ಹಾವೇರಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 924 ಮಕ್ಕಳು

By Kannadaprabha News  |  First Published Nov 4, 2022, 10:17 PM IST

ಶಾಲೆಗೆ ದಾಖಲಾಗದ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ಹಲವು ಕಸರತ್ತು ನಡೆಸಿದರೂ ಪ್ರಸಕ್ತ ಸಾಲಿನಲ್ಲಿ ವಿವಿಧ ವಯೋಮಾನದ ಜಿಲ್ಲೆಯ 924 ಮಕ್ಕಳು ಶಾಲೆಯಿಂದ ದೂರ ಉಳಿದಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ.


ನಾರಾಯಣ ಹೆಗಡೆ

ಹಾವೇರಿ (ನ.04): ಶಾಲೆಗೆ ದಾಖಲಾಗದ ಮಕ್ಕಳನ್ನು ಕರೆತರಲು ಶಿಕ್ಷಣ ಇಲಾಖೆ ಹಲವು ಕಸರತ್ತು ನಡೆಸಿದರೂ ಪ್ರಸಕ್ತ ಸಾಲಿನಲ್ಲಿ ವಿವಿಧ ವಯೋಮಾನದ ಜಿಲ್ಲೆಯ 924 ಮಕ್ಕಳು ಶಾಲೆಯಿಂದ ದೂರ ಉಳಿದಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಕೊರೋನಾ ಸಾಂಕ್ರಾಮಿಕದ ಎರಡು ವರ್ಷಗಳ ಬಳಿಕ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿ ನಡೆಯುತ್ತಿದೆ. ಕಲಿಕಾ ಚೇತರಿಕೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಇಲಾಖೆಯು ಮಕ್ಕಳ ಕಲಿಕೆ ಸರಿದೂಗಿಸಲು ವಿಶೇಷ ಪ್ರಯತ್ನ ನಡೆಸಿದೆ. 

Tap to resize

Latest Videos

undefined

ಕಡ್ಡಾಯ ಶಿಕ್ಷಣದ ಭಾಗವಾಗಿ 6ರಿಂದ 16 ವರ್ಷದೊಳಗಿನ ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಇಲಾಖೆ ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸಿದೆ. ಆದರೂ ವಿವಿಧ ಕಾರಣಗಳಿಂದ ಈ ವರ್ಷ 924 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಗೆ ದಾಖಲಾಗದೇ ಇರುವ ಮಕ್ಕಳ ಸಮೀಕ್ಷೆ ನಡೆಸಲಾಗಿದ್ದು, ಪಾಲಕರ ಮನವೊಲಿಸಿ ಅನೇಕ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿದೆ. ಇದರ ಹೊರತಾಗಿಯೂ ಇಷ್ಟೊಂದು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.

Haveri: ರಸ್ತೆಯಲ್ಲಿ ಅಡ್ಡ ಮಲಗಿ ವಿಭಿನ್ನ ಪ್ರತಿಭಟನೆ ಮಾಡಿದ ರೈತ ಮುಖಂಡರು

15-16ರ ವಯೋಮಾನದವರು: ಶಾಲೆಯಿಂದ ಹೊರಗುಳಿದವರಲ್ಲಿ ಹೆಚ್ಚಿನವರು 15-16ರ ವಯೋಮಾನದವರು ಎಂಬುದು ಗಮನಿಸಬೇಕಾದ ಅಂಶ. ಜಿಲ್ಲೆಯಲ್ಲಿ 6ರಿಂದ 14 ವರ್ಷದೊಳಗಿನ 436 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಸಮೀಕ್ಷೆ ವೇಳೆ ಎಲ್ಲ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆಸಲಾಗಿದೆ. ಇವರಲ್ಲಿ 337 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದ್ದು, ಇನ್ನೂ 99 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇನ್ನು 15ರಿಂದ 16 ವರ್ಷ ವಯೋಮಾನದ 974 ಮಕ್ಕಳು ಶಾಲೆಗೆ ದಾಖಲಾಗಿರಲಿಲ್ಲ. ಅವರೆಲ್ಲರನ್ನೂ ಪತ್ತೆ ಹಚ್ಚಲಾಗಿದ್ದು, ಇವರಲ್ಲಿ 149 ಮಕ್ಕಳನ್ನು ಮಾತ್ರ ಮುಖ್ಯ ವಾಹಿನಿಗೆ ಸೇರಿಸಲು ಸಾಧ್ಯವಾಗಿದೆ. ಇನ್ನುಳಿದ 825 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಒಟ್ಟು 6ರಿಂದ 16 ವರ್ಷದೊಳಗಿನ 924 ಮಕ್ಕಳು ಶಾಲೆಗೆ ದಾಖಲಾಗಿಲ್ಲ.

