SSLC: ಪಾಸಿಂಗ್‌ ಮಾರ್ಕ್ಸ್‌ಗೆ ಅಭ್ಯಾಸ ಮಿತ್ರ

By Kannadaprabha News  |  First Published May 17, 2021, 9:20 AM IST

ಧಾರವಾಡ ಶಿಕ್ಷಣ ಇಲಾಖೆಯಿಂದ ವಿನೂತನ ಪ್ರಯತ್ನ
* ‘ಕಲಿಕಾಸೇತು’ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅರಿಯಲಾಗಿದೆ
* ಕೊರೋನಾ ಪರಿಣಾಮ ವಿದ್ಯಾರ್ಥಿಗಳೂ ಡೋಲಾಯಮಾನ ಪರಿಸ್ಥಿತಿ 
 


ಮಯೂರ ಹೆಗಡೆ

ಹುಬ್ಬಳ್ಳಿ(ಮೇ.17): ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಕಲಿಕಾ ಸೇತು ಮೂಲಕ ಮಕ್ಕಳ ಕಲಿಕಾ ಗುಣಮಟ್ಟ ಕಂಡುಕೊಂಡ ಧಾರವಾಡ ಶಿಕ್ಷಣ ಇಲಾಖೆಯು ಕಲಿಕೆಯಲ್ಲಿ ಹಿಂದುಳಿದ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸಿಂಗ್‌ ಮಾರ್ಕ್ಸ್‌ ಪಡೆಯಲು ಅನುಕೂಲವಾಗುವಂತೆ ಅಭ್ಯಾಸ ಮಿತ್ರ ಪುಸ್ತಕ ರಚಿಸಿ ವಿತರಿಸಿದೆ.

Latest Videos

undefined

ಕೊರೋನಾ 2ನೇ ಅಲೆ ಪರಿಣಾಮ ವಿದ್ಯಾರ್ಥಿಗಳೂ ಡೋಲಾಯಮಾನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ನಿರಂತರ ಆನ್‌ಲೈನ್‌ ಪಾಠ, ಸಂಪನ್ಮೂಲ ಶಿಕ್ಷಕರಿಂದ ಮನೆಮನೆಗೆ ತೆರಳಿ ಬೋಧನೆ, ಮಾದರಿ ಪ್ರಶ್ನೆ ಪತ್ರಿಕೆ ಬರೆಯುವುದು ಸೇರಿ ಹಲವು ಪ್ರಯತ್ನದ ಮೂಲಕ ವಿದ್ಯಾರ್ಥಿಗಳನ್ನು ತಲುಪಲಾಗಿತ್ತು. ಅವೆಲ್ಲವೂ ಈ ಬಾರಿಯೂ ಇನ್ನಷ್ಟು ಸುಧಾರಣೆ ಜತೆಗೆ ಮುಂದುವರಿದಿದೆ.

ಕಲಿಕಾ ಸೇತು

ಇದರ ಜತೆಗೆ ಜನವರಿಯಲ್ಲಿ ತರಗತಿ ಆರಂಭಿಸಿದ ವೇಳೆ ಕಲಿಕಾ ಸೇತು ಎಂಬ ಕಾರ್ಯಕ್ರಮದಡಿ ಪರೀಕ್ಷೆ ನಡೆಸಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಕಂಡುಕೊಳ್ಳಲಾಗಿತ್ತು. ಇದೀಗ ಪಠ್ಯಕ್ರಮದ ಬೋಧನೆ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಕಲಿಕಾ ಸೇತು ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎಷ್ಟು ಅಂಕ ಪಡೆದಿದ್ದಾರೆ ಎಂಬುದರ ಮೇರೆಗೆ 80 ಶೇ., 60-80ಶೇ., 35-60 ಶೇ. ಎಂದು ವಿಂಗಡಣೆ ಮಾಡಿಕೊಳ್ಳಲಾಗಿದೆ. ಇವರ ಗುಣಮಟ್ಟ ಹೆಚ್ಚಿಸಲು ಪ್ರತ್ಯೇಕ ಮಾದರಿಯಲ್ಲಿ ಬೋಧನೆ ಮಾಡಲಾಗುತ್ತಿದೆ.

