಎಂಟ್ರಿ)ದ ವಿದ್ಯಾರ್ಥಿಗಳಿಗೆ 3, 4ನೇ ವರ್ಷದ ಶುಲ್ಕದ ಬಗ್ಗೆ ಹೊಸ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಅನೇಕ ತಾರತಮ್ಯಗಳಿದ್ದು, ಇದೊಂದು ಸರ್ಕಾರಿ ಕಾಲೇಜು ಆಗಿದ್ದರೂ ಹೆಚ್ಚು ಶುಲ್ಕ ವಸೂಲಿ ಸರಿಯಲ್ಲ ಎಂದರು.
ಹಾಸ್ಟೆಲ್‌ಗಳು ಅವ್ಯವಸ್ಥೆಯಿಂದ ಕೂಡಿದ್ದರೂ ಸಮಸ್ಯೆ ಪರಿಹರಿಸುವ ವ್ಯವಧಾನ ವಿಟಿಯುಗಾಗಲೀ, ಯುಬಿಡಿಟಿ ಕಾಲೇಜು ಆಡಳಿತ ಮಂಡಳಿಗಾಗಲೀ ಇಲ್ಲ. ಪಿಜಿ ಕೋರ್ಸ್‌ಗಳನ್ನು ಮರು ಆರಂಭಿಸುವಂತೆ ಆಗ್ರಹಿಸಿ, ಯುಬಿಡಿಟಿ ವಿದ್ಯಾರ್ಥಿಗಳು ಇಂದು ಪತ್ರ ಬರೆದು, ವಿಟಿಯುಗೆ ಒತ್ತಾಯಿಸುತ್ತಿದ್ದೇವೆ.
ಕಾಲೇಜಿನ ಕ್ರೀಡಾ ಚಟುವಟಿಕೆ, ಕ್ರೀಡಾ ಸಾಮಗ್ರಿಗಳ ವಿಚಾರದಲ್ಲೂ ಪ್ರಾಚಾರ್ಯರು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆ, ಕ್ರೀಡಾಕೂಟಕ್ಕೆ ಹೊರಟರೆ, ಜರ್ಸಿ, ಬೂಟ, ಟಿಎ, ಡಿಎ ಸಹ ನೀಡುತ್ತಿಲ್ಲ ಸಹಾಯಕ ಕುಲ ಸಚಿವರಂತೂ ವಿದ್ಯಾರ್ಥಿಗಳಿಗೆ ಇನ್ನಿಲ್ಲದಂತೆ ಸತಾಯಿಸುತ್ತಿದ್ದಾರೆ ಎಂದು ಆಪಾದಿಸಿದರು.
Kodagu: ಶಾಲೆಗಳ ವಿರುದ್ಧ ಆರ್ ಟಿಓಗೆ ದೂರು ನೀಡಿದ ಚಾಲಕರು ಮತ್ತು ಮಾಲೀಕರ ಸಂಘ
ವಿಟಿಯು ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ವರದಿ ಧೂಳು ಹಿಡಿಯುತ್ತಿದ್ದು, ಇದರ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಕಾಲೇಜಿನಲ್ಲಿ ತಕ್ಷಣದಿಂದಲೇ ಪಿಜಿ ಕೋರ್ಸ್‌ಗಳನ್ನು ಮರು ಆರಂಭಿಸಬೇಕು. ಬೇಕಾಬಿಟ್ಟಿಯಾಗಿ ಶುಲ್ಕ, ಹಾಸ್ಟೆಲ್ ಶುಲ್ಕ ಏರಿಸುವುದನ್ನು ನಿಲ್ಲಿಸಬೇಕು. ಹಾಸ್ಟೆಲ್‌ಗಳ ಅವ್ಯವಸ್ಥೆ ಸರಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಸಚಿವರು, ಸಂಸದರು ಹಾಗೂ ವಿಟಿಯುಗೆ ವಿದ್ಯಾರ್ಥಿ ಮುಖಂಡರು ಒತ್ತಾಯಿಸಿದರು.
Chanakya University: ಬೆಂಗಳೂರು ಬಳಿ ನಾಳೆ ಚಾಣಕ್ಯ ವಿಶ್ವವಿದ್ಯಾಲಯ ಉದ್ಘಾಟನೆ
ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಟ್ರೇಶ, ಸೋಹನ್, ಮೋಹಿತ್, ಅಲೋಕ್, ದರ್ಶನ, ಗುರು, ಹರೀಶ, ಅನಿಕೇತ, ಅಕ್ಷತಾ, ವಿಜಯ ಸೇರಿದಂತೆ ಅನೇಕರು ಪ್ರತಿಭಟನೆಯ ಲ್ಲಿದ್ದರು.