ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ

By Suvarna News  |  First Published Sep 4, 2021, 8:12 PM IST

* ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ
* ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ
* ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ.ಮೌನೇಶ್


ಬೆಂಗಳೂರು, (ಸೆ.04): ಪ್ರತಿಭೆಯಿಂದಲೇ ತನ್ನ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ʼಗೆ ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ.ಮೌನೇಶ್ʼಗೆ ಡಿಪ್ಲೊಮಾ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭರವಸೆ ನೀಡಿದ್ದಾರೆ. 

ಶನಿವಾರದಂದು ಸಚಿವರು ಮೌನೇಶ್ ಮತ್ತವರ ಪೋಷಕರಿಗೆ ಕರೆ ಮಾಡಿ ಮಾತನಾಡಿದರಲ್ಲದೆ, 10ನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಯನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಮುಂದಿನ 3 ವರ್ಷಗಳ ವಿದ್ಯಾಭ್ಯಾಸವನ್ನು ಸರಕಾರ ಸಂಪೂರ್ಣ ಉಚಿತವಾಗಿ ನೀಡಲಿದೆ ಎಂದು ಭರವಸೆ ನೀಡಿದರು. 

Tap to resize

Latest Videos

ಪಾಲಿಟೆಕ್ನಿಕ್ ಪ್ರವೇಶಾರ್ಥಿಗಳಿಗೆ ಗುಡ್ ನ್ಯೂಸ್, ದಿನಾಂಕ ವಿಸ್ತರಣೆ

ಇದೇ ವೇಳೆ ಮೌನೇಶ್ ಪೋಷಕರ ಜತೆಯೂ ಮಾತನಾಡಿದ ಸಚಿವರು, ನಿಮ್ಮ ಪುತ್ರನಿಗೆ ಉಚಿತ ಶಿಕ್ಷಣ ನೀಡಲಾಗುವುದು. ಯಾವುದೇ ಚಿಂತೆ ನಿಮಗೆ ಬೇಡ. ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಲಿದೆ. ತದ ನಂತರ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಬೇಕಾದರೂ ಸರಕಾರ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. ವಿದ್ಯಾರ್ಥಿ ಮೌನೇಶ್ ಹಾಗೂ ಅವರ ಪೋಷಕರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. 

ಪ್ರಾಂಶುಪಾಲರ ಕಾರ್ಯಕ್ಕೆ ಮೆಚ್ಚುಗೆ: 
ವಿದ್ಯಾರ್ಥಿಯ ಮನೆ ಬಾಗಿಲಿಗೇ ತೆರಳಿ ಪ್ರವೇಶಾತಿ ನೀಡಿದ ಕೂಡ್ಲಿಗಿಯ ಸರಕಾರಿ ಪಾಲಿಟೆಕ್ನಿಕ್ʼನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಯನ್ನು ಇದೇ ವೇಳೆ ಸಚಿವ ಅಶ್ವತ್ಥನಾರಾಯಣ ಅವರು ಮನಸಾರೆ ಶ್ಲಾಘಿಸಿದರು. ಪ್ರಾಂಶುಪಾಲ ಎಸ್.ಮಲ್ಲಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ ಸಚಿವರು, “ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಆ ವಿದ್ಯಾರ್ಥಿಗೆ ತಗುಲುವ ಎಲ್ಲ ವೆಚ್ಚವನ್ನೂ ಸರಕಾರವೇ ಭರಿಸಲಿದೆ. ನಿಮ್ಮದೇ ವೆಚ್ಚದಲ್ಲಿ ಬಡ ವಿದ್ಯಾರ್ಥಿಯೊಬ್ಬರನ್ನು ದತ್ತು ಪಡೆದು, ಅವರ ಮನೆ ಬಾಗಿಲಿಗೇ ಹೋಗಿ ದಾಖಲು ಮಾಡಿಕೊಂಡಿರುವ ಕ್ರಮ ಮಾದರಿಯಾದದ್ದುʼ ಎಂದು ಹೇಳಿದರು. 

ಒಳ್ಳೆಯ ಉಪ ಕ್ರಮ ಎಂದ ಸಚಿವರು: 
ನಂತರ ಈ ಬಗ್ಗೆ ಮಾತನಾಡಿದ ಸಚಿವರು, “ಇದೊಂದು ಅತ್ಯುತ್ತಮ ಪ್ರಯತ್ನ. ಆ ಪಾಲಿಟೆಕ್ನಿಕ್ʼನ ಪ್ರಾಚಾರ್ಯರು, ಬೋಧಕರ ಬದ್ಧತೆ ನನ್ನ ಹೃದಯ ಗೆದ್ದಿದೆ. ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೇ ತಲುಪಿಸಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಹಾಗೂ ಶೈಕ್ಷಣಿಕ ಸಮಾನತೆಯನ್ನೂ ಇವರು ಆರಂಭದಲ್ಲೇ ಸಾಕಾರ ಮಾಡಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು. 

