ರೈತರ ಮಕ್ಕಳ ಶಿಷ್ಯ ವೇತನಕ್ಕೆ ಇಂದು ಚಾಲನೆ : ಯಾರಿಗೆ ಎಷ್ಟು ?

By Kannadaprabha News  |  First Published Sep 5, 2021, 7:57 AM IST
  •   ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ  
  • ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್‌ ಯೋಜನೆ ಘೋಷಣೆ

ಬೆಂಗಳೂರು (ಸೆ.05):  ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ನಡೆಸಿದ್ದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ ಯೋಜನೆಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ.

ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್‌ಶಿಪ್‌ ಯೋಜನೆ ಘೋಷಿಸಿ 1 ಸಾವಿರ ಕೋಟಿ ರು. ಮೀಸಲಿಡಲು ನಿರ್ಧರಿಸಲಾಗಿತ್ತು. ಈ ಸಂಬಂಧ ಇತ್ತೀಚೆಗೆ ಅಧಿಕೃತ ಆದೇಶ ಹೊರಡಿಸಲಾಗಿತ್ತು.

Tap to resize

Latest Videos

ಭಾನುವಾರ ವಿಧಾನಸೌಧದಲ್ಲಿ ಅಧಿಕೃತವಾಗಿ ಯೋಜನೆಗೆ ಚಾಲನೆ ದೊರೆಯಲಿದ್ದು, ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಭಾಗವಹಿಸಲಿದ್ದಾರೆ.

ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ : ಷರತ್ತುಗಳು ಏನು?

ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ನಂತರ ಕರ್ನಾಟಕದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದಿಂದ ಸ್ಕಾಲರ್‌ಶಿಪ್‌ ಯೋಜನೆ ಜಾರಿಗೆ ಬರಲಿದೆ.

ಯಾರು ಅರ್ಹರು?:

ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ, ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿರುವ ವ್ಯಕ್ತಿಯನ್ನು ರೈತ ಎಂದು ಪರಿಗಣಿಸಲಾಗುವುದು. ಅವರ ಕಾನೂನು ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಸಂಬಂಧಪಟ್ಟರೈತರ ಮಕ್ಕಳು ಅರ್ಹರು. ಯಾವುದೇ ಮಕ್ಕಳಿಗೆ ಪೋಷಕರು ಇಲ್ಲದಿದ್ದರೆ ತಮ್ಮ ಹೆಸರಿನಲ್ಲೇ ಜಮೀನು ಹೊಂದಿರಬೇಕು.

ಷರತ್ತುಗಳು:

ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಅರ್ಹರಿರುತ್ತಾರೆ. ಆದಾಗ್ಯೂ ಮೆರಿಟ್‌, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರಾರ‍ಯಂಕ್‌ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ವಿದ್ಯಾರ್ಥಿವೇತನ, ಪ್ರಶಸ್ತಿ ಹಣಗಳನ್ನು (ರಿವಾರ್ಡ್‌) ರೈತರ ಮಕ್ಕಳು ಪಡೆದಿದ್ದರೂ ಈ ವಿದ್ಯಾರ್ಥಿವೇತನ ಪಡೆಯಲೂ ಅರ್ಹರಿರುತ್ತಾರೆ.

ಶಿಷ್ಯ ವೇತನವು ಶಿಕ್ಷಣದ ಯಾವುದೇ ಕೋರ್ಸ್‌ನ ಸೆಮಿಸ್ಟರ್‌, ಶೈಕ್ಷಣಿಕ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ಸೆಮಿಸ್ಟರ್‌ನಲ್ಲಿ ಫೇಲ್‌ ಆಗಿ ಮತ್ತೆ ಪುನರಾವರ್ತನೆಯಾಗುವ ಸಮಯದಲ್ಲಿ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ವಿದ್ಯಾರ್ಥಿ ವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ಮಾತ್ರ ನೀಡಲಾಗುವುದು. ಉದಾ: ಒಂದು ಸ್ನಾತಕೋತ್ತರ ಪದವಿ ಪೂರೈಸಿ ಬಳಿಕ ಮತ್ತೊಂದು ಸ್ನಾತಕೋತ್ತರ ಪದವಿ ತೆಗೆದುಕೊಂಡರೆ ಎರಡನೇ ಬಾರಿ ವಿದ್ಯಾರ್ಥಿ ವೇತನ ನೀಡಲಾಗುವುದಿಲ್ಲ ಎಂದು ಕೃಷಿ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

ಯಾರಿಗೆ, ಎಷ್ಟುಸ್ಕಾಲರ್‌ಶಿಪ್‌?

ಕೋರ್ಸ್‌- ವಿದ್ಯಾರ್ಥಿಗಳು- ವಿದ್ಯಾರ್ಥಿನಿಯರು

ಪಿಯುಸಿ, ಐಟಿಐ, ಡಿಪ್ಲೊಮಾ- 2,500 ರು - 3000 ರು.

ಬಿಎ,ಬಿಕಾಂ, ಬಿಎಸ್ಸಿಯಂತಹ ಪದವಿ- 5,000 ರು.- 5,500 ರು.

ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿಫಾಮ್‌ರ್‍, ನರ್ಸಿಂಗ್‌ ಇತ್ಯಾದಿ ವೃತ್ತಿಪರ ಕೋರ್ಸ್‌- 7,500 ರು.- 8000 ರು.

ಎಂಬಿಬಿಎಸ್‌, ಬಿಇ, ಬಿಟೆಕ್‌ ಮತ್ತು ಸ್ನಾತಕೋತ್ತರ ಕೋರ್ಸ್‌- 10,000 ರು.- 11,000 ರು.

click me!