Uttara Kannada : ಶಾಲೆಗೆ ಬಾರದ ಶಿಕ್ಷಕರು; ಕಾದು ಕಾದು ಮನೆಗೆ ಹೋದ ವಿದ್ಯಾರ್ಥಿಗಳು!

By Kannadaprabha News  |  First Published Dec 25, 2022, 10:35 AM IST

ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಯಾವುದೇ ಶಿಕ್ಷಕರು ಆಗಮಿಸದ ಕಾರಣ ಮಕ್ಕಳು ಸಪ್ಪೆ ಮೋರೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ ಘಟನೆ ಶುಕ್ರವಾರ ವರದಿಯಾಗಿದೆ. ನೆಟ್‌ವರ್ಕ್ ವಂಚಿತ ಪ್ರದೇಶದಲ್ಲಿರುವ ಶಾಲೆಯಾಗಿರುವುದರಿಂದ ಮುಂಜಾನೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಶಾಲೆಯ ಬೀಗ ತೆಗೆದು ಪ್ರಾರ್ಥನೆ ಮಾಡಿದ್ದಾರೆ.


ಹೊನ್ನಾವರ (ಡಿ.25) : ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಯಾವುದೇ ಶಿಕ್ಷಕರು ಆಗಮಿಸದ ಕಾರಣ ಮಕ್ಕಳು ಸಪ್ಪೆ ಮೋರೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ ಘಟನೆ ಶುಕ್ರವಾರ ವರದಿಯಾಗಿದೆ. ಸಾಲ್ಕೋಡ್‌ ಗ್ರಾಪಂ ವ್ಯಾಪ್ತಿಯ ಕೇಶವಪಾಲ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಯೋರ್ವರು ಎರಡು ದಿನಗಳಿಂದ ರಜೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಮೀಪದ ಶಾಲಾ ಶಿಕ್ಷಕಿಯನ್ನು ಅಧಿಕಾರಿಗಳು ನಿಯೋಜಿಸಿದ್ದರು. ಆದರೆ ಶುಕ್ರವಾರ ಯಾವುದೇ ಶಿಕ್ಷಕರನ್ನು ನಿಯೋಜಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲೇ ಇಡೀ ದಿನ ಕಳೆಯುವ ಪರಿಸ್ಥಿತಿ ಎದುರಾಯಿತು. ನೆಟ್‌ವರ್ಕ್ ವಂಚಿತ ಪ್ರದೇಶದಲ್ಲಿರುವ ಶಾಲೆಯಾಗಿರುವುದರಿಂದ ಮುಂಜಾನೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಶಾಲೆಯ ಬೀಗ ತೆಗೆದು ಪ್ರಾರ್ಥನೆ ಮಾಡಿದ್ದಾರೆ.

ಇದು ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು, 5 ವಿದ್ಯಾರ್ಥಿಗಳಿದ್ದಾರೆ. ಆದರೆ ಯಾವುದೇ ಶಿಕ್ಷಕರು ಆಗಮಿಸದೇ ಇರುವುದರಿಂದ ಶಾಲಾ ಆವರದಲ್ಲಿ ಸಮಯ ಕಳೆಯುತ್ತಿದ್ದಾಗ ಬಿಸಿಯೂಟ ಕಾರ್ಯಕರ್ತೆ ಮಧ್ಯಾಹ್ನದವರೆಗೆ ಇದ್ದು ಬಿಸಿಯೂಟ ಮುಗಿಯುವರೆಗೂ ಯಾವೊಬ್ಬ ಶಿಕ್ಷಕರು ಶಾಲೆಯತ್ತ ಮುಖ ಮಾಡಿಲ್ಲ ಎಂದು ತಿಳಿದುಬಂದಿದೆ.

Tap to resize

Latest Videos

 

Dharwad: ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದ ಶಾಲೆಗೆ ಬೀಗ ಜಡಿದಿದ್ದ ಗ್ರಾಮಸ್ಥರು, ಬಿಇಒ ಸಂಧಾನ ಬಳಿಕ ಶಾಲೆ ಓಪನ್‌

ಈ ವಿಷಯ ಗಮನಕ್ಕೆ ಬಂದ ಸಾರ್ವಜನಿಕರೊಬ್ಬರು ಮಾಧ್ಯಮದವರಿಗೆ ವಿಷಯ ತಲುಪಿಸಿದ್ದಾರೆ. ಮಾಧ್ಯಮದವರು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಮಧ್ಯಾಹ್ನ ನಂತರ ಓರ್ವ ಶಿಕ್ಷಕರು ಶಾಲೆಗೆ ಭೇಟಿ ನೀಡಿದ್ದಾರೆ.

ಶಾಲೆಯಲ್ಲಿ ಶಿಕ್ಷಕರು ರಜೆ ಮೇಲೆ ತೆರಳುವಾಗ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು. ಒಬ್ಬರೇ ಶಿಕ್ಷಕರಿದ್ದಾಗ ಸಿಆರ್‌ಪಿ ಗಮನಕ್ಕೆ ತರಬೇಕು ಎನ್ನುವ ನಿಯಮವಿದೆ. ಎರಡು ದಿನ ರಜೆ ಹಾಕಿರುವ ಶಿಕ್ಷಕಿಯ ರಜೆಯ ಮಾಹಿತಿಯ ಮೇರೆಗೆ ಮೊದಲ ದಿನ ಸಮೀಪದ ಶಾಲೆಯ ಶಿಕ್ಷಕಿಯನ್ನು ನಿಯೋಜಿಸಲಾಗಿತ್ತು. ಎರಡನೇ ದಿನ ನಿಯೋಜಿಸಿಲ್ಲವಾ? ಅಥವಾ ಮೊದಲ ದಿನ ನಿಯೋಜಿಸಿದ ಶಿಕ್ಷಕರು ಶಾಲೆಗೆ ಹೋಗುವುದಿಲ್ಲ ಎನ್ನುವ ಮಾಹಿತಿ ನೀಡಿದ್ದಾರಾ? ಮಾಹಿತಿ ನೀಡಿದ್ದರೆ ಬದಲಿ ವ್ಯವಸ್ಥೆ ಯಾಕೆ ಮಾಡಿಲ್ಲ ಎನ್ನುವ ಹಲವು ಪ್ರಶ್ನೆಗಳು ಮೂಡುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಅಸಡ್ಡೆಯಿಂದ ವಿದ್ಯಾರ್ಥಿಗಳು ಪಾಠವಿಲ್ಲದೇ ಶಾಲೆಯಲ್ಲಿ ಸಮಯ ಕಳೆಯುವ ಸ್ಥಿತಿ ಎದುರಾಗಿದೆ.

2ನೇ ತರಗತಿಯ ವಿದ್ಯಾರ್ಥಿಯನ್ನು ಬಿಟ್ಟು ತರಗತಿಗೆ ಬೀಗ: 10 ಶಾಲಾ ಸಿಬ್ಬಂದಿ ಅಮಾನತು

ಶಾಲೆಯಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಬೇಸರ ತಂದಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಮಧ್ಯಾಹ್ನದ ಬಳಿಕ ಓರ್ವ ಶಿಕ್ಷಕರನ್ನು ಕಳುಹಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ.

-ಜಿ.ಎಸ್‌. ನಾಯ್ಕ, ಶಿಕ್ಷಣಾಧಿಕಾರಿ

click me!