41 ಮಕ್ಕಳು ವಲಸೆ: ಹೈಕೋರ್ಟ್‌ ಸೂಚನೆ ಮೇರೆಗೆ ರಾಜ್ಯಾದ್ಯಂತ ಆರ್‌ಡಿಪಿಆರ್‌ ಇಲಾಖೆಯು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿದೆ. ಶಾಲೆಗೆ ದಾಖಲಾಗದ ಶೂನ್ಯನಿಂದ 18 ವರ್ಷದೊಳಗಿನ ಮಕ್ಕಳನ್ನು ಸಮೀಕ್ಷೆ ವೇಳೆ ಪತ್ತೆ ಹಚ್ಚಲಾಗಿದೆ. ಇದರಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ 1410 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿಯನ್ನು ನೀಡಲಾಗಿತ್ತು. ಈ ಪೈಕಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದವರೆಗಿನ ಅಂದರೆ 6ರಿಂದ 16 ವರ್ಷದೊಳಗಿನ ಮಕ್ಕಳನ್ನು ಮಾತ್ರ ಪರಿಗಣಿಸಲಾಗಿದ್ದು, ಒಟ್ಟು 924 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದನ್ನು ಪತ್ತೆ ಹಚ್ಚಲಾಗಿದೆ.

ಶಾಲೆಯಿಂದ ದೂರವಿರುವ 15ರಿಂದ 16 ವರ್ಷದೊಳಗಿನ 825 ಮಕ್ಕಳಲ್ಲಿ 779 ಮಕ್ಕಳು ವಯೋಮಾನ ಮೀರಿದವರು ಎಂದು ಪರಿಗಣಿಸಲಾಗಿದೆ. 41 ಮಕ್ಕಳು ಪೋಷಕರೊಂದಿಗೆ ವಲಸೆ ಹೋಗಿರುವುದು ಪತ್ತೆಯಾಗಿದೆ. ಮೂವರು ಮಕ್ಕಳು ಮೃತಪಟ್ಟಿರುವುದು ಪತ್ತೆಯಾಗಿದ್ದರೆ, ಕಾಯಿಲೆಯಿಂದ 1 ಹಾಗೂ ಮುಕ್ತ ಶಾಲೆಗೆ ಒಂದು ಮಗು ದಾಖಲಾಗಿರುವುದು ಗೊತ್ತಾಗಿದೆ.

ಯಾವ ತಾಲೂಕಲ್ಲಿ ಎಷ್ಟು?: ಬ್ಯಾಡಗಿ ತಾಲೂಕಿನಲ್ಲಿ 70 ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಹಾನಗಲ್ಲ ತಾಲೂಕಿನ 189 ಮಕ್ಕಳು, ಹಾವೇರಿ 165, ಹಿರೇಕೆರೂರು 81, ರಾಣಿಬೆನ್ನೂರು 87, ಸವಣೂರು ತಾಲೂಕಿನಲ್ಲಿ 192, ಶಿಗ್ಗಾಂವಿ ತಾಲೂಕಿನಲ್ಲಿ 140 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಈ ಎಲ್ಲ ಮಕ್ಕಳು ಸದ್ಯ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ವಲಸೆ ಹೋಗಿರುವುದನ್ನು ಆಯಾ ಗ್ರಾಮದಲ್ಲಿ ಪಂಚರ ಸಮ್ಮುಖದಲ್ಲಿ ದೃಢಪಡಿಸಲಾಗಿದೆ. ಎಲ್ಲ ಮಕ್ಕಳ ಮಾಹಿತಿಯನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಆ ಮೂಲಕ ಪ್ರತಿ ಮಗುವಿನ ಬಗ್ಗೆಯೂ ಗಮನ ನೀಡಲಾಗಿದೆ.

ನ.8ರಂದು ಬೃಹತ್ ಜನಸಂಕಲ್ಪ ಸಮಾವೇಶಕ್ಕೆ ಬಿಜೆಪಿ ಸಜ್ಜು: ತವರು ಜಿಲ್ಲೆಯಲ್ಲಿ ರಣಕಹಳೆ ಮೊಳಗಿಸಲು ಸಜ್ಜಾದ ಸಿಎಂ

6ರಿಂದ 14ರ ವಯೋಮಾನದ 436 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಸಮೀಕ್ಷೆ ವೇಳೆ ಎಲ್ಲ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, 337 ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಶಿಕ್ಷಕರು, ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇನ್ನುಳಿದ 99 ಮಕ್ಕಳನ್ನು ಕೂಡ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ.

ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರ್ವೇ ಮಾಡಿ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಅವರೆಲ್ಲರನ್ನೂ ಮರಳಿ ಶಾಲೆಗೆ ದಾಖಲಿಸುವ ಪ್ರಯತ್ನ ನಡೆದಿದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದೆ.
-ಜಗದೀಶ್ವರ್‌, ಡಿಡಿಪಿಐ ಹಾವೇರಿ

click me!