Polytechnic Diploma Topper: ರಾಜ್ಯದ ಹಿರಿಯ ವಿದ್ಯಾರ್ಥಿ ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.
ಶಿರಸಿ (ಅ. 31): ರಾಜ್ಯದ ಹಿರಿಯ ವಿದ್ಯಾರ್ಥಿ ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ. ಇಲ್ಲಿನ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ (RN Shetty Polytechnic) ಕಾಲೇಜಿನ ವಿದ್ಯಾರ್ಥಿಯಾಗಿದ್ದ 70ರ ಹರೆಯದ ನಾರಾಯಣ ಎಸ್.ಭಟ್ಟ (Narayana S Bhat) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಿವೃತ್ತ ಜೀವನವನ್ನು ಕಾಲಹರಣಕ್ಕೆ ಬಳಸುವ ಬದಲು ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಇಲ್ಲಿನ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆದಿದ್ದ ನಾರಾಯಣ ಭಟ್, ಇಳಿವಯಸ್ಸಿನಲ್ಲೂ ಆಸಕ್ತಿಯುತವಾಗಿ ಶಿಕ್ಷಣ ಕಲಿತಿದ್ದಾರೆ.
ಡಿಪ್ಲೊಮಾ ಪರೀಕ್ಷೆಯ ಫಲಿತಾಂಶವನ್ನು ರಾಜ್ಯ ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು ಶೇ.94ರಷ್ಟು ಅಂಕ ಗಳಿಕೆಯೊಂದಿಗೆ ಸಿವಿಲ್ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.
ಮೂಲತಃ ಸುಗಾವಿಯವರಾದ ನಾರಾಯಣ ಭಟ್, ಈಗ ಶಿರಸಿಯಲ್ಲಿ ನೆಲೆಸಿದ್ದಾರೆ. 1973ರಲ್ಲೇ ಮೆಕ್ಯಾನಿಕಲ್ ಡಿಪ್ಲೊಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಬಳಿಕ ಕಾರವಾರ, ಗುಜರಾತ್ ಸೇರಿದಂತೆ ವಿವಿಧೆಡೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. 2013ರಲ್ಲಿ ನಿವೃತ್ತಿ ಪಡೆದು ಶಿರಸಿಗೆ ಮರಳಿದ್ದ ಅವರು ಪುನಃ ಡಿಪ್ಲೊಮಾ ಕಲಿಕೆಗೆ ಆಸಕ್ತಿ ತೋರಿದ್ದರು. ಅವರಿಗೆ ಪ್ರವೇಶಾತಿ ನೀಡಲು ತಾಂತ್ರಿಕ ಅಡಚಣೆ ಎದುರಾಗಿತ್ತು. ಅಂತಿಮವಾಗಿ 2019ರಲ್ಲಿ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಡಿಪ್ಲೊಮಾ ವಿಭಾಗಕ್ಕೆ ಪ್ರವೇಶ ದೊರೆತಿತ್ತು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ತಯಾರಿ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ನಾರಾಯಣ ಅವರು ಪ್ರತಿ ತರಗತಿಗೆ ಹಾಜರಾಗುತ್ತಿದ್ದರು. ಓದು, ಪ್ರಾಯೋಗಿಕ ಚಟುವಟಿಕೆಯಲ್ಲೂ ಮುಂದಿದ್ದರು. ಪ್ರತಿ ಸೆಮಿಸ್ಟರ್ ನಲ್ಲೂ ಅವರು ಶೇ.90ಕ್ಕಿಂತ ಹೆಚ್ಚು ಅಂಕ ಸಾಧನೆ ಮಾಡುತ್ತಿದ್ದರು’ಎನ್ನುತ್ತಾರೆ ಪ್ರಾಧ್ಯಾಪಕ ಸಂಜಯ ಕೂರ್ಸೆ. ಪ್ರಸಕ್ತ ನಾರಾಯಣ ಭಟ್ ಅವರ ಮಕ್ಕಳು ಇಂಜಿನಿರ್ ಗಳಾಗಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.