ಹೊಸದಾಗಿ 800 ಕೆಪಿಎಸ್‌ ಶಾಲೆ ಸೃಷ್ಟಿ: ಸಚಿವ ಮಧು ಬಂಗಾರಪ್ಪ

Published : Oct 16, 2025, 07:39 AM IST
Madhu Bangarappa

ಸಾರಾಂಶ

ಮುಂದಿನ ಶೈಕ್ಷಣಿಕ ಸಾಲಿನಿಂದ ಮತ್ತೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು, ಇವುಗಳಲ್ಲಿ 500 ಶಾಲೆಗಳಿಗೆ ಪಟ್ಟಿ ಸಹಿತ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರು (ಅ.16): ಮುಂದಿನ ಶೈಕ್ಷಣಿಕ ಸಾಲಿನಿಂದ ಮತ್ತೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು, ಇವುಗಳಲ್ಲಿ 500 ಶಾಲೆಗಳಿಗೆ ಬುಧವಾರ ಪಟ್ಟಿ ಸಹಿತ ಅಧಿಸೂಚನೆ ಹೊರಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಪ್ರತಿ ಶಾಲೆಗೆ 4 ಕೋಟಿ ರು.ನಂತೆ ಒಟ್ಟಾರೆ 3 ಸಾವಿರ ಕೋಟಿ ರು.ಗಳನ್ನು ಸರ್ಕಾರದಿಂದ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದಲ್ಲಿ 500 ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗುವುದು. ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯಿಂದ ಆ ಭಾಗದ 200 ಶಾಲೆಗಳು, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ 10 ತಾಲೂಕುಗಳಲ್ಲಿ 100 ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗುವುದು ಎಂದರು.

ಈಗಾಗಲೇ ರಾಜ್ಯದಲ್ಲಿ 308 ಕೆಪಿಎಸ್‌ ಶಾಲೆಗಳಿವೆ. ಹಂತ ಹಂತವಾಗಿ ಪ್ರತಿ ಗ್ರಾಪಂಗೊಂದು ಕೆಪಿಎಸ್‌ ಶಾಲೆ ಮಾಡಿ ಆ ಶಾಲೆಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಕಡೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ವರ್ಷ 800 ಕೆಪಿಎಸ್‌ ಶಾಲೆಗಳನ್ನು ಆರಂಭಿಸಲಾಗುವುದು. ಈ ಶಾಲೆಗಳ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಕಡಿಮೆ ಮಕ್ಕಳಿರುವ ಶಾಲೆಗಳ ಪೋಷಕರು, ಮಕ್ಕಳು ಮತ್ತು ಎಸ್‌ಡಿಎಂಸಿಗಳ ಒಪ್ಪಿಗೆ ನೀಡಿದರೆ ವಿಲೀನ ಮಾಡುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.

ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ರಚಿಸಲಾಗುತ್ತದೆ. ಈ ಯೋಜನೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ಧತೆ ಹೊಂದಿದೆ. ಕೆಪಿಎಸ್‌ ಶಾಲೆಗಳೂ ಸೇರಿ ಎಲ್ಲ ಸರ್ಕಾರಿ ಶಾಲೆಗಳಿಗೂ ಇನ್ನು ಮುಂದೆ ನವೆಂಬರ್‌ ತಿಂಗಳಿಂದಲೇ ದಾಖಲಾತಿ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.

ಮಕ್ಕಳಿಗೆ ಉಚಿತ ಸಾರಿಗೆ-ಕಂಪ್ಯೂಟರ್‌ ತರಬೇತಿ

ಕೆಪಿಎಸ್ ಶಾಲೆಗಳಿಗೆ 5 ಕಿ.ಮೀ. ವ್ಯಾಪ್ತಿಯ ಊರುಗಳಿಂದ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಕನಿಷ್ಠ 1200 ರಿಂದ ಗರಿಷ್ಠ 1800 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಎಲ್‌ಕೆಜಿ, ಯುಕೆಜಿಗೆ ಕನಿಷ್ಠ 40ರಿಂದ 50 ಮಕ್ಕಳು, ಉಳಿದ ತರಗತಿಗಳಿಗೆ ಕನಿಷ್ಠ 50ರಿಂದ 60 ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ದ್ವಿಭಾಷಾ ಮಾಧ್ಯಮ ಬೋಧನೆ ಇರುತ್ತದೆ. ಜೊತೆಗೆ 1ನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್‌ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

PREV
Read more Articles on
click me!

Recommended Stories

IIT Delhi ವಿದ್ಯಾರ್ಥಿ ಸಾವು ಪ್ರಕರಣ: ನಮ್ಮ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ! JNU ಪ್ರಭಾವ ವಿರೋಧಿಸಿ ವಿದ್ಯಾರ್ಥಿಗಳ ಆಕ್ರೋಶ
UPSC interview: ಎತ್ತರ ಇರೋರು ಹೆಚ್ಚು ಊಟ ಮಾಡ್ತಾರಾ? ಈ ವಿಚಿತ್ರ ಪ್ರಶ್ನೆಗೆ ಜಾಣ್ಮೆಯ ಉತ್ತರ