ಈ ವರ್ಷದಿಂದ ಹೊಸದಾಗಿ ಆರಂಭ ಮಾಡಲಾದ ಡಿಪ್ಲೊಮಾ ಕೋರ್ಸಗಳಲ್ಲಿ ಒಂದಾದ ʼಸೈಬರ್ ಫಿಸಿಕಲ್ ಸಿಸ್ಟಮ್ಸ್ ಅಂಡ್ ಸೆಕ್ಯೂರಿಟಿʼ ವಿಭಾಗದ ಕೊನೆಯ ಒಂದು ಸೀಟು ಉಳಿದಿತ್ತು. ಆ ಸೀಟಿಗೆ ಬಹಳ ಬೇಡಿಕೆ ಇದ್ದರೂ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಎಸ್.ಮಲ್ಲಪ್ಪ, ಇತರೆ ಬೋಧಕರು ಹಾಗೂ ಸಿಬ್ಬಂದಿ ತಾಲೂಕಿನ ಕುಡಿತಿನಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುವ ಅಲೆಮಾರಿ ಜನಾಂಗದ ಬಡ ಪ್ರತಿಭಾವಂತ ವಿದ್ಯಾರ್ಥಿ ಎಂ.ಮೌನೇಶ್ʼಗೆ ನೀಡಿದ್ದಾರೆ. ಇದು ಒಳ್ಳೆಯ ಕ್ರಮ ಎಂದು ಸಚಿವರು ತಿಳಿಸಿದರು. 

ಪ್ರಾಂಶುಪಾಲರು ಏನಂದರು? 
ವಿದ್ಯಾರ್ಥಿ ಎಂ.ಮೌನೇಶ್ʼಗೆ ಮೂರು ವರ್ಷದಲ್ಲಿ ಆಗುವ ಎಲ್ಲ ಖರ್ಚು-ವೆಚ್ಚವನ್ನು ನಾನೇ ಭರಿಸುವುದಾಗಿ ಹೇಳಿದ್ದೆ. ಬಳಿಕ ಮಾನ್ಯ ಸಚಿವರು ಸರಕಾರವೇ ಎಲ್ಲ ವೆಚ್ಚ ಭರಿಸಲಿದೆ ಎಂದು ಘೋಷಣೆ ಮಾಡಿದರು. ಹಾಗೆಯೇ; ಡಿಪ್ಲೊಮಾದಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಜಾಗತಿಕ ಮಟ್ಟಕ್ಕೆ ಸಮನಾದ ಪಠ್ಯಕ್ರಮ, ಡಿಜಿಟಲ್ ಶಿಕ್ಷಣ, ಕಲಿಕಾ ನಿರ್ವಹಣಾ ವ್ಯವಸ್ಥೆ (LMS), ಸ್ಮಾರ್ಟ್ ಕ್ಲಾಸ್ ರೂಂ ಹಾಗೂ ಉಚಿತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಈ ವಿದ್ಯಾರ್ಥಿಗೆ ಒದಗಿಸಲಾಗುವುದು ಎಂದು ಪ್ರಾಂಶುಪಾಲ ಎಸ್. ಮಲ್ಲಪ್ಪ ತಿಳಿಸಿದರು. 

ಮೌನೇಶ್ ಬಹಳ ಬಡತನದಲ್ಲಿದ್ದಾನೆ. ಅವರು ಒಂದು ಕೊಳಗೇರಿಯಲ್ಲಿ ವಾಸ ಮಾಡುತ್ತಿದ್ದು, ಅಲ್ಲಿ ಸುಮಾರು 150 ಮನೆಗಳಿವೆ. ನಾನು, ನಮ್ಮ ಬೋಧಕರು ಮತ್ತು ಸಿಬ್ಬಂದಿ ಜತೆ ತೆರಳಿ ಅಲ್ಲಿನ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ನಮಗೆ ಸರಕಾರದಿಂದಲೂ ಉತ್ತಮ ಪ್ರೋತ್ಸಾಹವಿದೆ. ಪಾಲಿಟೆಕ್ನಿಕ್ʼನಲ್ಲಿ ಕಲಿಯಲು ಸಾಕಷ್ಟು ಸೌಲಭ್ಯಗಳಿವೆ. ಇದೆಲ್ಲವನ್ನೂ ನಾನು ಜನರಿಗೆ ವಿವರಿಸಿ ಹೇಳಿದ್ದೇನೆ. ಎಲ್ಲರಿಗೂ ಮೌನೇಶ್ ದಾಖಲಾತಿ ಮತ್ತು ದತ್ತು ಸ್ವೀಕಾರ ವಿಷಯ ಪ್ರೇರಣೆ ನೀಡಿದೆ ಎಂದು ಮಲ್ಲಪ್ಪ ಹೇಳಿದರು. 

ಮುಖ್ಯವಾಗಿ ನಮ್ಮ ಪಾಲಿಟೆಕ್ನಿಕ್ʼನ ಸಹೋದ್ಯೋಗಿಗಳು ಮುಂದಿನ ವರ್ಷದಿಂದ ತಲಾ ಒಬ್ಬೊಬ್ಬ ಬಡ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ಓದಿಸುವ ಸಂಕಲ್ಪ ಮಾಡಿದ್ದಾರೆ. ಇದು ನನಗೆ ತುಂಬಾ ಸಂತೋಷ ಉಂಟು ಮಾಡಿದೆ. ಪಾಲಿಟೆಕ್ನಿಕ್ʼನಲ್ಲಿ ಮೂರು ವರ್ಷ ವ್ಯಾಸಂಗ ಮುಗಿದ ಮೇಲೆ ಅವರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಅವಖಾಶವೂ ಇದೆ. ಅಗತ್ಯಬಿದ್ದರೆ ಉನ್ನತ ಓದಿಗೂ ಹೋಗಬಹುದು. ಸರಕಾರದ ಸೌಲಭ್ಯಗಳ ಬಗ್ಗೆ ನಾವು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

click me!