ಕೊರೋನಾದಿಂದ ಮೃತಪಟ್ಟ ಶಿಕ್ಷಕರ ವಿವರ ಕೇಳಿದ ಶಿಕ್ಷಣ ಇಲಾಖೆ

ಅಭ್ಯಾಸ ಮಿತ್ರ

ಹೀಗೆ ಕಲಿಕಾ ಸೇತುವೆ ಪರೀಕ್ಷೆ ಆಧಾರದಲ್ಲಿ ಜಿಲ್ಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ 6 ಸಾವಿರ ಮಕ್ಕಳನ್ನು ಗುರುತಿಸಲಾಗಿದೆ. ಇವರಿಗಾಗಿ ಅಭ್ಯಾಸ ಮಿತ್ರ ರಚನೆಯಾಗಿದೆ. ತಾಲೂಕಿಗೆ ಇಬ್ಬರಂತೆ ಜಿಲ್ಲೆಯ 10-15 ತಜ್ಞ ಶಿಕ್ಷಕರು ಡಿಡಿಪಿಐ ಮೋಹನಕುಮಾರ ಹಂಚಾಟೆ ಮಾರ್ಗದರ್ಶನದಲ್ಲಿ ಅಭ್ಯಾಸ ಮಿತ್ರ ಪುಸ್ತಕ ರೂಪಿಸಲಾಗಿದೆ. ಭಾಷಾ ವಿಷಯಕ್ಕೆ ಹಾಗೂ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪ್ರತ್ಯೇಕವಾಗಿ ಪುಸ್ತಕ ರಚನೆಯಾಗಿದೆ. ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳನ್ನೆ ಕೇಂದ್ರಿಕೃತವಾಗಿರಿಸಿ ಈ ಪಠ್ಯಕ್ರಮ ರೂಪಿಸಿದ್ದಾರೆ.

ಸರ್ವಶಿಕ್ಷಣ ಅಭಿಯಾನ ಹಾಗೂ ಶಿಕ್ಷಣ ಫೌಂಡೇಶನ್‌ ಜಂಟಿಯಾಗಿ ಈ ಪುಸ್ತಕಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪುಸ್ತಕ ನೀಡಲಾಗಿಲ್ಲ. ಬದಲಾಗಿ ಸಾಫ್ಟ್‌ ಕಾಪಿಯನ್ನು ವಾಟ್ಸ್‌ಆ್ಯಪ್‌ಗೆ ಕಳಿಸಿದ್ದೇವೆ. ಇವುಗಳನ್ನು ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳಿಗೆ ಕನಿಷ್ಠ ಪಾಸಿಂಗ್‌ ಮಾರ್ಕ್ಸ್‌ ಸಿಗುತ್ತದೆ ಎಂದು ಡಿಡಿಪಿಐ ಮೋಹನ್‌ ಹಂಚಾಟೆ ತಿಳಿಸಿದರು.

ಇನ್ನು ಪ್ರತಿದಿನ ಆನ್‌ಲೈನ್‌ ಶಿಕ್ಷಣ ನಡೆಸಿದ ಬಗ್ಗೆ ಡಿಡಿಪಿಐ ವಿವರ ಪಡೆಯುತ್ತಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಪಾಲಕರಿಗೆ ವ್ಯಾಕ್ಸಿನೇಶನ್‌ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಶಿಕ್ಷಕರು ಮಾಡುತ್ತಿದ್ದಾರೆ. ಇಷ್ಟಾದರೂ ಪಾಲಕರ ಅನಾರೋಗ್ಯ ಸೇರಿ ಇತರ ಕಾರಣಕ್ಕೆ ಹಲವು ಶಾಲೆಗಳ 2-3 ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರ ಸಂಪರ್ಕಿಸಿ ಆನ್‌ಲೈನ್‌ ಶಿಕ್ಷಣಕ್ಕೆ ಒಳಪಡಿಸಲು ಇಲಾಖೆ ಹರಸಾಹಸ ಪಡುತ್ತಿದೆ.

ಪರೀಕ್ಷೆ ಬರೆಯಲಿರುವವರು ತಾಲೂಕು ವಿದ್ಯಾರ್ಥಿಗಳು

ಹುಬ್ಬಳ್ಳಿ ಶಹರ 8217
ಧಾರವಾಡ ಶಹರ 4891
ಧಾರವಾಡ ಗ್ರಾಮೀಣ 3474
ಹುಬ್ಬಳ್ಳಿ ಗ್ರಾಮೀಣ 3285
ಕಲಘಟಗಿ 2548
ಕುಂದಗೋಳ 1970
ನವಲಗುಂದ 2224
ಒಟ್ಟು 26609

ಅಭ್ಯಾಸ ಮಿತ್ರ’ದ ಎರಡು ಪುಸ್ತಕಗಳು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸಿಂಗ್‌ ಮಾರ್ಕ್ಸ್‌ ಪಡೆಯಲು ಸಾಕಷ್ಟುನೆರವಾಗಲಿದೆ. ಕಲಿಕಾ ಸೇತು ಮೂಲಕ ಮಕ್ಕಳ ಗುಣಮಟ್ಟ ಹೇಗಿದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದು ಧಾರವಾಡ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್‌. ಹಂಚಾಟೆ ತಿಳಿಸಿದ್ದಾರೆ.
 

click me!